ನೈರೋಬಿ: ನಾಲ್ಕು ದಿನಗಳ ಹಿಂದೆ ಪ್ರಿಯತಮ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಯುಗಾಂಡದ ಒಲಿಂಪಿಯನ್ ರೆಬೆಕಾ ಚೆಪ್ಟೇಗಿ ಅವರು ಪಶ್ಚಿಮ ಕೆನ್ಯಾದ ಅಲ್ಡೊರೆಟ್‌ನ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗಿನ ಜಾವ ಮೃತಪಟ್ಟರು.
ಆರೋಪಿ ಡಿಕ್ಸನ್ ಎನ್ಡೀಮಾ, ಯುಗಾಂಡ ಗಡಿಯಲ್ಲಿರುವ ಎಂಡೆಬಸ್ ನಗರದಲ್ಲಿರುವ ರೆಬೆಕಾ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದ. ಈಕೆಯ ಇಬ್ಬರು ಪುಟ್ಟ ಹೆಣ್ಣುಮಕ್ಕಳ ಎದುರೇ ಈ ಪಾಶವೀ ಕೃತ್ಯ ನಡೆಸಿದ್ದ.
ಕೆನ್ಯಾದಲ್ಲಿ ಲಿಂಗಸಂಬಂಧಿ ದೌರ್ಜನ್ಯದ ಸರಣಿ ಪ್ರಕರಣಗಳ ಸಾಲಿನಲ್ಲಿ ಇದೂ ಸೇರಿಕೊಂಡಿದೆ. 33 ವರ್ಷ ವಯಸ್ಸಿನ ರೆಬೆಕಾ, ತಿಂಗಳ ಹಿಂದಷ್ಟೇ ಪ್ಯಾರಿಸ್ ಒಲಿಂಪಿಕ್ಸ್‌ನ ಮ್ಯಾರಥಾನ್‌ನಲ್ಲಿ ಭಾಗವಹಿಸಿ 44ನೇ ಸ್ಥಾನ ಗಳಿಸಿದ್ದರು.