ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ವಾರಿಯರ್ಸ್, ಪ್ಯಾಂಥರ್ಸ್ ಜಯಭೇರಿ

ಪ್ರೊ ಕಬಡ್ಡಿ: ಮಣಿಂದರ್, ದೀಪಕ್ ಅಮೋಘ ಆಟ: ಪಿಂಕ್‌ಪ್ಯಾಂಥರ್ಸ್‌ಗೆ ಶುಭಾರಂಭ
Last Updated 9 ಅಕ್ಟೋಬರ್ 2022, 19:01 IST
ಅಕ್ಷರ ಗಾತ್ರ

ಬೆಂಗಳೂರು: ನಾಯಕನಿಗೆ ತಕ್ಕ ಆಟವಾಡಿದ ಮಣಿಂದರ್ ಸಿಂಗ್ ಹಾಗೂ ಆಲ್‌ರೌಂಡರ್ ದೀಪಕ್ ಹೂಡಾ ಅವರ ಅಮೋಘ ಆಟದ ಬಲದಿಂದ ಬೆಂಗಾಲ್ ವಾರಿಯರ್ಸ್ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಜಯಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾನುವಾರ ಬೆಂಗಾಲ್ ತಂಡವು 45–25ರಿಂದ ತೆಲುಗು ಟೈಟನ್ಸ್ ವಿರುದ್ಧ ಜಯಿಸಿತು. ಮಿಂಚಿನ ದಾಳಿ ನಡೆಸಿದ ಮಣಿಂದರ್ ಸಿಂಗ್ (11) ಹಾಗೂ ಚುರುಕಿನ ಆಟವಾಡಿದ ದೀಪಕ್ (11) ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಬೆಂಗಾಲ್ ತಂಡವು ಪಂದ್ಯದ ಆರಂಭದಿಂದಲೇ ಮುನ್ನಡೆ ಗಳಿಸಿಕೊಂಡಿತು. ಪ್ರಥಮಾರ್ಧದಲ್ಲಿ 25–10ರಿಂದ ದೊಡ್ಡ ಅಂತರದ ಮುನ್ನಡೆ ಸಾಧಿಸಿತು. ವಿರಾಮದ ನಂತರ ತೆಲುಗು ತಂಡವು ಮುನ್ನಡೆ ಸಾಧಿಸಲು ಮಾಡಿದ ಪ್ರಯತ್ನಗಳಿಗೆ ಬೆಂಗಾಲ್ ಡಿಫೆಂಡರ್ಸ್‌ ತಡೆಯೊಡ್ಡಿದರು. ತಂಡವು ಆರು ಆಲೌಟ್ ಪಾಯಿಂಟ್ಸ್‌ ಗಳಿಸಿತು. ಟೈಟನ್ಸ್‌ ತಂಡದ ಮೋನು ಗೊಯತ್ (7) ಹಾಗೂ ವಿನಯ್ (8) ರೇಡಿಂಗ್‌ನಲ್ಲಿ ಗಮನ ಸೆಳೆದರು.

ಪಿಂಕ್‌ಪ್ಯಾಂಥರ್ಸ್‌ಗೆ ಜಯ

ದಿನದ ಇನ್ನೊಂದು ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವು 35–30ರಿಂದ ಪಟ್ನಾ ಪೈರೆಟ್ಸ್‌ ವಿರುದ್ಧ ಜಯಿಸಿತು.

ಅರ್ಜುನ್ ದೇಶವಾಲ್ ಅವರ ಅಮೋಘ ರೇಡಿಂಗ್‌ನಿಂದ ಜೈಪುರ ತಂಡದ ಜಯ ಸುಲಭವಾಯಿತು. ಅವರು ಒಟ್ಟು 17 ಅಂಕಗಳನ್ನು ಗಳಿಸಿದರು. ವಿ. ಅಜಿತ್ ಕೂಡ ಐದು ಅಂಕ ಗಳಿಸಿದರು.

ಪಟ್ನಾ ತಂಡದ ಸಚಿನ್ ಹತ್ತು ಹಾಗೂ ರೋಹಿತ್ ಗುಲಿಯಾ 11 ಅಂಕ ಗಳಿಸಿದರು. ಪಂದ್ಯದ ಪ್ರಥಮಾರ್ಧದಲ್ಲಿ ಜೈಪುರ್ ತಂಡವು ನಾಲ್ಕು ಅಂಕಗಳ ಮುನ್ನಡೆ (18–14) ಮಾತ್ರ ಗಳಿಸಿತ್ತು. ವಿರಾಮದ ನಂತರದ ಆಟ ರೋಚಕವಾಗಿತ್ತು.

ಉಭಯ ತಂಡಗಳ ಆಟಗಾರರ ಜಿದ್ದಾಜಿದ್ದಿ ಮುಗಿಲುಮುಟ್ಟಿತ್ತು. ಆದರೂ ಜೈಪುರ್ ತಂಡವು ದ್ವಿತೀಯಾರ್ಧದಲ್ಲಿ 17 ಹಾಗೂ ಪಟ್ನಾ 16 ಅಂಕ ಗಳಿಸಿದವು.

ಇಂದಿನ ಪಂದ್ಯಗಳು

ಯು ಮುಂಬಾ–ಯು.ಪಿ ಯೋಧಾ (ರಾತ್ರಿ 7.30)

ದಬಂಗ್ ಡೆಲ್ಲಿ–ಗುಜರಾತ್ ಜೈಂಟ್ಸ್ (ರಾತ್ರಿ 8.30)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT