ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನೀರಜ್ ಚೋಪ್ರಾ ಮತ್ತು ಶೂಟರ್ ಮನು ಭಾಕರ್ ಗಮನ ಸೆಳೆದಿದ್ದರು. ಶೂಟಿಂಗ್ ವೈಯಕ್ತಿಕ ವಿಭಾಗ ಮತ್ತು ಮಿಶ್ರ ವಿಭಾಗದಲ್ಲಿ ಮನು ಭಾಕರ್ ಅವಳಿ ಕಂಚಿನ ಪದಕ ಗೆದ್ದರೆ, ನೀರಜ್ ಪುರುಷರ ಜಾವೆಲಿನ್ ಥ್ರೋ ಪಂದ್ಯದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯ ಕಂಡರೂ ಕ್ರೀಡಾ ಪ್ರೇಮಿಗಳಿಗೆ ಈ ಇಬ್ಬರು ಅಥ್ಲೀಟ್‌ಗಳ ಬಗೆಗಿನ ಆಸಕ್ತಿ ಮುಗಿದಿಲ್ಲ. ಇದೀಗ ನೀರಜ್ ಮತ್ತು ಮನು ಭಾಕರ್ ಅವರು ಮೊದಲ ಬಾರಿಗೆ ಭೇಟಿಯಾದ ಹಿಂದಿನ ವಿಡಿಯೊವನ್ನು ಹಂಚಿಕೊಂಡ ನೆಟ್ಟಿಗರು ಈ ಇಬ್ಬರು ಅಥ್ಲೀಟ್‌ಗಳ ಕಾಲೆಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ನೀರಜ್ ಮತ್ತು ಮನು ಭಾಕರ್ ವೈಯಕ್ತಿಕವಾಗಿ ಭೇಟಿಯಾಗಿ ಮಾತನಾಡಿದ್ದಾರೆ. ಮಾತನಾಡುವ ವೇಳೆ ಇಬ್ಬರು ಒಬ್ಬರನ್ನೊಬ್ಬರ ಮುಖ ನೋಡಿ ಮಾತನಾಡಲು ಹಿಂಜರಿಯುತ್ತಿರುವುದು ಕಾಣಬಹುದಾಗಿದೆ. ಕೊನೆಯಲ್ಲಿ ನೀರಜ್ ಅವರ ಜೊತೆ ಫೋಟೊಗೆ ಪೋಸ್ ಕೊಡುವಂತೆ ಮನು ಅವರ ತಾಯಿ ಹೇಳಿದ್ದಾರೆ.
ಮತ್ತೊಂದು ವಿಡಿಯೊದಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಅವರನ್ನು ಭೇಟಿಯಾದ ಮನು ಭಾಕರ್ ತಾಯಿ ಸುಮೇಧಾ ಭಾಕರ್, ನೀರಜ್ ಅವರ ಕೈಯನ್ನು ತಮ್ಮ ತಲೆಯ ಮೇಲೆ ಇಟ್ಟು ಪ್ರಮಾಣ ಮಾಡಿಸಿಕೊಳ್ಳುತ್ತಿರುವುದು ಕಾಣಬಹುದಾಗಿದೆ.
ಈ ವಿಡಿಯೊಗಳನ್ನು ಮೆಚ್ಚಿಕೊಂಡಿರುವ ನೆಟ್ಟಿಗರು, ಮದುವೆ ಫಿಕ್ಸಾ? ಎಂದು ಕೇಳಿದ್ದಾರೆ. ಅಲ್ಲದೇ ಇಬ್ಬರ ಕೆಮೆಸ್ಟ್ರಿ ಹೊಂದುತ್ತದೆ ಎಂದೆಲ್ಲಾ ತಮಾಷೆ ಮಾಡಿದ್ದಾರೆ.
Look at the confidence of our medalists Neeraj Chopra and Manu Bhaker both can't look each other in the eyes while talking pic.twitter.com/fMc2ACDPaT
— Yanika_Lit (@LogicLitLatte) August 11, 2024
ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ನೀರಜ್ ಚೋಪ್ರಾ ಮತ್ತು ಮನು ಭಾಕರ್ ಭಾರತದ ಧ್ವಜಧಾರಿಗಳಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ನೀರಜ್ ಈ ಅವಕಾಶವನ್ನು ಗೌರವದಿಂದ ತಿರಸ್ಕರಿಸಿದ್ದು, ಕಂಚಿನ ಪದಕ ಗೆದ್ದ ಭಾರತದ ಹಾಕಿ ತಂಡದ ಆಟಗಾರ ಪಿ.ಆರ್. ಶ್ರೀಜೇಶ್ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದ್ದರು.
ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ ನೀರಜ್ ಈ ಬಾರಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಇದೇ ಮೊದಲ ಬಾರಿಗೆ ಮನು ಭಾಕರ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದಾರೆ. ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
Manu Bhaker’s Mother with Neeraj Chopra. pic.twitter.com/SDWbaWeOG7
— Avinash Aryan (@avinasharyan09) August 11, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.