ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಇಲ್ಲದವರೆಂದು ಅಗೌರವ

Last Updated 28 ಫೆಬ್ರುವರಿ 2018, 7:09 IST
ಅಕ್ಷರ ಗಾತ್ರ

ಹೊಸನಗರ: ‘ಅನುದಾನ ಇಲ್ಲದವರು ಎಂದು ನಮಗೆ ಎಲ್ಲರೂ ಅಗೌರವ ತೋರುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಅವಲತ್ತುಕೊಂಡರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪ ಗೌಡ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಮಂಗಳವಾರ ನಡೆಯಿತು.

ತಾಲ್ಲೂಕು ಪಂಚಾಯ್ತಿ ಕೇವಲ ಪೋಸ್ಟ್‌ಆಫೀಸ್ ಆಗಿ, ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದೆ. ನಮಗೆ ಸರ್ಕಾರದ ಯೋಜನೆಗಳು, ಬರುವ ಅನುದಾನವು ಕಡಿಮೆ. ಇದರಿಂದ ಸಾರ್ವಜನಿಕರು, ಅಧಿಕಾರಿಗಳು, ಸರ್ಕಾರಿ ನೌಕರರು ಸಹ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಎಲ್ಲಾ ಸದಸ್ಯರು ಒಕ್ಕೊರಲಿನಿಂದ ದೂರಿದರು.

ಶಿಷ್ಟಾಚಾರ ಉಲ್ಲಂಘನೆ: ‘ಖಾಸಗಿ ಶಾಲೆಗಳು ಹೆಚ್ಚುವರಿ ಡೊನೆಷನ್ ಪಡೆಯುತ್ತಿವೆ. ಹೀಗಾಗಿ ಅವರಿಗೆ ಕಂದಾಯದಲ್ಲಿ ಯಾವುದೇ ರಿಯಾಯಿತಿ ನೀಡಬಾರದು. ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾರ್ಯಕ್ರಮಗಳಿಗೆ ಉದ್ದೇಶಪೂರ್ವಕವಾಗಿ ನಮಗೆ ಆಹ್ವಾನ ನೀಡದೇ ಅಪಮಾನ ಮಾಡಲಾಗುತ್ತಿದೆ. ಶಿಷ್ಟಾಚಾರ ಉಲ್ಲಂಘಿಸಲಾಗುತ್ತಿದೆ’ ಎಂದು ಕಾಲ್ಸಸಿ ಸತೀಶ ಆರೋಪಿಸಿದರು.

‘ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳದ್ದೇ ದರ್ಬಾರು. ಅಧಿಕಾರಿಗಳ, ಜನಪ್ರತಿನಿಧಿಗಳ ಮಾತಿಗೆ ಬೆಲೆಯೇ ಇಲ್ಲ’ ಎಂದು ಸದಸ್ಯ ಎರಗಿ ಉಮೇಶ ಕಿಡಿಕಾರಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸದ ಇಲಾಖಾ ಅಧಿಕಾರಿ ಹಾಗೂ ಶಾಲಾ ಶಿಕ್ಷಕರ ಮೇಲೆ ಕ್ರಮ ಜರುಗಿಸುವ ನಿರ್ಣಯಕ್ಕೆ ಸಭೆಯು ಅಂಗೀಕಾರ ನೀಡಿತು.

ಹನಿ ನೀರಾವರಿ ಸಬ್ಸಿಡಿ ವಿಳಂಬ: ಹನಿ ನೀರಾವರಿ ಯೋಜನೆಯಲ್ಲಿ ಸಬ್ಸಿಡಿ ಹಣ ಬಿಡುಗಡೆ ಮಾಡುವಲ್ಲಿ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ಕೂಡಲೇ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಬೇಕು ಎಂದು ಸದಸ್ಯ ಚಂದ್ರಮೌಳಿ ಒತ್ತಾಯಿಸಿದರು.

ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡ ತೆಗೆಯಲು ಸುಮಾರು ₹ 23 ಲಕ್ಷ ಅನುದಾನ ಬಿಡುಗಡೆಗಾಗಿ ಮನವಿ ಸಲ್ಲಿಸಲಾಗಿದೆ. ಪ್ರಾಯೋಗಿಕವಾಗಿ ತಾಲ್ಲೂಕಿನ ಬಯಲು ಸೀಮೆ ಪ್ರದೇಶಗಳಲ್ಲಿ ಈ ವರ್ಷ ಹೆಸರು, ಶೇಂಗಾ ಬಿತ್ತನೆ ಬೀಜವನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಬಸವರಾಜ ಸಭೆಗೆ ತಿಳಿಸಿದರು.

ಉಪಾಧ್ಯಕ್ಷೆ ಸುಶೀಲಮ್ಮ ಮಾತನಾಡಿ, ‘ಸಾಂಪ್ರದಾಯಿಕ ಭತ್ತದ ನಾಟಿ ಮಾಡಿದವರೂ ಯಂತ್ರದಲ್ಲಿ ನಾಟಿ ಮಾಡಿದ್ದೇವೆ ಎಂದು ಎಕರೆಗೆ ₹ 1,600 ಸಬ್ಸಿಡಿ ಪಡೆಯುತ್ತಿದ್ದಾರೆ’ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ನಿರ್ದೇಶಕ ‘ಜಿಪಿಎಸ್ ಸರ್ವೆ ಮಾಡಿ ಹಣ ನೀಡಲಾಗುವುದು’ ಎಂಬ ಭರವಸೆ ನೀಡಿದರು.

ತಾಲ್ಲೂಕಿನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡ ಬಗ್ಗೆ ವರದಿ ಆಗಿಲ್ಲ. ಜಾತ್ರೆ, ರಥೋತ್ಸವ ಸಮಯದಲ್ಲಿ ಆರೋಗ್ಯ ಇಲಾಖೆಗೆ ಮುಂಚಿತವಾಗಿ ತಿಳಿಸಿದರೆ ಸಾಂಕ್ರಾಮಿಕ ರೋಗ ಬಾರದಂತೆ ಎಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಶಾಂತರಾಜ್ ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT