ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ: ಏನು ಹೇಳುತ್ತದೆ ಕ್ರೀಡಾ ನೀತಿ?

Last Updated 22 ಜನವರಿ 2023, 19:30 IST
ಅಕ್ಷರ ಗಾತ್ರ

ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹಲವು ದಶಕಗಳಿಂದ ಲೈಂಗಿಕ ಶೋಷಣೆ ಎದುರಿಸುತ್ತಿದ್ದಾರೆ. ಇಂತಹ ದೌರ್ಜನ್ಯಗಳ ತಡೆ ಕುರಿತು ಕೇಂದ್ರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 2011ರಲ್ಲಿ ರೂಪಿಸಿರುವ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನೀತಿ ಹೀಗೆ ಹೇಳುತ್ತದೆ.

l ಮಹಿಳಾ ಕ್ರೀಡಾಪಟುಗಳ ಸುರಕ್ಷತೆ ಮತ್ತು ದೌರ್ಜನ್ಯ ತಡೆಗೆ ಕ್ರಮಗಳನ್ನು ತೆಗೆದುಕೊಳ್ಳುವುದು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು (ಎನ್‌ಎಸ್‌ಎಫ್‌), ಭಾರತ ಒಲಿಂಪಿಕ್ಸ್ ಸಂಸ್ಥೆ ಮತ್ತು ಇತರ ಕ್ರೀಡಾ ಸಂಸ್ಥೆಗಳ ಜವಾಬ್ದಾರಿಯಾಗಿದೆ

l ಎನ್‌ಎಸ್‌ಎಫ್‌ಗಳು ತಾವು ರೂಪಿಸುವ ಕಾಯ್ದೆ ಅಥವಾ ನಿಯಮಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ನಿಯಮಗಳನ್ನೂ ಸೇರಿಸಬೇಕು. ನಿಯಮಗಳನ್ನು ಉಲ್ಲಂಘಿಸಿದವರಿಗೆ ತಕ್ಕ ದಂಡನೆ ವಿಧಿಸಬೇಕು

l ಆರೋಗ್ಯ, ನೈರ್ಮಲ್ಯದ ಕುರಿತು ಮಹಿಳಾ ಕ್ರೀಡಾಪಟುಗಳಿಗೆ ಯಾವುದೇ ಪ್ರತಿಕೂಲ ವಾತಾವರಣವಿಲ್ಲ ಎಂಬುದನ್ನು ಖಚಿತಪಡಿಸಬೇಕು

l ತಮ್ಮ ಮೇಲಾಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಲು ಮಹಿಳೆಯರಿಗೆ ಮುಕ್ತ ವಾತಾವರಣ ರೂಪಿಸಬೇಕು. ಅದಕ್ಕಾಗಿ ಸೂಕ್ತ ವೇದಿಕೆ ಹಾಗೂ ಅವಕಾಶ ಕಲ್ಪಿಸಬೇಕು

l ಸಂತ್ರಸ್ತೆ ನೀಡಿದ ದೂರು ಕುರಿತು ಕ್ರಮ ಕೈಗೊಳ್ಳಲು ಎನ್ಎಸ್‌ಎಫ್‌ಗಳು ದೂರು ಪರಿಹಾರ ವ್ಯವಸ್ಥೆ ರೂಪಿಸಬೇಕು. ಸಮಯಮಿತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಆರೋಪಿಯ ನಡವಳಿಕೆಯು ದುಷ್ಕೃತ್ಯಕ್ಕೆ ಸಮಾನ ಎಂದು ಕಂಡುಬಂದರೆ ನಿಯಮಗಳನುಸಾರ ಶಿಸ್ತು ಕ್ರಮ ಕೈಗೊಳ್ಳಬೇಕು

l ಕ್ರಿಮಿನಲ್ ಮೊಕದ್ದಮೆ: ಭಾರತೀಯ ದಂಡಸಂಹಿತೆಯ ಪ್ರಕಾರ ಅಥವಾ ಇತರ ಯಾವುದೇ ಕಾನೂನಿನಡಿ ಆರೋಪಿಯ ಕೃತ್ಯವು ನಿರ್ದಿಷ್ಟ ಅಪರಾಧಕ್ಕೆ ಸಮಾನವಾದಾಗ ಎನ್‌ಎಸ್‌ಎಫ್‌ಗಳು ಸಂಬಂಧಿಸಿದ ಪ್ರಾಧಿಕಾರದಲ್ಲಿ ದೂರು ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಂತದಲ್ಲಿ ಸಂತ್ರಸ್ತರಿಗೆ ಅನ್ಯಾಯ ಅಥವಾ ತಾರತಮ್ಯ ಆಗುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು

l ಸಮಿತಿ ರಚನೆ: ಸಂತ್ರಸ್ತ ಕ್ರೀಡಾಪಟುವಿನ ದೂರು ಕುರಿತು ಕ್ರಮ ಕೈಗೊಳ್ಳಲು ಸಮಿತಿಯ ಅಗತ್ಯವಿದೆ ಎಂದಾದರೆ, ಸಮಿತಿ ರಚಿಸಬೇಕು. ವಿಶೇಷ ಸಮಾಲೋಚಕರನ್ನು ನೇಮಿಸಬೇಕು, ಗೋಪ್ಯತೆ ಕಾಯ್ದುಕೊಳ್ಳಬೇಕು ಮತ್ತು ಇತರ ನೆರವು ಒದಗಿಸಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಸಮಿತಿಗೆ ಮಹಿಳೆಯ ನೇತೃತ್ವ ಇರಬೇಕು. ಅಲ್ಲದೆ ಅರ್ಧದಷ್ಟು ಸದಸ್ಯರು ಮಹಿಳೆಯರಾಗಿರಬೇಕು. ಇದಲ್ಲದೆ, ಯಾವುದೇ ಅನಗತ್ಯ ಒತ್ತಡ ಅಥವಾ ಪ್ರಭಾವದ ಸಾಧ್ಯತೆಯನ್ನು ತಡೆಗಟ್ಟಲು, ಅಂತಹ ದೂರುಗಳ ಸಮಿತಿಯು ಲೈಂಗಿಕ ಕಿರುಕುಳದ ವಿಷಯದ ಬಗ್ಗೆ ಪರಿಣತಿ ಹೊಂದಿರುವ ಎನ್‌ಜಿಒ ಅಥವಾ ಇತರ ಸಂಸ್ಥೆಯನ್ನು ಒಳಗೊಂಡಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT