ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಅಜೇಯ ಸಾಧನೆ ವಿಯಾನಿ ರಾಜ್ಯ ಚಾಂಪಿಯನ್‌

Published 30 ಮೇ 2023, 22:01 IST
Last Updated 30 ಮೇ 2023, 22:01 IST
ಅಕ್ಷರ ಗಾತ್ರ

ಬೆಂಗಳೂರು: ಅಜೇಯ ಸಾಧನೆ ಪ್ರದರ್ಶಿಸಿದ ಮಂಗಳೂರಿನ ವಿಯಾನಿ ಅಂಟಾನಿಯೊ ಡಿಕುನ್ಹ, ಮಂಗಳವಾರ ಮುಕ್ತಾಯಗೊಂಡ ಅಕ್ಷಯಕಲ್ಪ ಆರ್ಗ್ಯಾನಿಕ್‌ ರಾಜ್ಯ ಸೀನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಅಗ್ರ ಶ್ರೇಯಾಂಕದ ಈ ಆಟಗಾರ 9 ಸುತ್ತುಗಳಿಂದ ಎಂಟೂವರೆ ಅಂಕ ಗಳಿಸಿದರು.

ಇಂಟರ್‌ನ್ಯಾಷನಲ್‌ ಮಾಸ್ಟರ್‌ ವಿಯಾನಿ ಈ ಪ್ರಶಸ್ತಿ ಗೆಲ್ಲುತ್ತಿರುವುದು ಎರಡನೇ ಸಲ. 2017ರಲ್ಲೂ ರಾಜ್ಯ ಚಾಂಪಿಯನ್‌ ಆಗಿದ್ದ ವಿಯಾನಿ ಟ್ರೋಫಿಯ ಜೊತೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಪಡೆದರು. ಮೊದಲ ಎಂಟೂ ಸುತ್ತುಗಳಲ್ಲಿ ಗೆಲುವು ದಾಖಲಿಸಿದ್ದ ಅವರು ಅಂತಿಮ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಡಿ. ಯಶಸ್‌ ಜೊತೆ ಪಾಯಿಂಟ್‌ ಹಂಚಿಕೊಂಡರು. ಏಳನೇ ಸುತ್ತಿನಲ್ಲಿ ಮಂಗಳೂರಿನವರೇ ಆದ ಶರಣ್‌ ರಾವ್ ಅವರನ್ನು ಸೋಲಿಸಿದ್ದರು.

ಕೋಣನಕುಂಟೆಯ ಫೋರಂ ಮಾಲ್‌ನಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನಕ್ಕಾಗಿ ನಾಲ್ಕು ಮಂದಿ ಆಟಗಾರರು– ಬೆಂಗಳೂರಿನ ಯಶಸ್‌, ಮೈಸೂರಿನ ಬಾಲಕಿಶನ್‌ ಎ., ಎಂ.ಎಸ್‌.ತೇಜುಮಾರ್‌ ಮತ್ತು ಚಿನ್ಮಯ್‌ ಕೌಶಿಕ್‌ ತಲಾ ಎಂಟು ಅಂಕ ಸಂಗ್ರಹಿಸಿದ್ದರು. ಆದರೆ ಟೈಬ್ರೇಕ್‌ ಆಧಾರದ ಮೇಲೆ ಕ್ರಮವಾಗಿ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನ ಪಡೆದರು.

ಮೊದಲ ನಾಲ್ಕು ಸ್ಥಾನ ಪಡೆದ ಆಟಗಾರರು, ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವರು.

9ನೇ ಸುತ್ತಿನ ಇತರ ಪಂದ್ಯಗಳಲ್ಲಿ ಗ್ರ್ಯಾಂಡ್‌ಮಾಸ್ಟರ್‌ ತೇಜಕುಮಾರ್‌ ಎರಡನೇ ಬೋರ್ಡ್‌ನಲ್ಲಿ ಆಗಸ್ಟಿನ್‌ (7) ಅವರನ್ನು, ಮೈಸೂರಿನ ಬಾಲಕಿಶನ್‌ ಮೂರನೇ ಬೋರ್ಡ್‌ನಲ್ಲಿ ಕಳೆದ ವರ್ಷದ  ಚಾಂಪಿಯನ್‌ ಪ್ರಜ್ವಲ್‌ ಶೇಟ್‌ (7) ಅವರನ್ನು, ಚಿನ್ಮಯ್‌ ಕೌಶಿಕ್‌, ಸಾತ್ವಿಕ್‌ ಅಡಿಗ (6.5) ಅವರನ್ನು ಸೋಲಿಸಿದರು. 2,3,4 ಮತ್ತು ಐದನೇ ಬೋರ್ಡ್‌ನಲ್ಲಿ ಬಿಳಿ ಕಾಯಿಗಳಲ್ಲಿ ಆಡಿದವರೇ ಜಯಗಳಿಸಿದರು.

ಸವಾಲಿನಿಂದ ಕೂಡಿತ್ತು: ‘ಈ ಬಾರಿ ಕೆಳಕ್ರಮಾಂಕದ ಆಟಗಾರರೂ ಸಾಕಷ್ಟು ಸಿದ್ಧತೆ ನಡೆಸಿಯೇ ಈ ಚಾಂಪಿಯನ್‌ಷಿಪ್‌ಗೆ ಬಂದಿದ್ದರು. ಪ್ರತಿಯೊಂದು ಸುತ್ತೂ ಸವಾಲಿನಿಂದ ಕೂಡಿತ್ತು. ಎಂಟನೇ ಸುತ್ತು ಗೆದ್ದ ನಂತರವಷ್ಟೇ ಟ್ರೋಫಿ ಗೆಲ್ಲುವ ವಿಶ್ವಾಸ ಮೂಡಿತು’ ಎಂದು ವಿಯಾನಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT