ಪ್ಯಾರಿಸ್: ಅಮೆರಿಕದ ಸಾರಾ ಹಿಲ್ಡ್‌ಬ್ರಾಂಟ್ ಅವರು ಒಲಿಂಪಿಕ್ಸ್ ಮಹಿಳೆಯರ 50 ಕೆ.ಜಿ. ಕುಸ್ತಿಯಲ್ಲಿ ಚಿನ್ನ ಗೆದ್ದರು. ವಿನೇಶ್ ಫೋಗಟ್ ಅವರ ಅನರ್ಹತೆಯ ನಂತರ ಅವರು ಫೈನಲ್ ತಲುಪಿದ ಕ್ಯೂಬಾದ ಯುಸ್ನೆಲಿಸ್ ಗುಜ್ಮಾನ್ ಅವರನ್ನು ಸಾರಾ ಹಿಲ್ಡ್‌ಬ್ರಾಂಟ್ 3–0 ಯಿಂದ ಸೋಲಿಸಿದರು.
ಭಾರತದ ವಿನೇಶ್, ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಯುಸ್ನೆಲಿಸ್ ಗುಜ್ಮಾನ್ ಅವರನ್ನು ಸೋಲಿಸಿದ್ದರು. ಆದರೆ ಫೈನಲ್ ದಿನ ತೂಕ ನೋಡುವ ವೇಳೆ 100 ಗ್ರಾಂ ಅಧಿಕ ತೂಕವಿದ್ದ ಕಾರಣ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು.
ಹಿಲ್ಡ್‌ಬ್ರಾಂಟ್ ಅವರು ಮೂರು ವರ್ಷಗಳ ಹಿಂದೆ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
‘ಎದುರಾಳಿ ಬದಲಾವಣೆಯಾಗಿದ್ದು ಬೆಳಿಗ್ಗೆ ನನಗೆ ಗೊಂದಲ ಮೂಡಿಸಿದ್ದು ನಿಜ. ಆದರೆ ಮನಸ್ಸು ಮತ್ತು ದೇಹ ಇದಾವುದನ್ನೂ ಲೆಕ್ಕಿಸಲಿಲ್ಲ’ ಎಂದು ವಿಶ್ರಾಂತಿಗೆ ಇದ್ದ ಜಾಗದಲ್ಲಿ ಕುಳಿತು ಮಫಿನ್ ಮೆಲ್ಲುತ್ತಿದ್ದ ಹಿಲ್ಡ್‌ಬ್ರಾಂಟ್ ಹೇಳಿದರು.