ಚೆನ್ನೈ: ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಶ್ರೀಜಾ ಅಕುಲಾ ಅವರು ಗಾಯದ ಸಮಸ್ಯೆಯಿಂದಾಗಿ ಮುಂಬರುವ ಅಲ್ಟಿಮೇಟ್ ಟೇಬಲ್ ಟೆನಿಸ್ ಲೀಗ್‌ನಿಂದ ಹೊರಗುಳಿದಿದ್ದಾರೆ.
ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಶ್ರೀಜಾ ಅವರು ಜೈಪುರ ಪೇಟ್ರಿಯಾಟ್ಸ್ ಪರ ಆಡುವುದಾಗಿ ಘೋಷಣೆಯಾಗಿತ್ತು. ಗಾಯದಿಂದ ಚೇತರಿಸಿಕೊಳ್ಳಲು ತಮಗೆ ಆರು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
‘ನಾನು ಗಾಯದ ಸಮಸ್ಯೆಯಿಂದ (ಮೂಳೆಯಲ್ಲಿ ಬಿರುಕು) ಬಳಲುತ್ತಿದ್ದೇನೆ. ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿ ಪಡೆಯಲಿದ್ದೇನೆ. ನಾನು ಯುಟಿಟಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಶ್ರೀಜಾ ತಿಳಿಸಿದ್ದಾರೆ.
ಶ್ರೀಜಾ ಬದಲಿಗೆ ಯೂತ್ ನ್ಯಾಷನಲ್ ಚಾಂಪಿಯನ್ ನಿತ್ಯಶ್ರೀ ಮಣಿ ಆಯ್ಕೆಯಾಗಿದ್ದಾರೆ. ಯುಟಿಟಿಯ ಮುಂಬರುವ ಆವೃತ್ತಿಯು ಆಗಸ್ಟ್ 22ರಿಂದ ಸೆಪ್ಟೆಂಬರ್ 7ರವರೆಗೆ ಚೆನ್ನೈನಲ್ಲಿ ನಡೆಯಲಿದೆ.
ವಿಶ್ವ ಕ್ರಮಾಂಕ 25ನೇ ಸ್ಥಾನದಲ್ಲಿರುವ ಮಣಿಕಾ ಬಾತ್ರಾ ಅವರೊಂದಿಗೆ ಒಲಿಂಪಿಕ್ಸ್ ಟೇಬಲ್ ಟೆನಿಸ್ ವೈಯಕ್ತಿಕ ಸ್ಪರ್ಧೆಗಳಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಶ್ರೀಜಾ ಅವರು 22ನೇ ಕ್ರಮಾಂಕದಲ್ಲಿದ್ದಾರೆ.