ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1975ರ ಹಾಕಿ ವಿಶ್ವಕಪ್ ವಿಜಯಗಾಥೆ: ಚಿನ್ನದ ನೆನಪುಗಳ ಮೆರವಣಿಗೆ

Last Updated 25 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಆ ದಿನ ಕ್ವಾಲಾಲಂಪುರದಿಂದ ಭಾರತಕ್ಕೆ ಬಂದ ಕೂಡಲೇ ನನ್ನ ತವರೂರು ಝಾನ್ಸಿಗೆ ತೆರಳಿದೆ. ಮನೆಯಲ್ಲಿ ಅಪ್ಪನ ಮುಂದೆ ಚಿನ್ನದ ಪದಕ ಹಿಡಿದು ನಿಂತೆ. ವಿಧೇಯ ವಿದ್ಯಾರ್ಥಿಯಂತೆ ನಿಂತಿದ್ದ ನನ್ನನ್ನು ನೋಡಿದ ಅವರಿಂದ ಒಂದೇ ಒಂದು ಮಾತು ಹೊರಡಲಿಲ್ಲ. ಆದರೆ ನನ್ನ ಬೆನ್ನ ಮೇಲೆ ಮೂರು ಬಾರಿ ಪ್ರೀತಿಯಿಂದ ತಟ್ಟಿದ್ದರು ಅಷ್ಟೇ. ಅದಕ್ಕಿಂತ ದೊಡ್ಡ ಅಭಿನಂದನೆಯನ್ನು ನಾನು ಜೀವಮಾನದಲ್ಲಿಯೇ ಸ್ವೀಕರಿಸಲು ಸಾಧ್ಯವೇ ಇಲ್ಲ. ಏಕೆಂದರೆ, ಅವರು ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್. ಇಡೀ ಜಗತ್ತೇ ಅವರ ಹಾಕಿ ಆಟಕ್ಕೆ ಮನಸೋತಿತ್ತು. ಅಂತಹವರ ಮಗ ನಾನು ಎಂಬ ಹೆಮ್ಮೆ ಇದೆ. ಆದರೆ 1975ರಲ್ಲಿ ವಿಶ್ವಕಪ್ ಅನ್ನು ಭಾರತ ತಂಡವು ಗೆಲ್ಲಲು ನಾನು ಗಳಿಸಿದ ಗೋಲು ಕೂಡ ಕಾರಣವಾಗಿತ್ತು. ಆದ್ದರಿಂದ ಅಪ್ಪನ ಮುಂದೆ ಹೋಗಿ ಹೆಮ್ಮೆಯಿಂದ ನಿಲ್ಲುವ ಧೈರ್ಯ ಮಾಡಿದ್ದೆ. ಅವರಿಗೂ ನಾನು ಕೇವಲ ಧ್ಯಾನಚಂದ್ ಮಗನಾಗಿ ಅಲ್ಲ. ಉತ್ತಮ ಆಟಗಾರನಾಗಿಯೂ ಬೆಳೆದಿದ್ದೇನೆ ಎಂದು ಅನಿಸಿದ್ದು ಅವರ ನೋಟದಲ್ಲಿ ವ್ಯಕ್ತವಾಗಿತ್ತು.

ಪ್ರತಿ ಸಲ ವಿಶ್ವಕಪ್ ಹಾಕಿ ಟೂರ್ನಿ ಬಂದಾಗಲೂ ಸ್ನೇಹಿತರು, ಮಾಧ್ಯಮದವರ ಫೋನ್‌ ಕರೆಗಳು ಬರುತ್ತವೆ. ನನ್ನ ಮನದಲ್ಲಿ ನೆನಪುಗಳ ಮೆರವಣಿಗೆ ಶುರುವಾಗುತ್ತದೆ. ಆ ದಿನಗಳ ಹಾಕಿ ಆಟಕ್ಕೂ ಈಗಿನದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಯಾವುದೊ ಅಂತರರಾಷ್ಟ್ರೀಯ ಟೂರ್ನಿ, ವಿಶ್ವಕಪ್‌ಗಳಲ್ಲಿ ಪ್ರಶಸ್ತಿ ಗೆದ್ದರೆ ಲಕ್ಷಗಟ್ಟಲೇ ಹಣ, ಪ್ರಸಿದ್ಧಿ ಅಥವಾ ನೌಕರಿಗಳು ಸಿಗುತ್ತವೆ ಎನ್ನುವ ಗ್ಯಾರಂಟಿ ಇರದ ದಿನಗಳು ಅವರು. ಅದ್ಯಾವ ಆಕರ್ಷಣೆಗಳೂ ಇರಲಿಲ್ಲ. ಆದರೆ ಗೆಲ್ಲಲೇಬೇಕು, ಆಡಲೇಬೇಕು ಎಂಬ ನಮ್ಮ ಹಠವೇ ಪ್ರಧಾನವಾಗಿತ್ತು. ಅದರಲ್ಲಿ ಏನೋ ಒಂಥರಾ ಸಂತೃಪ್ತಿ ಇತ್ತು.

ನೈಜ ಹುಲ್ಲಿನ ಅಂಕಣದಲ್ಲಿ ಆಡುವ ಸವಾಲನ್ನು ಸಮರ್ಥವಾಗಿ ಎದುರಿಸಿದ್ದೆವು. ಆಗೆಲ್ಲ ಭಾರತಕ್ಕೆ ಕಠಿಣ ಎದುರಾಳಿಗಳೆಂದರೆ ಪಾಕಿಸ್ತಾನ, ಜರ್ಮನಿ, ಹಾಲೆಂಡ್ ತಂಡಗಳು. ನಮ್ಮ ಪಾದಚಲನೆ ಮತ್ತು ದೇಹದ ಮೂವ್‌ಮೆಂಟ್‌ಗಳು ಆಟದಲ್ಲಿ ಮಹತ್ವ ವಹಿಸುತ್ತಿದ್ದವು. ಪವರ್‌ಗೇಮ್‌ ಜೊತೆಗೆ ಟೆಕ್ನಿಕ್‌ಗಳನ್ನು ಮೇಳೈಸಿ ಆಡಬೇಕಿತ್ತು. ಆದರೆ ನಮಗೆ ಯಾವುದೇ ರೀತಿಯ ಕೋಚಿಂಗ್ ಇರಲಿಲ್ಲ. ಸೈಂಟಿಫಿಕ್ ಟ್ರೇನಿಂಗ್, ನೆರವು ಸಿಬ್ಬಂದಿಗಳೂ ಇರಲಿಲ್ಲ. ಟಿವಿ, ಯೂಟ್ಯೂಬ್‌ಗಳೂ ಇರುತ್ತಿರಲಿಲ್ಲ. ಆದರೆ ಬೇರೆ ಬೇರೆ ಪಂದ್ಯಗಳನ್ನು ನೋಡಿ ಕಲಿತದ್ದೇ ಹೆಚ್ಚು. ನಮ್ಮ ಹಾಗೂ ಬೇರೆ ತಂಡಗಳ ಆಟಗಾರರ ಕೌಶಲಗಳನ್ನು ನೋಡಿ ರೂಢಿಸಿಕೊಳ್ಳುತ್ತಿದ್ದೆವು. ಅವರನ್ನು ಅನುಕರಿಸುತ್ತಲೇ ನಮ್ಮ ಶೈಲಿಗೆ ಅದನ್ನು ಹೊಂದಿಸಿಕೊಳ್ಳುವತ್ತಲೂ ಗಮನ ಹರಿಸುತ್ತಿದ್ದೇವು. ನಾನು ರೈಟ್‌ ಇನ್‌ ಆಡುವಾಗ ರೈಟ್ ಆಫ್‌ ಜೊತೆಗೆ ಮತ್ತು ಲೆಫ್ಟ್‌ ಇನ್‌ ನಲ್ಲಿ ಆಡುವವರು ಲೆಫ್ಟ್‌ ವಿಂಗ್‌ನವರೊಂದಿಗೆ ಸಂಯೋಜನೆ ಮಾಡಿಕೊಂಡು ಆಡುತ್ತಿದ್ದರು. ನಮಗೆ ಬಾಬಾ ಮೋದಿ ಮಾರ್ಗದರ್ಶಕರಾಗಿದ್ದರು.

1975 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನ. ಮೊದಲರ್ಧದಲ್ಲಿಯೇ ಪಾಕ್ ತಂಡದ ಜಹೀದ್ ಗೋಲು ಗಳಿಸಿಬಿಟ್ಟರು. ವಿಶ್ರಾಂತಿಯಲ್ಲಿಯೂ 1–0 ಮುನ್ನಡೆಯಲ್ಲಿತ್ತು ಪಾಕ್. ನಮ್ಮ ಕಪ್ತಾನ ಅಜಿತ್ ಪಾಲ್ ಸಿಂಗ್ ಸಿಕ್ಕಾಪಟ್ಟೆ ಒತ್ತಡದಲ್ಲಿದ್ದರು. ಪಾಕ್ ತಂಡವನ್ನು ಎರಡನೇ ಅವಧಿಯಲ್ಲಿ ಮಣಿಸುವುದು ಸುಲಭವಲ್ಲ ಎಂದು ಹೇಳುತ್ತಿದ್ದರು. ನಾನು ಸಿಟ್ಟಿಗೆದ್ದು ‘ಈಗಲೇ ಸೋತುಬಿಟ್ಟೆವಾ? ನಮಗೂ ಆಡಲು ಬರುತ್ತೆ. ನಾವೆನೆಂದು ಅವರಿಗೆ ತೋರ್ಸೋಣ. ಚಿಂತೆ ಮಾಡಬೇಡ. ನಾವೇ ಗೆಲ್ತೀವಿ’ ಎಂದು ಗದರಿದೆ. ಪಾಲ್ ಸುಮ್ಮನಾದರು. ಕಣಕ್ಕಿಳಿದ ನಂತರ ರಚನೆಯಾಗಿದ್ದು ಇತಿಹಾಸ!

44ನೇ ನಿಮಿಷದಲ್ಲಿ ಸುರ್ಜಿತ್‌ ಪಾಕ್ ರಕ್ಷಣಾ ಗೋಡೆಯನ್ನು ಮುರಿದು ನುಗ್ಗಿದರು. ಪುಟ್ಟ ಪುಟ್ಟ ಪಾಸ್‌ಗಳ ಮೂಲಕ ತಮ್ಮ ಬಳಿ ಬಂದ ಚೆಂಡನ್ನು ಚೆಂದದ ರೀತಿಯಲ್ಲಿ ಗೋಲುಪೆಟ್ಟಿಗೆಗೆ ಸೇರಿಸಿದರು. ಸಂಭ್ರಮ ಪುಟಿದೆದಿತ್ತು. 1–1ರ ಸಮಬಲ ವಿಶ್ವಾಸ ಹೆಚ್ಚಿಸಿತ್ತು. ನಂತರದ ಆಟ ರೋಚಕವಾಗಿತ್ತು. 51ನೇ ನಿಮಿಷದಲ್ಲಿ ಲಾಂಗ್‌ ಕಾರ್ನರ್‌ನಲ್ಲಿದ್ದ ಅಜಿತ್‌ ಪಾಲ್‌ ಚೆಂಡನ್ನು ತಡೆದು ನನಗೆ ಪಾಸ್‌ ನೀಡಿದರು. ನಾನು ರೈಟ್‌ ನಲ್ಲಿದ್ದೆ. ಡಾಡ್ಜ್‌ ಮಾಡುತ್ತಾ ಸರ್ಕಲ್‌ ಎಂಟರ್ ಆದೆ. ಫಿಲಿಪ್ ಅವರಿಗೆ ಪಾಸ್ ಮಾಡಿದೆ. ಅವರು ಚುಟುಕು ಪಾಸ್‌ ಮೂಲಕ ಚೆಂಡನ್ನು ಮುನ್ನುಗಿಸಿದರು. ಗೋಲು ಪೆಟ್ಟಿಗೆಯ ಮೂರ್ನಾಲ್ಕು ಗಜ ಗಳ ದೂರದಲ್ಲಿದ್ದ ನನಗೆ ಫಿಲಿಪ್ ಪಾಸ್ ಮಾಡಿದರು. ಫ್ಲಿಕ್ ಮಾಡಿದೆ. ವೇಗವಾಗಿ ಸಾಗಿದ ಚೆಂಡು ಗೋಲುಪೆಟ್ಟಿಗೆಯನ್ನು ಪ್ರವೇಶಿಸಿತು. ಆದರೆ ಹಿಂದಿನ ಗೋಡೆಯ ತಳಕ್ಕೆ ಅಪ್ಪಳಿಸುವ ಬದಲು, ಟ್ರೈಯಂಗಲ್‌ ಗೆ ಬಡಿದು ಮರಳಿತು. ಮಲೇಷ್ಯಾದವರಾದ ಅಂಪೈರ್ ವಿಜಯನಾಥನ್ ಕೂಡಲೇ ತೀರ್ಪು ನೀಡಲಿಲ್ಲ. ಮೂರ್ನಾಲ್ಕು ಸೆಕೆಂಡುಗಳವರೆಗೆ ಯೋಚನೆ ಮಾಡಿ ಗೋಲು ಎಂದು ಘೋಷಿದರು. ಇದರಿಂದ ಕುಪಿತಗೊಂಡ ಪಾಕ್ ಆಟಗಾರರು ಪ್ರತಿಭಟಿಸಿದರು. ನಂತರ ಆಟ ಮುಗಿಯುವವರೆಗೂ ಅವರು ಬಿರುಸಿನ ಆಟಕ್ಕೆ ಇಳಿದರು. ನನ್ನ ಒಂದು ಕಣ್ಣು ಮಾತ್ರ ಬೌಂಡರಿಲೈನ್‌ ಹೊರಗೆ ಇದ್ದ ದೊಡ್ಡ ಗಡಿಯಾರದ ಮೇಲೆ ಇತ್ತು. ನಮ್ಮೆಲ್ಲರ ನರ್ವಸ್‌ ಡೌನ್ ಆಗಿತ್ತು. ಒಂದೊಂದು ಕ್ಷಣವೂ ಯುಗದಂತೆ ಭಾಸವಾಗಿತ್ತು. ಪಂದ್ಯ ಮುಕ್ತಾಯದ ವಿಷಲ್‌ ಸದ್ದು ಕೇಳಿದಾಗ ಭಾರತ 2–1ರಿಂದ ಗೆದ್ದಿತ್ತು. ಇತ್ತೀಚೆಗೆ ನಿಧನರಾದ ಜಸ್‌ದೇವ್ ಸಿಂಗ್ ಅವರು ಆಗ ರೇಡಿಯೊದಲ್ಲಿ ತಮ್ಮ ಕಂಚಿನ ಕಂಠದ ಕಾಮೆಂಟ್ರಿಯಿಂದ ಇಡೀ ದೇಶಕ್ಕೆ ಸುದ್ದಿ ಬಿತ್ತರಿಸಿದ್ದರು. ಅವರ ದನಿ ಇಂದಿಗೂ ನನ್ನನ್ನು ರೋಮಾಂಚನಗೊಳಿಸುತ್ತದೆ. ಇವತ್ತಿಗೂ ನೆನಪಿದೆ. ಬಾಲಿವುಡ್ ತಾರೆಯರಾದ ರಾಜ್‌ ಕಪೂರ್, ಶಮ್ಮಿ ಕಪೂರ್, ಅಮಿತಾಭ್ ಬಚ್ಚನ್ ಅವರೆಲ್ಲರೂ ಬಂದು ನಮ್ಮನ್ನು ಭೇಟಿಯಾಗಿದ್ದರು. ‘ನಿಮ್ಮ ಪಂದ್ಯ ನಡೆಯುವ ಸಂದರ್ಭದಲ್ಲಿ ನಮ್ಮ ಶೂಟಿಂಗ್ ನಿಲ್ಲಿಸಿ ಕಾಮೆಂಟ್ರಿ ಕೇಳಿದ್ದೇವೆ. ಅಷ್ಟೊಂದು ರೋಮಾಂಚಕವಾಗಿತ್ತು ಪಂದ್ಯ’ ಎಂದು ಹೇಳಿದ್ದರು. ರಾಷ್ಟ್ರಪತಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ, ಪ್ರಧಾನಿಗಳು ಸೇರಿದಂತೆ ಹಲವರು ಅಭಿನಂದಿಸಿದರು.

ಆದರೆ ಆಗ ನನ್ನ ಕಣ್ಣ ಮುಂದೆ ಬಂದು ನಿಂತಿದ್ದು, 1973ರ ಫೈನಲ್ ಸೋಲು. ನಿಗದಿಯ ಅವಧಿಯಲ್ಲಿ ನೆದರ್ಲೆಂಡ್ ವಿರುದ್ಧ 2–2ರ ಸಮಬಲ ಸಾಧಿಸಿದ್ದೆವು. ಹೆಚ್ಚುವರಿ ಅವಧಿಯಲ್ಲಿ ಗೋಲು ದಾಖಲಾಗಲಿಲ್ಲ. ಸಡನ್‌ ಡೆತ್‌ನಲ್ಲಿ ಅದೃಷ್ಟ ಕೈಕೊಟ್ಟಿತ್ತು. ಆತಿಥೇಯ ತಂಡದ ಅಭಿಮಾನಿಗಳ ಗದ್ದಲ, ಕೇಕೆಗಳು ಮುಗಿಲುಮುಟ್ಟಿದ್ದವು. ರೆಫರಿಯ ವಿಷಲ್ ಕೂಡ ನಮ್ಮ ಕಿವಿಗೆ ಬೀಳದಷ್ಟು ಗೌಜು ಅಲ್ಲಿತ್ತು. ತವರಿನ ತಂಡಕ್ಕೆ ಸಿಗುವ ಅಡ್ವಾಂಟೇಜ್ ಅದು. ಸಹಜವಾಗಿಯೇ ಅದು ನಮ್ಮನ್ನು ನರ್ವಸ್‌ ಮಾಡಿತ್ತು. ಸೋತ ನಂತರ ನಾವೆಲ್ಲರೂ ಬಿಕ್ಕಳಿಸಿ ಅತ್ತಿದ್ದು ಕೂಡ ಯಾರಿಗೂ ಕೇಳಿಸಿರಲಿಲ್ಲ. ಈ ಸಲ ನಮ್ಮ ದೇಶವು ಆತಿಥ್ಯ ವಹಿಸುತ್ತಿದೆ. ಇಲ್ಲಿಯ ಜನರ ಬೆಂಬಲ, ವಾತಾವರಣ ನಮ್ಮ ತಂಡಕ್ಕೆ ಸ್ಪೂರ್ತಿಯಾಗಲಿ. ಆಧುನಿಕ ಕಾಲದ ಹಾಕಿ ಆಟವು ಸುಲಭವಲ್ಲ. ಪೈಪೋಟಿ ಅಪಾರವಾಗಿದೆ. ನಮ್ಮವರೂ ಪ್ರತಿಭಾನ್ವಿತರಿದ್ದಾರೆ. ಚಿನ್ನದ ಸಂಭ್ರಮ ಗರಿಗೆದರಲಿ.

ಚಕ್‌ ದೇ ಇಂಡಿಯಾ..!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT