ಫಿಟ್‌ನೆಸ್‌ ಜಾಗೃತಿಗೆ ‘ಸ್ಯಾರಿ ರನ್‌’

7

ಫಿಟ್‌ನೆಸ್‌ ಜಾಗೃತಿಗೆ ‘ಸ್ಯಾರಿ ರನ್‌’

Published:
Updated:
ಕಳೆದ ವರ್ಷ ಜಯನಗರದಲ್ಲಿ ನಡೆದಿದ್ದ ‘ಸ್ಯಾರಿ ರನ್‌’ನಲ್ಲಿ ಭಾಗವಹಿಸಿದ್ದ ಮಹಿಳೆಯರು

ಫಿಟ್‌ನೆಸ್‌ ಅನ್ನೋದು ಮಹಿಳೆಯರೂ ಸೇರಿದಂತೆ ಕುಟುಂಬದ ಎಲ್ಲರಿಗೂ ಅತ್ಯಗತ್ಯ. ಆದರೆ ಫಿಟ್‌ನೆಸ್‌ಗಾಗಿ ನಡೆಸುವ ಕಸರತ್ತಿನ ವೇಳೆ ಇಂಥದ್ದೇ ಡ್ರೆಸ್‌ ತೊಡಬೇಕು ಎಂಬ ಅಪನಂಬಿಕೆ ಬಹಳಷ್ಟು ಮಹಿಳೆಯರನ್ನು ಕಾಡುತ್ತಿದೆ. ಇದರಿಂದಾಗಿ ಹಲವರು ಫಿಟ್‌ನೆಸ್‌ನಿಂದ ದೂರ ಇದ್ದಾರೆ.

ಮಹಿಳೆಯರಲ್ಲಿನ ಇಂಥ ಮಿಥ್‌ಗಳನ್ನು ದೂರ ಮಾಡಿ, ಫಿಟ್‌ನೆಸ್‌ ಕುರಿತು ಜಾಗೃತಿ ಮೂಡಿಸಲು ‘ಜಯನಗರ ಜಾಗ್ವಾರ್ಸ್‌’ ರನ್ನರ್ಸ್‌ ತಂಡ ಮಲ್ಲೇಶ್ವರಂನಲ್ಲಿ ಭಾನುವಾರ ಬೆಳಿಗ್ಗೆ 6 ಗಂಟೆಗೆ ‘ಸ್ಯಾರಿ ರನ್‌’ ಆಯೋಜಿಸಿದೆ.

ಸಾಮಾನ್ಯವಾಗಿ ಜಾಗಿಂಗ್‌ ಮಾಡುವ ಮಹಿಳೆಯರು ಓಡಲು ಅನುಕೂಲವಾಗಲೆಂದು ‘ಟ್ರ್ಯಾಕ್‌ಶೂಟ್‌’, ‘ಶಾರ್ಟ್ಸ್‌’, ‘ಟೀಶರ್ಟ್‌’ಗಳನ್ನು ಧರಿಸಿರುತ್ತಾರೆ. ಈ ಡ್ರೆಸ್‌ಗಳನ್ನು ತೊಡಬೇಕಲ್ಲಾ ಎಂಬ ಕಾರಣಕ್ಕೆ ಕೆಲ ಮಹಿಳೆಯರು ಓಟದತ್ತಲೇ ಮುಖ ಮಾಡುತ್ತಿಲ್ಲ. ಇನ್ನೂ ಕೆಲವರಿಗೆ ಆಸಕ್ತಿ ಇದೆಯಾದರೂ, ಸಾಂಪ್ರದಾಯಿಕ ಭಾವನೆಗಳು ಅವರನ್ನು ತಡೆಯುತ್ತಿವೆ. ಆದರೆ ಇವು ಅವರನ್ನು ಫಿಟ್‌ನೆಸ್‌ನಿಂದಲೇ ದೂರವಿಡುತ್ತವೆ. ಹೀಗಾಗಿ ಅವರಲ್ಲಿ ಫಿಟ್‌ನೆಸ್‌ ಕುರಿತು ಅರಿವು ಮೂಡಿಸಲು ‘ಸೀರೆ ಓಟ’ ಆಯೋಜಿಸಿದ್ದೇವೆ ಎನ್ನುತ್ತಾರೆ ‘ಜಯನಗರ ಜಾಗ್ವಾರ್ಸ್‌’ನ ಸದಸ್ಯ ದರ್ಶನ್‌ ಜೈನ್‌.

‘ನಮ್ಮ ಗುಂಪಿನಲ್ಲಿ 600ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಅವರಲ್ಲಿ 240 ಮಹಿಳೆಯರು. ಇವರು ಓಟದ ಸಂದರ್ಭದಲ್ಲಿ, ಅದಕ್ಕೆ ಅನುಕೂಲವಾಗುವ ಡ್ರೆಸ್‌ಗಳನ್ನು ತೊಡುತ್ತಾರಷ್ಟೇ. ಓಟದ ನಂತರ ದೈನಂದಿನ ಚಟುವಟಿಕೆಗಳಿಗೆ ಸೀರೆ, ಚೂಡಿದಾರ್‌, ಸಲ್ವಾರ್‌ ಸೇರಿದಂತೆ ತಮಗಿಷ್ಟವಾದ ಉಡುಗೆಗಳನ್ನುಡುತ್ತಾರೆ. ಹಾಗಾಗಿ ಉಡುಗೆ, ತೊಡುಗೆಯು ಫಿಟ್‌ನೆಸ್‌ಗೆ ಅಡ್ಡಿಯಾಗಬಾರದು ಎನ್ನುವುದಷ್ಟೇ ಈ ಓಟದ ಹಿಂದಿನ ಉದ್ದೇಶ’ ಎನ್ನುತ್ತಾರೆ ಅವರು.

ಇದಕ್ಕಾಗಿ ಜಯನಗರ ಜಾಗ್ವಾರ್ಸ್‌ ತಂಡ ಮೂರು ವರ್ಷದಿಂದ ವರ್ಷಕ್ಕೊಮ್ಮೆ ‘ಸ್ಯಾರಿ ರನ್‌’ ಆಯೋಜಿಸಿಕೊಂಡು ಬಂದಿದೆ. ಜಯನಗರ, ವಿಜಯನಗರ, ಇಂದಿರಾನಗರ, ಎಚ್‌ಎಸ್‌ಆರ್‌ ಬಡಾವಣೆ, ಕನಕಪುರ ರಸ್ತೆ, ವೈಟ್‌ಫೀಲ್ಡ್‌, ಹೆಬ್ಬಾಳ, ಮಲ್ಲೇಶ್ವರದಲ್ಲಿ ನಮ್ಮ ತಂಡದ ಸದಸ್ಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹಿಂದಿನ ಎರಡು ವರ್ಷ ಜಯನಗರದಲ್ಲಿ ಈ ಓಟ ನಡೆದಿತ್ತು. ಈ ಬಾರಿ ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿ ನಡೆಯಲಿದೆ. ಇದು ಮೂರು ಕಿ.ಮೀವರೆಗಿನ ಓಟ ಎಂದು ಅವರು ವಿವರಿಸುತ್ತಾರೆ.

ಸವಾಲು ಎದುರಿಸಲು ಫಿಟ್‌ನೆಸ್‌ಬೇಕು: ‘ಕುಟುಂಬ, ಸಮಾಜ ಮತ್ತು ಉದ್ಯೋಗದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುವ ಮಹಿಳೆಯರಿಗೆ ದೈಹಿಕ ಮತ್ತು ಮಾನಸಿಕವಾಗಿ ಫಿಟ್‌ ಆಗಿರಬೇಕಾದ ಅಗತ್ಯವಿದೆ. ಇದಕ್ಕೆ ಡ್ರೆಸ್‌ ತೊಡಕಾಗಬಾರದು. ಸ್ಯಾರಿ ತೊಟ್ಟಿಕೊಂಡು ಜಾಗ್‌ ಮಾಡಬಹುದು, ಓಡಬಹುದು ಎಂಬ ಸಂದೇಶ ಸಾರಲು ಹಾಗೂ ಫಿಟ್‌ನೆಸ್‌ನಿಂದ ದೂರ ಇರುವ ಮಹಿಳೆಯರನ್ನು ಓಟದತ್ತ ಆಕರ್ಷಿಸಿ ಫಿಟ್‌ನೆಸ್‌ ಮಹತ್ವವನ್ನು ತಿಳಿಸಲು ಸಾಂಕೇತಿಕವಾಗಿ ಈ ಓಟ ನಡೆಸಲಾಗುತ್ತಿದೆ’ ಎನ್ನುತ್ತಾರೆ ತಂಡದ ಓಟಗಾರ್ತಿ ರೋಹಿಣಿ ನಾಯರ್‌.

‘ನಮ್ಮ ತಂಡದಲ್ಲಿ ವಿದ್ಯಾರ್ಥಿನಿಯರು, ಉದ್ಯೋಗಿಗಳು, ಗೃಹಿಣಿಯರು ಇದ್ದಾರೆ. ಅವರು ಬೆಳಿಗ್ಗೆ 5.30ಕ್ಕೆ ಎದ್ದು ನಮ್ಮೊಡನೆ ಓಟದಲ್ಲಿ ಪಾಲ್ಗೊಳ್ಳುತ್ತಾರೆ. ಓಟದ ನಂತರ ತಮ್ಮ ದೈನಂದಿನ ಕಾರ್ಯದಲ್ಲಿ ತೊಡಗುತ್ತಾರೆ. ಲವಲವಿಕೆ, ಉತ್ಸಾಹ, ಉಲ್ಲಾಸದಿಂದ ಇರಲು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಓಟ ಅವರಿಗೆ ನೆರವಾಗಿದೆ’ ಎನ್ನುತ್ತಾರೆ ಅವರು.

ನೋಂದಣಿಗೆ ಸಂಪರ್ಕಿಸಿ: ಸ್ಯಾರಿ ರನ್‌ನಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಿಕೊಳ್ಳಬೇಕು. ಯಾವುದೇ ಪ್ರವೇಶ ಶುಲ್ಕವಿಲ್ಲ. ಸೀರೆಯುಟ್ಟು ಬಂದಿರಬೇಕು. ಓಟಗಾರರಿಗೆ ನೀರು, ಬಾಳೆ ಹಣ್ಣು, ಬಿಸ್ಕತ್ತಿನ ವ್ಯವಸ್ಥೆ ಮಾಡಲಾಗಿರುತ್ತದೆ. ನೋಂದಣಿಗೆ ಸಂಪರ್ಕಿಸಿ: 9845055414

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !