ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ರೆಂಚ್‌ ಓಪನ್‌ ಆಡಲು ಕಾತರನಾಗಿದ್ದೇನೆ’

ಇಟಾಲಿಯನ್‌ ಓಪನ್‌ ಟೂರ್ನಿ ಜಯಿಸಿದ ರಫೆಲ್‌ ನಡಾಲ್‌ ಅಭಿಮತ
Last Updated 20 ಮೇ 2019, 17:40 IST
ಅಕ್ಷರ ಗಾತ್ರ

ರೋಮ್‌: ಸ್ಪೇನ್‌ ರಫೆಲ್‌ ನಡಾಲ್‌ ಅವರು ಭಾನುವಾರ ಇಟಾಲಿಯನ್‌ ಓಪನ್‌ ಚಾಂಪಿಯನ್‌ ಆದರು. ಫೈನಲ್‌ ಪಂದ್ಯದಲ್ಲಿ ಅವರು ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ನೊವಾಕ್‌ ಜೊಕೊವಿಕ್ ಅವರನ್ನು 6–0, 4–6, 6–1 ಸೆಟ್‌ಗಳಿಂದ ಸದೆಬಡಿದರು. ಇದು ನಡಾಲ್‌ ಜಯಿಸಿದ ಒಂಬತ್ತನೇ ಇಟಾಲಿಯನ್‌ ಟ್ರೋಫಿ ಆಗಿದ್ದು ವಿಶೇಷ.

ಕಳೆದ ವಾರ ಜೊಕೊವಿಚ್‌ ಮ್ಯಾಡ್ರಿಡ್‌ ಓಪನ್‌ನಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದರು. ಆದರೆ ಈ ಪಂದ್ಯದ ಮೂಲಕ 54ನೇ ಬಾರಿ ನಡಾಲ್‌ ಅವರನ್ನು ಎದುರಿಸಿದ್ದ ಅವರು ಕಳಪೆ ಪ್ರದರ್ಶನ ನೀಡಿದರು. ಜೊಕೊವಿಚ್‌ ಅವರು ಎರಡನೇ ಸೆಟ್‌ ಗೆದ್ದುಕೊಂಡರೂ ಮೂರನೇ ಸೆಟ್‌ನಲ್ಲಿ ಮುಗ್ಗರಿಸಿದರು.

ಈ ಗೆಲುವಿನೊಂದಿಗೆ ನಡಾಲ್‌ ಫ್ರೆಂಚ್‌ ಓಪನ್‌ ಟೂರ್ನಿಗೆ ಭರ್ಜರಿಯಾಗಿಯೇ ಸಿದ್ಧವಾಗಿದ್ದಾರೆ. ‘ನಾನು ನನ್ನ ಸಹಜ ಆಟದೊಂದಿಗೆ ಪ್ಯಾರಿಸ್‌ ಟೂರ್ನಿಗೆ ತೆರಳುವೆನು. ಅಲ್ಲಿಗೆ ಹೋಗಲು ಹಾಗೂ ಸ್ಟೇಡಿಯಂ ಪ್ರವೇಶಿಸಲು ಕಾತರನಾಗಿದ್ದೇನೆ’ ಎಂದು 17 ಬಾರಿಯ ಗ್ರ್ಯಾನ್‌ಸ್ಲಾಮ್‌ ಒಡೆಯ ನಡಾಲ್‌ ಹೇಳಿದ್ದಾರೆ.

‘ಫ್ರೆಂಚ್‌ ಓಪನ್‌ನಲ್ಲಿ ಈ ಬಾರಿ ನನಗೇನೂ ವ್ಯತ್ಯಾಸ ಕಾಣುತ್ತಿಲ್ಲ. ಎಲ್ಲ ಮೊದಲಿನಂತೆಯೇ ಅನಿಸುತ್ತಿದೆ. ನಾನು ಗೆದ್ದ ಗ್ರ್ಯಾನ್‌ಸ್ಲಾಮ್‌ಗಳ ಬಗ್ಗೆ ಈಗ ಮಾತನಾಡುವುದಿಲ್ಲ. ಸದ್ಯ ಉತ್ತಮ ಪ್ರದರ್ಶನವನ್ನು ಮುಂದುವರಿಸಲು ಗಮನ ನೀಡುತ್ತೇನೆ'ಎಂದು ಅವರು ತಿಳಿಸಿದ್ದಾರೆ.

ಉತ್ತಮವಾಗಿ ಆಡುವುದರೊಂದಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸದ್ಯದ ಅಗತ್ಯವಾಗಿದೆ ಎಂದು ನಡಾಲ್‌ ನುಡಿದಿದ್ದಾರೆ. ಮೊಣಕಾಲು ನೋವಿನ ಕಾರಣ ನಡಾಲ್‌ ಅವರು ಇಂಡಿಯಾನ ವೆಲ್ಸ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಮೊಂಟೆ ಕಾರ್ಲೊ, ಬಾರ್ಸಿಲೋನಾ ಹಾಗೂ ಮ್ಯಾಡ್ರಿಡ್‌ ಓಪನ್‌ ಟೂರ್ನಿಗಳಲ್ಲಿ ಅವರಿಗೆ ಸೆಮಿಫೈನಲ್‌ ತಡೆ ದಾಟಲು ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT