ಹಾಕಿ: ಸೆಮಿಫೈನಲ್‌ಗೆ ಜಪಾನ್‌ ತಂಡ

ಶುಕ್ರವಾರ, ಜೂನ್ 21, 2019
24 °C

ಹಾಕಿ: ಸೆಮಿಫೈನಲ್‌ಗೆ ಜಪಾನ್‌ ತಂಡ

Published:
Updated:
Prajavani

ಭುವನೇಶ್ವರ: ಯಮಸಾಕಿ ಕೋಜಿ ಗಳಿಸಿದ ಎರಡು ಸೊಗಸಾದ ಗೋಲುಗಳ ಬಲದಿಂದ ಜಪಾನ್‌ ತಂಡವು ಐಎಚ್‌ಎಫ್‌ ಸಿರೀಸ್‌ ಹಾಕಿ ಕ್ರಾಸ್‌ ಒವರ್‌ ಪಂದ್ಯದಲ್ಲಿ ಪೋಲೆಂಡ್‌ ತಂಡವನ್ನು 6–2 ಗೋಲುಗಳಿಂದ ಸೋಲಿಸಿ ಸೆಮಿಫೈನಲ್‌ ತಲುಪಿತು.

ಜಪಾನ್‌ ಶುಕ್ರವಾರ ನಡೆಯುವ ಸೆಮಿಫೈನಲ್‌ನಲ್ಲಿ ಆತಿಥೇಯ ಭಾರತ ವಿರುದ್ಧ ಆಡಲಿದೆ. ದಕ್ಷಿಣ ಆಫ್ರಿಕಾ, ಇನ್ನೊಂದು ಸೆಮಿಫೈನಲ್‌ನಲ್ಲಿ ಅಮೆರಿಕ ವಿರುದ್ಧ ಆಡಲಿದೆ.

ದಕ್ಷಿಣ ಆಫ್ರಿಕಾ ಇನ್ನೊಂದು ಪಂದ್ಯದಲ್ಲಿ ರಷ್ಯಾ ತಂಡವನ್ನು 2–1 ಗೋಲುಗಳಿಂದ ಮಣಿಸಿತು.

ಜಪಾನ್‌ ತಂಡದ ಪರ ಕೋಜಿ (36, 60ನೇ ನಿಮಿಷ), ಯಮಾದಾ ಶೋಟಾ (20ನೇ ನಿಮಿಷ), ಜೆಂಡಾನಾ ಹೀರೊಟಕಾ (23ನೇ ನಿಮಿಷ), ತಾನಕ ಕೆಂಟಾ (34ನೇ ನಿಮಿಷ), ಕಿಟಜಾಟೊ ಕೆಂಜಿ (47ನೇ ನಿಮಿಷ) ಗೋಲು ದಾಖಲಿಸಿದರು. ಗಮ್ನಿ ಮಿಕೋಲಾಜ್‌ (7ನೇ ನಿಮಿಷ) ಹಾಗೂ ಹುಲ್‌ಬೋಜ್‌ ಮೆಟಿಯುಸ್‌ ಅವರು ಪರಾಜಿತ ಪೋಲೆಂಡ್‌ ತಂಡದ ಪರ ಗೋಲು ಬಾರಿಸಿದರು.

ಏರಿದ ತಾಪಮಾನ: ಉರಿಬಿಸಿಲಿನಲ್ಲಿ ನಡೆದ ಪಂದ್ಯದಲ್ಲಿ ಮೆಕ್ಸಿಕೊ 4–3 ಗೋಲುಗಳಿಂದ ಉಜ್ಬೆಕಿಸ್ತಾನ ತಂಡವನ್ನು ಸೋಲಿಸಿ ಟೂರ್ನಿಯಲ್ಲಿ ಏಳನೇ ಸ್ಥಾನ ಪಡೆಯಿತು.

ಧಗೆ ಹೆಚ್ಚು ಇದ್ದ ಕಾರಣ ಪ್ರತಿ ಕ್ವಾರ್ಟರ್‌ಗಳ ನಡುವೆ ವಿರಾಮದ ಅವಧಿಯನ್ನು ಸ್ವಲ್ಪ ವಿಸ್ತರಿಸಲಾಯಿತು. ನಿಗದಿತ ಎರಡು ನಿಮಿಷಗಳ ವಿಶ್ರಾಂತಿಯನ್ನು ನಾಲ್ಕು ನಿಮಿಷಗಳಿಗೆ ಹೆಚ್ಚಿಸಲಾಯಿತು.

ಉತ್ತರಾರ್ಧದಲ್ಲಿ ಬಿಸಿಲಿನ ಬೇಗೆ ತೀವ್ರವಾಗಿದ್ದು, ನಾಲ್ಕು ಕ್ವಾರ್ಟರ್‌ನಂತೆ ನಡೆಯಿತು.

ಮೂರು ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ ಏಳೂವರೆ ನಿಮಿಷಗಳ ನಂತರ ಆಟಗಾರರು ಮತ್ತು ಅಂಪೈರ್‌ಗಳಿಗೆ ನೀರು ಕುಡಿಯಲು ಒಂದು ನಿಮಿಷದ ಬ್ರೇಕ್‌ ನೀಡಲಾಯಿತು. ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿ ತಾಪಮಾನ ಪಂದ್ಯದ ಮೇಲೆ ಇಷ್ಟೊಂದು ಪರಿಣಾಮ ಬೀರಿದೆ.

ಟೂರ್ನಿಯಲ್ಲಿ ಈ ಎರಡು ತಂಡಗಳು ಕೆಳಕ್ರಮಾಂಕದಲ್ಲಿದ್ದು, ಮೆಕ್ಸಿಕೊ 39ನೇ ಸ್ಥಾನದಲ್ಲಿದ್ದರೆ, ಉಜ್ಬೇಕ್‌ ತಂಡ 43ನೇ ಸ್ಥಾನದಲ್ಲಿದೆ. ಉಜ್ಬೇಕಿಸ್ತಾನ ಒಂದೂ ಪಾಯಿಂಟ್‌ ಪಡೆಯಲಾಗದೇ ಎಂಟನೇ ಹಾಗೂ ಕೊನೆಯ ಸ್ಥಾನಕ್ಕೆ ಸರಿಯಿತು. 

ತಾಪಮಾನ 40 ಡಿಗ್ರಿಗಿಂತ ಹೆಚ್ಚು ಇದ್ದು, ಬಿಸಿಗಾಳಿಯ ಕಾರಣ ಶುಕ್ರವಾರದ ಸೆಮಿಫೈನಲ್‌ ಪಂದ್ಯಗಳನ್ನು ಬೆಳಿಗ್ಗೆ 8.45ರ ಬದಲು 8 ಗಂಟೆಗೆ ನಡೆಸಲಾಗುವುದು ಎಂದು ಇಂಟರ್‌ನ್ಯಾಷನಲ್‌ ಹಾಕಿ ಫೆಡರೇಷನ್ (ಎಫ್‌ಐಎಚ್‌) ತಿಳಿಸಿತು.

ಇಲ್ಲಿನ ಉರಿಬಿಸಿಲನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥಾಪಕರು ಬೆಳಗಿನ ಪಂದ್ಯವನ್ನು 8.45ಕ್ಕೆ, ಸಂಜೆಯ ಪಂದ್ಯಗಳನ್ನು 5 ಮತ್ತು 7 ಗಂಟೆಗೆ ನಿಗದಿಗೊಳಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !