ಪ್ಯಾರಿಸ್: ಭಾರತದ ಸುಹಾಸ್ ಯತಿರಾಜ್, ಸುಕಾಂತ್ ಕದಂ ಮತ್ತು ತರುಣ್ ಅವರು ಪ್ಯಾರಾಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನ (ಎಸ್‌ಎಲ್ 4) ಗುಂಪು ಹಂತದ ಪಂದ್ಯಗಳಲ್ಲಿ ಶುಭಾರಂಭ ಮಾಡಿದರು.
ಟೋಕಿಯೊ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಕನ್ನಡಿಗ ಸುಹಾಸ್ ಅವರು ಗುರುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ 21-7, 21-5ರಿಂದ ಇಂಡೊನೇಷ್ಯಾದ ಹಿಕ್ಮತ್ ರಾಮದಾನಿ ಅವರನ್ನು ಸೋಲಿಸಿದರು. ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ 41 ವರ್ಷ ವಯಸ್ಸಿನ ಸುಹಾಸ್ ಕೇವಲ 22 ನಿಮಿಷದಲ್ಲಿ ನಿರಾಯಾಸ ಗೆಲುವನ್ನು ತನ್ನದಾಗಿಸಿಕೊಂಡರು. ಸುಹಾಸ್, ಹಾಸನದ ಅರಸೀಕೆರೆ ಮೂಲದವರು.
31 ವರ್ಷ ವಯಸ್ಸಿನ ಸುಕಾಂತ್ ‘ಬಿ’ ಗುಂಪಿನ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 17-21, 21-15, 22-20ರಿಂದ ಮಲೇಷ್ಯಾದ ಮೊಹಮ್ಮದ್ ಅಮೀನ್ ಬುರ್ಹಾನುದ್ದೀನ್ ವಿರುದ್ಧ ಗೆಲುವು ಸಾಧಿಸಿದರು.
ಎರಡನೇ ಪ್ಯಾರಾಲಿಂಪಿಕ್ಸ್‌ನಲ್ಲಿ ಆಡುತ್ತಿರುವ ತರುಣ್ ‘ಡಿ’ ಗುಂಪಿನ ಪಂದ್ಯದಲ್ಲಿ 21-17 21-19 ರಿಂದ ಬ್ರೆಜಿಲ್‌ನ ಒಲಿವೇರಾ ರೊಜೆರಿಯೊ ಜೂನಿಯರ್ ಕ್ಸೇವಿಯರ್ ಅವರನ್ನು ಸೋಲಿಸಿದರು.
ಮಹಿಳೆಯರಿಗೆ ನಿರಾಸೆ: ಭಾರತದ ಮನ್‌ದೀಪ್ ಕೌರ್ ಮತ್ತು ಮಾನಸಿ ಜೋಶಿ ಅವರು ಮಹಿಳೆಯರ ಸಿಂಗಲ್ಸ್‌ನ (ಎಸ್‌ಎಲ್3) ಗುಂಪು ಹಂತದ ತಮ್ಮ ಪಂದ್ಯಗಳಲ್ಲಿ ನಿರಾಸೆ ಮೂಡಿಸಿದರು.
2019ರ ವಿಶ್ವ ಚಾಂಪಿಯನ್ ಮಾನಸಿ ‘ಎ’ ಗುಂಪಿನ ಪಂದ್ಯದಲ್ಲಿ 21-16, 13-21, 18-21ರಿಂದ ಇಂಡೊನೇಷ್ಯಾದ ಕೊನಿತಾಹ್ ಇಖ್ತಿಯಾರ್ ಸೈಕುರೋಹ್ ಅವರಿಗೆ ಶರಣಾದರೆ, ಮನ್‌ದೀಪ್ ’ಬಿ’ ಗುಂಪಿನ ಪಂದ್ಯದಲ್ಲಿ 8-21 14-21ರಿಂದ ನೈಜೀರಿಯಾದ ಮರಿಯಮ್ ಎನಿಯೊಲಾ ಬೊಲಾಜಿ ಅವರಿಗೆ ಸೋತರು.
ನಿತೇಶ್– ತುಳಸಿಮತಿಗೆ ಗೆಲುವು: ಭಾರತದ ನಿತೇಶ್ ಕುಮಾರ್ ಮತ್ತು ತುಳಸಿಮತಿ ಮುರುಗೇಶನ್ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್‌ನ (ಎಸ್‌ಎಲ್ 3-ಎಸ್‌ಯು5) ಗುಂಪು ಹಂತದ ಪಂದ್ಯದಲ್ಲಿ ಸ್ವದೇಶದ ಸುಹಾಸ್ ಯತಿರಾಜ್ ಮತ್ತು ಪಾಲಕ್ ಕೊಹ್ಲಿ ಅವರನ್ನು ಮಣಿಸಿ ಶುಭಾರಂಭ ಮಾಡಿದರು.
ಗುರುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ನಿತೇಶ್– ತುಳಸಿಮತಿ ಜೋಡಿಯು 21-14, 21-17ರಿಂದ ಗೆಲುವು ಸಾಧಿಸಿತು. ಕೇವಲ 31 ನಿಮಿಷಗಳ ಹೋರಾಟ ನಡೆಸಿ ನೇರ ಗೇಮ್‌ಗಳ ಜಯವನ್ನು ತಮ್ಮದಾಗಿಸಿಕೊಂಡರು.
ಹರಿಯಾಣದ 29 ವರ್ಷ ವಯಸ್ಸಿನ ನಿತೇಶ್ ಮತ್ತು ತಮಿಳುನಾಡಿನ 22 ವರ್ಷ ವಯಸ್ಸಿನ ತುಳಸಿಮತಿ ಅವರು ಹಾಂಗ್‌ಝೌ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲೂ ಮಿಶ್ರ ಡಬಲ್ಸ್‌ನಲ್ಲಿ ಕಂಚು ಗೆದ್ದಿದ್ದರು.
ಈ ಜೋಡಿಯ ಆಟದ ನಿಖರ ಆಟದ ಮುಂದೆ ಕನ್ನಡಿಗ ಸುಹಾಸ್ ಮತ್ತು ಪಾಲಕ್ ಅವರಿಗೆ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. 14 ನಿಮಿಷದಲ್ಲೇ ಮೊದಲ ಗೇಮ್ ಅನ್ನು ಕಳೆದುಕೊಂಡ ಅವರು ಎರಡನೇ ಗೇಮ್‌ನ ಆರಂಭದಲ್ಲಿ ಸಮಬಲದ ಪೈಪೋಟಿ ನೀಡಿದರೂ ನಂತರ ಹಿನ್ನಡೆ ಅನುಭವಿಸಿದರು.
ಶಿವರಾಜನ್– ನಿತ್ಯಾಶ್ರೀಗೆ ಆಘಾತ: ಎರಡನೇ ಶ್ರೇಯಾಂಕದ ಶಿವರಾಜನ್ ಸೋಲೈಮಲೈ ಮತ್ತು ನಿತ್ಯಾಶ್ರೀ ಅವರು ಮಿಶ್ರ ಡಬಲ್ಸ್‌ನ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಎಸ್‌ಎಚ್6 ವಿಭಾಗದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತದ ಜೋಡಿಯು 21-23, 11-21 ರಿಂದ ಅಮೆರಿಕದ ಮೈಲ್ಸ್ ಕ್ರಾಜೆವ್ಸ್ಕಿ ಮತ್ತು ಜೇಸಿ ಸೈಮನ್ ವಿರುದ್ಧ ಪರಾಭವಗೊಂಡರು.
ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಶಿವರಾಜನ್ ಮತ್ತು ಜೊತೆಗಾರ್ತಿ ನಿತ್ಯಾ ಆರಂಭಿಕ ಗೇಮ್‌ನಲ್ಲಿ ಪ್ರಬಲ ಪೈಪೋಟಿ ನೀಡಿದರು. ಆದರೆ, ಎರಡನೇ ಗೇಮ್‌ನಲ್ಲಿ ಅಮೆರಿಕನ್ ಜೋಡಿ ಪಾರಮ್ಯ ಮೆರೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.