ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ವಿಶ್ವಕಪ್‌ ಸೆಮಿಫೈನಲ್‌: ಗೆದ್ದ ಪ್ರಜ್ಞಾನಂದ ಫೈನಲ್‌ಗೆ

ಚೆಸ್‌ ವಿಶ್ವಕಪ್‌ ಸೆಮಿಫೈನಲ್‌: ಹೋರಾಡಿ ಸೋತ ಕರುವಾನ
Published 21 ಆಗಸ್ಟ್ 2023, 20:34 IST
Last Updated 21 ಆಗಸ್ಟ್ 2023, 20:34 IST
ಅಕ್ಷರ ಗಾತ್ರ

ಬಾಕು (ಅಜರ್‌ಬೈಜಾನ್‌): ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಫ್ಯಾಬಿಯಾನೊ ಕರುವಾನ ಅವರಿಗೆ ಸೋಮವಾರ 3.5–2.5 ರಿಂದ ಆಘಾತ ನೀಡಿದ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು ಫಿಡೆ ವಿಶ್ವಕಪ್‌ ಚೆಸ್‌ ಟೂರ್ನಿಯ ಫೈನಲ್‌ ತಲುಪಿದರು.

ಭಾರತದ ಚೆಸ್‌ ಚತುರ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಎದುರಿಸಲಿದ್ದಾರೆ. ಮೊದಲ ಪಂದ್ಯ ಮಂಗಳವಾರ ನಡೆಯಲಿದೆ. ಫೈನಲ್‌ನಲ್ಲಿ ಯಾರು ಗೆದ್ದರೂ ಮೊದಲ ಬಾರಿಯ ಚಾಂಪಿಯನ್‌ ಆಗಲಿದ್ದಾರೆ.

ಸೆಮಿಫೈನಲ್‌ ಪಂದ್ಯದ ಮೊದಲ ಎರಡು ಕ್ಲಾಸಿಕಲ್‌ ಪಂದ್ಯಗಳು ‘ಡ್ರಾ’ ಆಗಿದ್ ಕಾರಣ ಸೋಮವಾರ ಟೈಬ್ರೇಕರ್‌ ಪಂದ್ಯಗಳು ನಡೆದವು. ಕುತೂಹಲ ಕೆರಳಿಸಿದ ಟೈಬ್ರೇಕರ್‌ನ ಮೊದಲ ಎರಡು ರ್‍ಯಾಪಿಡ್‌ ಪಂದ್ಯಗಳು ಕ್ರಮವಾಗಿ 71 ಮತ್ತು 53 ನಡೆಗಳ ನಂತರ ‘ಡ್ರಾ’ ಆದವು.

18 ವರ್ಷದ ಪ್ರಜ್ಞಾನಂದ, ಮುಂದಿನ ಪಂದ್ಯದಲ್ಲಿ 63 ನಡೆಗಳಲ್ಲಿ ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ ವಿರುದ್ಧ  ಜಯಗಳಿಸಿ ನಿರ್ಣಾಯಕ ಮುನ್ನಡೆ ಪಡೆದರು. ಆ ಮೂಲಕ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸಿದರು. ಮುಂದಿನ ಪಂದ್ಯದಲ್ಲಿ ಕರುವಾನ ಗೆಲ್ಲಲೇಬೇಕಿತ್ತು. ಆದರೆ ಈ ಪಂದ್ಯವನ್ನು ‘ಡ್ರಾ’ ಮಾಡಿಕೊಳ್ಳುವ ಮೂಲಕ  ಪ್ರಜ್ಞಾನಂದ ಚಾರಿತ್ರಿಕ ಜಯಪಡೆದರು.

ಸೋಮವಾರದ ಎಲ್ಲಾ ನಾಲ್ಕೂ ಪಂದ್ಯಗಳು ಹೋರಾಟದಿಂದ ಕೂಡಿದ್ದವು. ವೇಗದ ಆಟದಲ್ಲಿ ಪ್ರಜ್ಞಾನಂದ ಅವರೇ ಗೆಲ್ಲುವ ನೆಚ್ಚಿನ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಅನುಭವಿ ಕರುವಾನ ದೀರ್ಘಾವಧಿಯ  ಕ್ಲಾಸಿಕಲ್‌ನಲ್ಲಿ ಪಳಗಿದ ಆಟಗಾರಾಗಿ ಹೆಸರು ಮಾಡಿದವರು.

‘ಪ್ರಗ್‌ ಫೈನಲ್‌ಗೆ ಹೋಗಿದ್ದಾರೆ! ಅವರು ಟೈಬ್ರೇಕರ್‌ನಲ್ಲಿ ಫ್ಯಾಬಿಯಾನೊ ಕರುವಾನ ಅವರನ್ನು ಸೋಲಿಸಿದ್ದಾರೆ. ಈಗ ಕಾರ್ಲ್‌ಸನ್ ಅವರನ್ನು ಎದುರಿಸಲಿದ್ದಾರೆ. ಎಂಥ ಅಮೋಘ ಸಾಧನೆ!’ ಎಂದು ಚೆಸ್‌ ದಂತಕಥೆ ವಿಶ್ವನಾಥನ್ ಆನಂದ್‌ ‘ಎಕ್ಸ್‌’ನಲ್ಲಿ (ಈ ಹಿಂದೆ ಟ್ವಿಟರ್‌) ಪೋಸ್ಟ್‌ ಮಾಡಿದ್ದಾರೆ.

ರಷ್ಯಾದ ಆಟಗಾರ್ತಿ ಅಲೆಕ್ಸಾಂಡ್ರಾ ಗೊರ‍್ಯಾಚ್ಕಿನಾ ಅವರು ಮಹಿಳೆಯರ ವಿಭಾಗದ ಫಿಡೆ ವಿಶ್ವಕಪ್‌ ಚಾಂಪಿಯನ್‌ ಆಗಿ ಅಭಿಷಿಕ್ತರಾದರು. ಅವರು ಫೈನಲ್‌ನಲ್ಲಿ ಬಲ್ಗೇರಿಯಾದ ನುರ್ಗ್ಯುಲ್‌ ಸಲಿಮೋವಾ ಅವರನ್ನು ಟೈಬ್ರೇಕರ್‌ನಲ್ಲಿ ಸೋಲಿಸಿದರು. ಪ್ರಶಸ್ತಿ ಜೊತೆಗೆ ಅವರು ₹41 ಲಕ್ಷ ನಗದು ಬಹುಮಾನವನ್ನೂ ಪಡೆದರು.

ಬಲ್ಗೇರಿಯಾದ ಆಟಗಾರ್ತಿ ₹29 ಲಕ್ಷ ನಗದು ಬಹುಮಾನ ಪಡೆದರು. ಉಕ್ರೇನ್‌ನ ಅನಾ ಮುಯಿಚುಕ್ ಅವರು 1.5–0.5 ರಿಂದ ತಾನ್‌ ಝೊಂಗ್‌ಯಿ ಅವರನ್ನು ಮಣಿಸಿ ಮೂರನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT