ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಚೇತನದ ಹಂಬಲ; ಹೊಸತನದ ರಿಂಗಣ

Last Updated 17 ಜೂನ್ 2018, 12:56 IST
ಅಕ್ಷರ ಗಾತ್ರ

ಮೋಡ ಮುಸುಕಿದ ಬೆಂಗಳೂರಿನ ವಾತಾವರಣದಲ್ಲಿ ಭಾರತ ಹಾಕಿ ತಂಡ ಕಠಿಣ ಅಭ್ಯಾಸ ನಡೆಸಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅನುಭವಿಸಿದ ಸೋಲಿನಿಂದಾಗಿ ತಂಡದ ಸುತ್ತ ಆವರಿಸಿರುವ ಕಾರ್ಮೋಡ ಕಳೆಯಲು ನಡೆಸುತ್ತಿರುವ ಪ್ರಯತ್ನದ ಫಲವನ್ನು ಹುಡುಕುತ್ತ ತಂಡ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯತ್ತ ಹೆಜ್ಜೆ ಹಾಕಲು ಸಜ್ಜಾಗಿದೆ.

ಜೂನ್ 23ರಿಂದ ನೆದರ್‌ಲ್ಯಾಂಡ್ಸ್‌ನ ಬ್ರೇಡಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ತಂಡ ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದೆ. ಕಾಮನ್‌ವೆಲ್ತ್ ಕೂಟದಲ್ಲಿ ಪುರುಷರ ತಂಡದಂತೆ ಭಾರತದ ಮಹಿಳಾ ತಂಡ ಕೂಡ ನಿರಾಸೆ ಅನುಭವಿಸಿತ್ತು. ಆದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಮಹಿಳೆಯರ ತಂಡ ಸಮಾಧಾನಪಟ್ಟಿತ್ತು. ಫೈನಲ್‌ನಲ್ಲಿ 0–1 ಗೋಲಿನಿಂದ ಆತಿಥೇಯ ಕೊರಿಯಾಗೆ ಮಣಿದಿತ್ತು. ಈಗ ಪುರುಷರ ತಂಡದ ಸರದಿ.

ಕಾಮನ್‌ವೆಲ್ತ್ ಕೂಟದಲ್ಲಿ ವೈಫಲ್ಯ ಕಂಡ ಕಾರಣ ಎರಡೂ ತಂಡಗಳ ಕೋಚ್‌ಗಳನ್ನು ಅದಲು ಬದಲು ಮಾಡಲಾಗಿತ್ತು. ಮಹಿಳಾ ತಂಡಕ್ಕೆ ತರಬೇತು ನೀಡುತ್ತಿದ್ದ ಹರೇಂದರ್‌ ಸಿಂಗ್‌ ಈಗ ಪುರುಷರ ತಂಡದ ಕೋಚ್‌. ಅವರಿಗೂ ತಮ್ಮ ಚಾಕಚಕ್ಯತೆ ಸಾಬೀತು ಮಾಡುವ ಸವಾಲು ಚಾಂಪಿಯನ್ಸ್ ಟ್ರೋಫಿಯಲ್ಲಿ ಎದುರಾಗಿದೆ.

ಒಲಿಂಪಿಕ್ ಚಾಂಪಿಯನ್‌ ಅರ್ಜೆಂಟೀನಾ, ಹಾಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿರುವ ಬೆಲ್ಜಿಯಂ ಜೊತೆಯಲ್ಲಿ ಬಲಿಷ್ಠ ಪಾಕಿಸ್ತಾನ ಮತ್ತು ಆತಿಥೇಯರನ್ನು ಎದುರಿಸಿ ಜಯಿಸುವುದು ಸುಲಭ ಸಾಧ್ಯವಲ್ಲ. ಈ ಕಾರಣದಿಂದಲೇ ಅನುಭವಿಗಳ ಪಡೆಯನ್ನೇ ಕಣಕ್ಕೆ ಇಳಿಸಲು ತಂಡದ ಆಡಳಿತ ನಿರ್ಧರಿಸಿದೆ. ಮುಂದಿನ ನವೆಂಬರ್‌–ಡಿಸೆಂಬರ್‌ನಲ್ಲಿ ಭುವನೇಶ್ವರದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಎದೆಯುಬ್ಬಿಸಿ ಆಡಬೇಕಾದರೆ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ಗಮನ ಸೆಳೆಯುವಂಥ ಆಟ ಆಡಲೇಬೇಕು.

ಹೊಸ ಚೇತನದ ಕನಸು
ಭಾರತದಲ್ಲೇ ನಡೆಯಲಿರುವ ವಿಶ್ವಕಪ್‌ ದೃಷ್ಟಿಯಲ್ಲಿರಿಸಿಕೊಂಡು ಪಿ.ಆರ್.ಶ್ರೇಜೇಶ್ ನೇತೃತ್ವದಲ್ಲಿ ತಂಡಕ್ಕೆ ಹೊಸ ಚೈತನ್ಯ ತುಂಬುವ ಕಾರ್ಯ ಬೆಂಗಳೂರಿನ ಸಾಯ್‌ ಆವರಣದಲ್ಲಿನ ತರಬೇತಿ ಶಿಬಿರದಲ್ಲಿ ನಡೆದಿದೆ. ತಂಡಕ್ಕೆ ಪುನಶ್ಚೇತನ ನೀಡುವಂತೆ ಇಲ್ಲಿ ತರಬೇತಿಯನ್ನು ವಿನ್ಯಾಸಗೊಳಿಸಲಾಗಿತ್ತು. ಚೆಂಡಿನ ಮೇಲೆ ಹೆಚ್ಚು ಕಾಲ ಹಿಡಿತ ಸಾಧಿಸುವುದು, ಅಂಗಣದಲ್ಲಿ ನಡೆಸುವ ಸಂವಹನವನ್ನು ಪರಿಣಾಮಕಾರಿಗೊಳಿಸುವುದು, ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಬಿಟ್ಟುಕೊಡದೇ ಇರುವುದು, ಕೊಟ್ಟರೂ ಎದುರಾಳಿ ತಂಡ ಗೋಲು ಗಳಿಸದಂತೆ ನೋಡಿಕೊಳ್ಳುವುದು, ರಕ್ಷಣಾ ವಿಭಾಗವನ್ನು ಬಲಿಷ್ಠಗೊಳಿಸುವುದು...ಹೀಗೇ ನಾನಾ ಕೋನಗಳಲ್ಲಿ ತಂಡಕ್ಕೆ ಮರು ಜೀವ ನೀಡುವ ಕಾರ್ಯ ನಡೆದಿದೆ. ಅನುಭವಿ, ಹಿರಿಯ ಆಟಗಾರರ ಜೊತೆ ನಾಲ್ವರು ಯುವ ಆಟಗಾರರಿಗೂ ಅವಕಾಶ ನೀಡಿರುವ ತಂಡ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಯಾವ ರೀತಿಯ ಫಲಿತಾಂಶವನ್ನು ಹೊತ್ತು ತರುತ್ತದೆ ಎಂಬುದರ ಮೇಲೆ ಹಾಕಿ ಪ್ರಿಯರ ಗಮನ ನೆಟ್ಟಿದೆ. 

**

ಗೋಲು ಗಳಿಕೆಯಲ್ಲಿ ಹಿಂದೆ ಬಿದ್ದುದೇ ಕಾಮನ್‌ವೆಲ್ತ್ ಕೂಟದಲ್ಲಿ ತಂಡದ ಪರಾಜಯಕ್ಕೆ ಕಾರಣ. ಈ ವಿಷಯದ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು ವಿಶೇಷ ತಂತ್ರಗಳಿಗೆ ಮೊರೆ ಹೋಗಲಾಗಿದೆ. ಇದರ ಪರಿಣಾಮವನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಬುದಾಗಿದೆ.
ಪಿ.ಆರ್.ಶ್ರೀಜೇಶ್‌,  ಭಾರತ ತಂಡದ ನಾಯಕ

**

ಆಟಗಾರರ ಮನೋಬಲ ಹೆಚ್ಚಿಸಲು ಅಭ್ಯಾಸದ ವೇಳೆ ಹೆಚ್ಚು ಗಮನ ನೀಡಲಾಗಿದೆ. ಕಾಮನ್‌ವೆಲ್ತ್ ಕೂಟದಲ್ಲಿ ಮಾಡಿದ ತಪ್ಪುಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ನಮ್ಮ ಪ್ರಮುಖ ಉದ್ದೇಶ. ಫಾರ್ವರ್ಡ್‌ ವಿಭಾಗವನ್ನು ಬಲಪಡಿಸುವುದರ ಕಡೆಗೂ ಗಮನ ನೀಡಲಾಗಿದೆ.
ಚಿಂಗ್ಲೆನ್ಸಾನಾ ಸಿಂಗ್‌, ಭಾರತ ತಂಡದ ಉಪನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT