ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಸೀನಿಯರ್ ಈಜು | ಅನೀಶ್‌, ಆಕಾಶ್‌ ಮಿಂಚು; ಹಶೀಕಾ ‘ಹ್ಯಾಟ್ರಿಕ್‌’

ಸ್ಪ್ರಿಂಟ್‌ನಲ್ಲಿ ಬೆಳಗಿದ ಮಹಾರಾಷ್ಟ್ರದ ಮಿಹಿರ್, ಬಿಹಾರದ ಮಾಹಿ
Published : 12 ಸೆಪ್ಟೆಂಬರ್ 2024, 22:32 IST
Last Updated : 12 ಸೆಪ್ಟೆಂಬರ್ 2024, 22:32 IST
ಫಾಲೋ ಮಾಡಿ
Comments

ಮಂಗಳೂರು: ಮೋಡ ಆವರಿಸಿದ್ದ ಸುಂದರ ಸಂಜೆಯಲ್ಲಿ ಅಮೋಘ ಪುಲ್‌ಗಳ ಮೂಲಕ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ಅನೀಶ್ ಗೌಡ ಚಿನ್ನ ಗೆದ್ದು ಸಂಭ್ರಮಿಸಿದರೆ ತುಂತುರು ಮಳೆಯ ಹಿತವಾದ ವಾತಾವರಣದಲ್ಲಿ ಹೊನಲು ಬೆಳಕಿನಡಿ ವೇಗದ ಸ್ಟ್ರೋಕ್‌ಗಳಿಂದ ಮಿಂಚಿದ ಆಕಾಶ್ ಮಣಿ ಮೊದಲಿಗರಾಗಿ ನಗೆ ಸೂಸಿದರು.

ಭಾರತ ಈಜು ಫೆಡರೇಷನ್, ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಎಮ್ಮೆಕೆರೆ ಈಜುಕೊಳದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಗುರುವಾರ ಪುರುಷರ 1500 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಅನೀಶ್ ಗೌಡ ಮತ್ತು 50 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಆಕಾಶ್ ಮಣಿ ಕರ್ನಾಟಕಕ್ಕೆ ಚಿನ್ನ ಗೆದ್ದುಕೊಟ್ಟರು. ಮಹಿಳೆಯರ 200 ಮೀ ಬಟರ್‌ಫ್ಲೈಯಲ್ಲಿ ಮಿಂಚಿದ ಹಶೀಕಾ ರಾಮಚಂದ್ರ ಚಿನ್ನದ ‘ಹ್ಯಾಟ್ರಿಕ್‌‘ ಮಾಡಿದರು.

ಮೂರನೇ ದಿನ ಆತಿಥೇಯರು 3 ಚಿನ್ನ, 4 ಬೆಳ್ಳಿ ಮತ್ತು  1 ಕಂಚು ಗಳಿಸಿದ್ದು ಒಟ್ಟಾರೆ 25 (12 ಚಿನ್ನ, 11 ಬೆಳ್ಳಿ, 2 ಕಂಚು) ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಪುರುಷರ 1500 ಮೀ ಫ್ರೀಸ್ಟೈಲ್‌ನಲ್ಲಿ ಅನೀಶ್ ಗೌಡ ಅವರಿಗೆ ಕರ್ನಾಟಕದ ದರ್ಶನ್ ಹೊರತುಪಡಿಸಿದರೆ ಬೇರೆ ಯಾರೂ ಸಾಟಿ ಇರಲಿಲ್ಲ. ಮೊದಲ 5 ಲ್ಯಾಪ್‌ಗಳು ಮುಕ್ತಾಯಗೊಳ್ಳುವಾಗಲೇ ಪ್ರತಿಸ್ಪರ್ಧಿಗಳಿಗಿಂತ 30 ಮೀಟರ್‌ಗಳಷ್ಟು ಮುನ್ನಡೆ ಸಾಧಿಸಿದ ಅನೀಶ್‌ ಕೊನೆಯ 3 ಲ್ಯಾಪ್ ಉಳಿದಿರುವಾಗ ಇನ್ನಷ್ಟು ವೇಗವಾಗಿ ಮುನ್ನುಗ್ಗಿದರು. ಈ ಸಂದರ್ಭದಲ್ಲಿ ದರ್ಶನ್ ಸ್ವಲ್ಪ ಹಿನ್ನಡೆ ಅನುಭವಿಸಿದರು.‌ ಆದರೂ ಚಿನ್ನ ಮತ್ತು ಬೆಳ್ಳಿ ಕರ್ನಾಟಕದ ಪಾಲಾಯಿತು.

ಪುರುಷರ ಮತ್ತು ಮಹಿಳೆಯರ 50 ಮೀ ಫ್ರೀಸ್ಟೈಲ್ ಕುತೂಹಲಕಾರಿ ರೇಸ್‌ಗೆ ಸಾಕ್ಷಿಯಾಯಿತು. ಪುರುಷರ ವಿಭಾಗದ ಅರ್ಹತಾ ಸುತ್ತಿನಲ್ಲಿ ಮೊದಲಿಗರಾಗಿದ್ದ ಮಹಾರಾಷ್ಟ್ರದ ಮಿಹಿರ್ ಆಮ್ರೆ ನಿರೀಕ್ಷೆಯಂತೆ ಚಿನ್ನ ತಮ್ಮದಾಗಿಸಿಕೊಂಡರು. ಕರ್ನಾಟಕದ ಶ್ರೀಹರಿ ನಟರಾಜ್ ಅವರಿಂದ ಭಾರಿ ಪೈಪೋಟಿ ಎದುರಿಸಿದರೂ ಮೈಕ್ರೊ ಸೆಕೆಂಡುಗಳ ಅಂತರದಲ್ಲಿ ಅವರು ಮೊದಲು ‘ಫಿನಿಶ್‌’ ಮಾಡಿದರು.

ಮಹಿಳೆಯರ 50 ಮೀ ಫ್ರೀಸ್ಟೈಲ್‌ನಲ್ಲಿ ರೈಲ್ವೆಯ ಅವಂತಿಕಾ ಮತ್ತು ಶಿವಾಂಗಿ ಅವರ ಸವಾಲು ಮೀರಿದ ಮಾಹಿ ಶ್ವೇತರಾಜ್ ಅವರು ಬಿಹಾರಕ್ಕೆ ಚಿನ್ನ ಗೆದ್ದುಕೊಟ್ಟರು. ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುತ್ತಿದ್ದಂತೆ ಅಂತಿಮ 10 ಮೀಟರ್‌ಗಳಲ್ಲಿ ಮಿಂಚಿನ ವೇಗ ಪ್ರದರ್ಶಿಸಿ ಮಾಹಿ ಗೆಲುವಿನ ನಗೆಸೂಸಿದರು. ಪುರುಷರ 50 ಮೀ ಬ್ಯಾಕ್‌ಸ್ಟ್ರೋಕ್ ಆಕಾಶ್ ಮಣಿ ಮತ್ತು ಮಹಾರಾಷ್ಟ್ರದ ರಿಷಭ್ ನಡುವಿನ ತೀವ್ರ ಹೋರಾಟದಿಂದಾಗಿ ಕುತೂಹಲ ಕೆರಳಿಸಿತ್ತು. ‘ಆಕಾಶ್‌..ಆಕಾಶ್‌’ ಎಂದು ಕೂಗಿದ ಕರ್ನಾಟಕದ ಬೆಂಬಲಿಗರು ಕೊನೆಗೆ ಚಿನ್ನದ ಸಂಭ್ರಮದಲ್ಲಿ ತೇಲಿದರು.

ವೃತ್ತಿ, ಆಸ್ತಾ ಪೈಪೋಟಿ ಗೆದ್ದ ಹಶೀಕಾ 

ಮೊದಲ ದಿನ ದಾಖಲೆ ಮಾಡಿ, ಎರಡು ದಿನಗಳಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಗೆದ್ದಿದ್ದ ಹಶೀಕಾ ರಾಮಚಂದ್ರ ಗುರುವಾರ ಮತ್ತೊಂದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. 200 ಮೀ ಬಟರ್‌ಫ್ಲೈನಲ್ಲಿ ಹಶೀಕಾ, ವೃತ್ತಿ ಅಗರವಾಲ್ ಮತ್ತು ಆಸ್ತಾ ನಡುವೆ ತುರುಸಿನ ಸ್ಪರ್ಧೆ ಕಂಡುಬಂತು. ಅಂತಿಮ ಹಂತದಲ್ಲಿ ವೇಗ ಹೆಚ್ಚಿಸಿಕೊಂಡ ಹಶೀಕಾ ಚಿನ್ನದ ‘ಹ್ಯಾಟ್ರಿಕ್’ ಮಾಡಿದರು. ಮಹಿಳೆಯರ 800 ಮೀ ಫ್ರೀಸ್ಟೈಲ್‌ನಲ್ಲಿ ತೆಲಂಗಾಣದ ವೃತ್ತಿ ಅಗರವಾಲ್ ಏಕಾಂಗಿಯಾಗಿ ಮುನ್ನುಗ್ಗಿದರು.‌ ಬೆಳ್ಳಿ ಮತ್ತು ಕಂಚಿಗಾಗಿ ಕರ್ನಾಟಕದ ಶಿರೀನ್ ಮತ್ತು ಶ್ರೀ ಚರಣಿ ತುಮು ನಡುವೆ ಆರಂಭದಲ್ಲಿ ಪೈಪೋಟಿ ಕಂಡುಬಂತು. ಆದರೆ ಕೊನೆಯಲ್ಲಿ ಶಿರೀನ್ ಅವರನ್ನು ನವದೆಹಲಿಯ ಭವ್ಯಾ ಸಚ್‌ದೇವ್ ಹಿಂದಿಕ್ಕಿ ಬೆಳ್ಳಿ ತಮ್ಮದಾಗಿಸಿಕೊಂಡರು. ಶ್ರೀ ಚರಣಿ ಕಂಚು ಗಳಿಸಿದರು.

ಮೂರನೇ ದಿನದ ಫಲಿತಾಂಶಗಳು

ಪುರುಷರ ವಿಭಾಗ

50 ಮೀ ಫ್ರೀ ಸ್ಟೈಲ್: ಮಿಹಿರ್‌ ಆಮ್ರೆ (ಮಹಾರಾಷ್ಟ್ರ)–1, ಶ್ರೀಹರಿ ನಟರಾಜ್‌ (ಕರ್ನಾಟಕ)–2, ಪವನ್ ಗುಪ್ತಾ (ರೈಲ್ವೆ)–3. ಕಾಲ: 22.66ಸೆ;

50ಮೀ ಬ್ಯಾಕ್ ಸ್ಟ್ರೋಕ್: ಆಕಾಶ್ ಮಣಿ (ಕರ್ನಾಟಕ)–1, ರಿಷಭ್ ದಾಸ್‌ (ಮಹಾರಾಷ್ಟ್ರ)–2, ವಿನಾಯಕ್ ವಿಜಯ್‌ (ಸರ್ವಿಸಸ್‌)–3. ಕಾಲ: 26.24 ಸೆ; 

200 ಮೀ ಬಟರ್ ಫ್ಲೈ: ಬಿಕ್ರಂ ಚಾಂಗ್ಮೈ (ರೈಲ್ವೆ)–1, ಹರ್ಷ ಸರೋಹ (ಹರಿಯಾಣ)–2, ಆರ್ಯನ್ ಪ್ರೇಯಸ್‌ ಪಂಚ (ಗುಜರಾತ್‌)–3. ಕಾಲ: 2 ನಿ 2.76ಸೆ;

1500 ಮೀ ಫ್ರೀಸ್ಟೈಲ್: ಅನೀಶ್ ಗೌಡ (ಕರ್ನಾಟಕ)–1, ದರ್ಶನ್‌ ಎಸ್‌ (ಕರ್ನಾಟಕ)–2, ಸಂಪತ್‌ ಕುಮಾರ್ (ಆಂಧ್ರಪ್ರದೇಶ)–3. ಕಾಲ: 16:06.11;

4x100 ಮೆಡ್ಲೆ: ತಮಿಳುನಾಡು–1, ಕರ್ನಾಟಕ (ಆಕಾಶ್ ಮಣಿ, ವಿದಿತ್ ಶಂಕರ್‌, ಕಾರ್ತಿಕೇಯನ್‌ ನಾಯರ್‌, ಶ್ರೀಹರಿ ನಟರಾಜ್‌)–2, ಮಹಾರಾಷ್ಟ್ರ–3. ಕಾಲ: 3ನಿ 45.66ಸೆ (ಕೂಟ ದಾಖಲೆ; ಹಿಂದಿನ ದಾಖಲೆ: ಸರ್ವಿಸಸ್‌: ಕಾಲ: 3ನಿ 47.22ಸೆ).

ಪುರುಷರ 50ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದ ಕರ್ನಾಟಕ ಅಕಾಶ್‌ಮಣಿ ಸಂಭ್ರಮ  ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಪುರುಷರ 50ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದ ಕರ್ನಾಟಕ ಅಕಾಶ್‌ಮಣಿ ಸಂಭ್ರಮ  ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್

ಮಹಿಳೆಯರ ವಿಭಾಗ

50 ಮೀ ಫ್ರೀ ಸ್ಟೈಲ್: ಮಹಿ ಶ್ವೇತರಾಜ್‌ (ಬಿಹಾರ)–1, ಅವಂತಿಕಾ ಚವಾಣ್‌ (ರೈಲ್ವೆ)–2, ಶಿವಾಂಗಿ ಶರ್ಮಾ (ರೈಲ್ವೆ)–3. ಕಾಲ: 26.85ಸೆ;

50ಮೀ ಬ್ಯಾಕ್ ಸ್ಟ್ರೋಕ್: ಸೌಬೃತಿ ಮೊಂಡಲ್‌ (ಬಂಗಾಳ)–1, ವಿಹಿತಾ ಲೋಕನಾಥನ್‌ (ಕರ್ನಾಟಕ)–2, ರುಜುತಾ ಪ್ರಸಾದ್‌ (ಮಹಾರಾಷ್ಟ್ರ)–3. ಕಾಲ: 30.14ಸೆ;

200 ಮೀ ಬಟರ್ ಫ್ಲೈ: ಹಶೀಕಾ ರಾಮಚಂದ್ರ (ಕರ್ನಾಟಕ)–1, ವೃತ್ತಿ ಅಗರವಾಲ್‌ (ತೆಲಂಗಾಣ)–2, ಅಸ್ತಾ ಚೌಧರಿ (ರೈಲ್ವೆ)–3. ಕಾಲ: 2ನಿ 21.16ಸೆ;

800 ಮೀ ಫ್ರೀಸ್ಟೈಲ್: ವೃತ್ತಿ ಅಗರವಾಲ್‌ (ತೆಲಂಗಾಣ)–1, ಭವ್ಯಾ ಸಚ್‌ದೇವ್‌ (ನವದೆಹಲಿ)–2, ಶ್ರೀ ಚರಣಿ ತುಮು (ಕರ್ನಾಟಕ)–3. ಕಾಲ: 9ನಿ 16.14ಸೆ; 4x100 ಮೀ ಮೆಡ್ಲೆ: ಒಡಿಶಾ–1, ಮಹಾರಾಷ್ಟ್ರ–2, ರೈಲ್ವೆ–3. ಕಾಲ: 4ನಿ 27.90ಸೆ.

ಮಹಿಳೆಯರ 200ಮೀ ಬಟರ್‌ಫ್ಲೈಯಲ್ಲಿ ಮೊದಲಿಗರಾದ ಕರ್ನಾಕಟದ ಹಶೀಕಾ ರಾಮಚಂದ್ರ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಮಹಿಳೆಯರ 200ಮೀ ಬಟರ್‌ಫ್ಲೈಯಲ್ಲಿ ಮೊದಲಿಗರಾದ ಕರ್ನಾಕಟದ ಹಶೀಕಾ ರಾಮಚಂದ್ರ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
2026ರ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಗಳಿಸುವುದು ನನ್ನ ಗುರಿ. ನಾನೀಗ ಏಷ್ಯನ್‌ ಗೇಮ್ಸ್‌ ಅರ್ಹತಾ ಮಾನದಂಡಕ್ಕಿಂತ ಆರು ಸೆಕೆಂಡು ಹಿಂದೆ ಇದ್ದೇನೆ. ಅದನ್ನು ಸರಿದೂಗಿಸಲು ಸಾಕಷ್ಟು ಸಮಯ ಇದೆ.
–ಹಶೀಕಾ ರಾಮಚಂದ್ರ, ಕರ್ನಾಟಕದ ಈಜುಪಟು
ಬಿಹಾರದ ಮಾಹಿ ಶ್ವೇತರಾಜ್ ಪ್ರಜಾವಾಣಿ

ಬಿಹಾರದ ಮಾಹಿ ಶ್ವೇತರಾಜ್ ಪ್ರಜಾವಾಣಿ

ಚಿತ್ರ: ಫಕ್ರುದ್ದೀನ್ ಎಚ್

ತಮಿಳುನಾಡಿಗೆ ಮತ್ತೆ ದಾಖಲೆ

ಬುಧವಾರ 4x100 ಮೀ ಮಿಶ್ರ ರಿಲೆಯಲ್ಲಿ ದಾಖಲೆ ಬರೆದ ತಮಿಳುನಾಡು ಗುರುವಾರ ಪುರುಷರ 4x100 ಮೀ ರಿಲೆಯಲ್ಲೂ ದಾಖಲೆ ಮಾಡಿತು. ನಿತಿಕ್ ನಾದೆಲ್ಲ ಧನುಷ್ ಸುರೇಶ್‌ ಬೆನೆಡಿಕ್ಟನ್ ರೋಹಿತ್ ಮತ್ತು ಆದಿತ್ಯ ದಿನೇಶ್ ಅವರನ್ನು ಒಳಗೊಂಡ ತಂಡ ಬೆಳಿಗ್ಗೆ ನಡೆದ ಸ್ಪರ್ಧೆಯಲ್ಲಿ 3ನಿ 45.66ಸೆಕೆಂಡು ಸಾಧನೆ ಮಾಡಿತು. ಇದರೊಂದಿಗೆ 2022ರಿಂದ ಸರ್ವಿಸಸ್ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು (3ನಿ 47.22) ಮುರಿಯಿತು.

ಕರ್ನಾಟಕದ ಆಕಾಶ್ ಮಣಿ ವಿದಿತ್‌ ಶಂಕರ್‌ ಕಾರ್ತಿಕೇಯನ್ ನಾಯರ್ ಮತ್ತು ಶ್ರೀಹರಿ ನಟರಾಜ್ ಅವರಿದ್ದ ತಂಡ 3ನಿ 46.9ಸೆಕೆಂಡುಗಳ ಸಾಧನೆಯೊಂದಿಗೆ ಸರ್ವಿಸಸ್‌ನ ದಾಖಲೆಯನ್ನು ಹಿಂದಿಕ್ಕಿ ಬೆಳ್ಳಿ ಪದಕ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT