ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆ: ಮುಂದೇನು?

ತ್ಯಾಜ್ಯ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳನ್ನು ತುಂಬುವುದಕ್ಕೆ ವಿರೋಧ
Last Updated 19 ಮೇ 2018, 10:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ಮುಗಿದು ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ತಿಕ್ಕಾಟ ನಡೆದಿರುವ ನಡುವೆಯೇ ಜಿಲ್ಲೆಯಲ್ಲಿ ಏತ ನೀರಾವರಿ ಯೋಜನೆಯ ಅನುಷ್ಠಾನದ ವಿಚಾರದಲ್ಲಿ ನೂತನ ಸರ್ಕಾರದ ನಿಲುವು ಏನಾಗಬಹುದು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಇದೀಗ ಚರ್ಚೆ ಹುಟ್ಟು ಹಾಕಿವೆ.

ನೀರಾವರಿ ಹೋರಾಟಗಾರರ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ 11 ತಿಂಗಳ ಹಿಂದೆ ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತಗಳಲ್ಲಿ ಸಂಸ್ಕರಿಸಿ ಜಿಲ್ಲೆಯ ಆಯ್ದ ಕೆರೆಗಳನ್ನು ತುಂಬುವ ‘ಏತ ನೀರಾವರಿ’ ಯೋಜನೆಗೆ ಚಾಲನೆ ನೀಡಿತ್ತು.

ಹೆಬ್ಬಾಳ ಮತ್ತು ನಾಗವಾರ ಕಣಿವೆಯ ತ್ಯಾಜ್ಯ ನೀರು ಸಂಸ್ಕರಿಸಿ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ 65 ಕೆರೆಗಳನ್ನು ತುಂಬಿಸುವ ₹ 864 ಕೋಟಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಜುಲೈನಲ್ಲಿ ದೇವನಹಳ್ಳಿಯಲ್ಲಿ ಚಾಲನೆ ನೀಡಿದ್ದರು. ಇದೇ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಸೆಪ್ಟೆಂಬರ್‌ನಲ್ಲಿ ನೀರಾವರಿ ಹೋರಾಟಗಾರರನ್ನು ಬಂಧನದಲ್ಲಿಟ್ಟು ಶಂಕುಸ್ಥಾಪನೆ ‘ಶಾಸ್ತ್ರ’ ನೆರವೇರಿಸಲಾಗಿತ್ತು.

ಈ ಯೋಜನೆಯ ಮೂಲ ನೀಲನಕ್ಷೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ 24 ಕೆರೆ, ಶಿಡ್ಲಘಟ್ಟ 9, ಗೌರಿಬಿದನೂರು 8 , ಗುಡಿಬಂಡೆ ತಾಲ್ಲೂಕಿನ 3 ಕೆರೆಗಳು ಹೀಗೆ ಜಿಲ್ಲೆಯಲ್ಲಿ ಒಟ್ಟು 44 ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಯೋಜನೆಗೆ ಚಾಲನೆ ನೀಡಿದ ಸಿದ್ದರಾಮಯ್ಯ ಅವರು ಇದೇ ಯೋಜನೆಯಡಿ ಬಾಗೇಪಲ್ಲಿ ತಾಲ್ಲೂಕಿನ 14 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ಘೋಷಿಸಿದರು.

ಎರಡು ದಶಕಗಳ ಶಾಶ್ವತ ನೀರಾವರಿ ಹೋರಾಟದ ಪ್ರಮುಖ ಬೇಡಿಕೆಯನ್ನು ಸರ್ಕಾರ ಬದಿಗೊತ್ತಿತು. ಜನಪ್ರತಿನಿಧಿಗಳು ಎತ್ತಿನಹೊಳೆಯ ಗೊಂದಲದಲ್ಲಿರುವ ಜನರ ದಿಕ್ಕು ತಪ್ಪಿಸುವ ಮತ್ತು ದುಡ್ಡು ಮಾಡಿಕೊಳ್ಳುವ ತಂತ್ರದ ಭಾಗವಾಗಿ ತಮ್ಮ ಆಡಳಿತದ ಕೊನೆ ಅವಧಿಯಲ್ಲಿ ಈ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೊಳಿಸಿದ್ದಾರೆ. ಇದೊಂದು ಜೀವ ಸಂಕುಲಕ್ಕೆ ಮಾರಕ ಯೋಜನೆ. ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ ಎನ್ನುವುದು ಹೋರಾಟಗಾರರ ವಾದ.

ಬೆಂಗಳೂರಿನ ತ್ಯಾಜ್ಯ ನೀರಿನಲ್ಲಿ ಹಾನಿಕಾರಕ ಅಂಶಗಳಿವೆ. ಅವು ಭೂಗರ್ಭ ಜಲ, ಜನ ಜಾನುವಾರು ಆರೋಗ್ಯ, ಕೃಷಿ ಭೂಮಿ ಫಲವತ್ತತ್ತೆ ಮೇಲೆ ಭವಿಷ್ಯದಲ್ಲಿ ಸರಿಪಡಿಸಲು ಸಾಧ್ಯವೇ ಇಲ್ಲದಂತಹ ದುಷ್ಪರಿಣಾಮ ಉಂಟು ಮಾಡಲಿವೆ. ಹೀಗಾಗಿ ಈ ನೀರು ಬೇಡ ಎನ್ನುವುದು ಈ ಯೋಜನೆ ವಿರೋಧಿಸುವವರು ಹೇಳುತ್ತಾರೆ.

‘ಬರದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಅಂತರ್ಜಲ ಸಾವಿರಾರು ಅಡಿ ಆಳಕ್ಕೆ ಕುಸಿದಿದೆ. ಕೆರೆಗಳನ್ನು ತುಂಬಿಸುವ ಮೂಲಕ ನಾವು ಅದನ್ನು ಹೆಚ್ಚಿಸಲು ಉದ್ದೇಶಿಸಿದ್ದೇವೆ. ಆದರೆ ಹೋರಾಟಗಾರರು, ವಿರೋಧ ಪಕ್ಷದವರು ಆ ನೀರಿನಿಂದ ಕ್ಯಾನ್ಸರ್ ಬರುತ್ತದೆ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಜನ ನಂಬಬಾರದು’ ಎಂದು ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ನ ಶಾಸಕರೆಲ್ಲರೂ ಹೇಳುವ ಮೂಲಕ ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದರು.

ಸದ್ಯ ಈ ಏತ ನೀರಾವರಿ ಯೋಜನೆಯಲ್ಲಿ ಜಿಲ್ಲೆಯ 58 ಕೆರೆಗಳಿಗೆ ನೀರು ಹರಿಯಬೇಕಿದೆ. ಈಗಾಗಲೇ ಕೆಲವೆಡೆ ಯೋಜನೆಯ ಕಾಮಗಾರಿ ಕೂಡ ಆರಂಭಗೊಂಡಿದೆ. ವಿರೋಧ ಮಾತ್ರ ಏಕರೂಪದಲ್ಲಿ ಮುಂದುವರಿದಿದೆ.

ಏತ ನೀರಾವರಿ ಯೋಜನೆ ವಿಚಾರದಲ್ಲಿ ಈ ಹಿಂದೆ ವಿರೋಧ ತೀವ್ರವಾಗುತ್ತಿದ್ದಂತೆ ಜಿಲ್ಲೆಯ ಬಹುತೇಕ ಶಾಸಕರು ಸರ್ಕಾರದ ಮೇಲೆ ಒತ್ತಡ ತ್ಯಾಜ್ಯ ನೀರನ್ನು ಮೂರು ಹಂತದ ಸಂಸ್ಕರಣೆ ಮಾಡಿಸಿ, ಹಾನಿಕಾರಕ ಅಂಶಗಳಿಲ್ಲದಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದು ಬಿಟ್ಟರೆ ಆ ನಿಟ್ಟಿನಲ್ಲಿ ಸರ್ಕಾರದ ಕಡೆಯಿಂದ ಯಾವುದೇ ಲಿಖಿತ ಆಶ್ವಾಸನೆ ಕೊಡಿಸುವ ಕೆಲಸ ಮಾಡಲಿಲ್ಲ ಎನ್ನುವುದು ಹೋರಾಟಗಾರರ ಆರೋಪ.

ಮುಖ್ಯವಾಗಿ ಯೋಜನೆ ವಿರೋ ಧಿಸುವವರನ್ನು ಜನಪ್ರತಿನಿಧಿ ಗಳಾದ ವರು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾತಿಗೆ ಕಾಳಜಿಯಿಂದ ಕಿವಿಯಾಗುವ ಕೆಲಸ ಮಾಡುವ ಬದಲು ಹೋರಾಟಗಳನ್ನು ಹತ್ತಿಕ್ಕುವ, ಪ್ರತಿಭಟಿಸುವವರನ್ನು ಬಂಧಿಸಿಡುವ ಕೆಲಸ ಮಾಡಿದ್ದರು. ಇದು ಸಹಜವಾಗಿಯೇ ಪ್ರಜ್ಞಾವಂತ ಜನರನ್ನು ಕೆರಳಿಸಿತ್ತು. ಹೀಗಾಗಿ ಹೋರಾಟಗಾರರಿಗೆ ಮತ್ತಷ್ಟು ಬಲ ಬಂದಂತಾಗಿದೆ ಎನ್ನಲಾಗಿದೆ.

ಸರ್ಕಾರ ಮತ್ತು ಶಾಸಕರು ಬದಲಾಗಿ ಹೊಸ ಆಡಳಿತಾವಧಿಯಲ್ಲಿ ನಮ್ಮ ಮಾತಿಗೆ ಮನ್ನಣೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಈ ಯೋಜನೆ ವಿರೋಧಿಸುವವರು ಈವರೆಗೆ ಇದ್ದರು. ಆದರೆ ಜಿಲ್ಲೆಯಲ್ಲಿ ಈ ಬಾರಿ ಶಿಡ್ಲಘಟ್ಟದ ಶಾಸಕ ಎಂ.ರಾಜಣ್ಣ ಅವರನ್ನು ಹೊರತುಪಡಿಸಿದಂತೆ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಹಾಲಿ ಶಾಸಕರೇ ಪುನರಾಯ್ಕೆಯಾಗಿದ್ದಾರೆ.

ಇದೀಗ ಮತ್ತೊಂದು ಅವಧಿಗೆ ಆಯ್ಕೆಯಾದ ಶಾಸಕರು ಏತ ನೀರಾವರಿ ಯೋಜನೆ ವಿಚಾರದಲ್ಲಿ ವಿವೇಚನೆಯಿಂದ ವರ್ತಿಸಿ ಯೋಜನೆಯಲ್ಲಿ ಮಾರ್ಪಾಡು ತರಲು ಮುಂದಾಗುತ್ತಾರಾ? ಅಥವಾ ಹಳೆಯ ಚಾಳಿ ಮುಂದುವರಿಸಿ ಜನಾಕ್ರೋಶಕ್ಕೆ ತುತ್ತಾಗುತ್ತಾರಾ ಎನ್ನುವ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ.

’ಸದ್ಯದ ಸ್ಥಿತಿಯಲ್ಲಿ ಸಂಸ್ಕರಿಸಿದ ಕೊಳಚೆ ನೀರು ತಂದು ಕೊಡದೇ ಹೋದರೆ ನಾಳೆಯೇ ನಾವು ಸತ್ತು ಹೋಗುತ್ತೇವೆ ಎನ್ನುವ ಸ್ಥಿತಿಯಲ್ಲಿ ಯಾರೂ ಇಲ್ಲ. ಹೀಗಾಗಿ ಈ ವಿಚಾರದಲ್ಲಿ ತರಾತುರಿ ತೋರಿ ಅನಾಹುತಕ್ಕೆ ಎಡೆಮಾಡುವ ಬದಲು ಸಾಮಾಜಿಕ ಕಾಳಜಿ ಮೆರೆದು ವಿವೇಚನೆಯಿಂದ ಮುಂದೆ ಹೆಜ್ಜೆ ಇಡಬೇಕಾದ ಅಗತ್ಯವಿದೆ’ ಎಂದು ಹೋರಾಟಗಾರರು ಹೇಳುತ್ತಾರೆ.

ತ್ಯಾಜ್ಯ ನೀರಿಗೆ ವಿರೋಧ ಏಕೆ?

ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಬಯಲು ಸೀಮೆ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಯೋಜನೆಯ ಮೊದಲ ಪ್ರಸ್ತಾವ ಸಲ್ಲಿಕೆಯಾಗುತ್ತಿದ್ದಂತೆ ಸಣ್ಣ ನೀರಾವರಿ ಇಲಾಖೆಯು ಹೆಬ್ಬಾಳ ಮತ್ತು ನಾಗವಾರ ಕಣಿವೆಯ ಸಂಸ್ಕರಿಸಿದ ತ್ಯಾಜ್ಯ ನೀರಿನ ಗುಣಮಟ್ಟ ಪರೀಕ್ಷಿಸಿ ವರದಿ ನೀಡುವಂತೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳಿಗೆ ಮನವಿ ಮಾಡಿತ್ತು.

ವಿಜ್ಞಾನಿ ಟಿ.ವಿ.ರಾಮಚಂದ್ರ ಅವರ ತಂಡ ನೀರಿನ ಪರೀಕ್ಷೆ ನಡೆಸಿ ಸರ್ಕಾರಕ್ಕೆ 2015ರಲ್ಲಿ ವರದಿ ನೀಡಿದೆ. ‘ಬೆಂಗಳೂರಿನಲ್ಲಿ ಕೈಗಾರಿಕೆ ತ್ಯಾಜ್ಯವನ್ನು ಸಮರ್ಪಕವಾಗಿ ಸಂಸ್ಕರಿಸದೆ ಕಾಲುವೆಗಳಿಗೆ ಹರಿಬಿಡುತ್ತಿರುವ ಕಾರಣಕ್ಕೆ ಅನೇಕ ರಾಸಾಯನಿಕಗಳು ಕೆರೆಗಳಿಗೆ ಸೇರುತ್ತಿವೆ. ಅದೇ ರೀತಿ ಉದ್ದೇಶಿತ ಯೋಜನೆಗೆ ಗುರುತಿಸಿರುವ ಕೆರೆಗಳಲ್ಲಿ ರಂಜಕ, ಸಾರಜನಿಕ, ಭಾರಲೋಹದ ಅಂಶಗಳು ಅಪಾಯಕರ ಹಂತದಲ್ಲಿ ಬೆರೆತಿವೆ. ಅವುಗಳನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಿಲ್ಲ’ ಎಂದು ತಿಳಿಸಿದೆ.

ಈಗಾಗಲೇ ಈ ಭಾಗದ ಜನರು ಫ್ಲೋರೈಡ್‌ಯುಕ್ತ ನೀರು ಸೇವನೆಯಿಂದ ಹಲವಾರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ತ್ಯಾಜ್ಯ ನೀರು ಸಂಸ್ಕರಿಸಿದ ನೀರನ್ನು ಕೆರೆಗೆ ಹರಿಬಿಟ್ಟರೆ ಅಂತರ್ಜಲವೂ ಕಲುಷಿತವಾಗಿ ಅಪಾಯಕಾರಿ ವಾತಾವರಣ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕೆರೆಗಳ ನೀರನ್ನು ಎರಡು ಹಂತದ ಶುದ್ಧೀಕರಣದಿಂದಲೂ ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಎಂದು ಸ್ವತಃ ರಾಮಚಂದ್ರ ಅವರೇ ಹೇಳುತ್ತಿದ್ದಾರೆ. ಜತೆಗೆ ಅಷ್ಟಕ್ಕೂ ‘ನಮ್ಮಲ್ಲಿ ಮೂರನೇ ಹಂತದ ಶುದ್ಧೀಕರಣ ಮಾಡಲು ಯಾವುದೇ ಸ್ಥಳೀಯ ಸಂಸ್ಥೆಯಿಂದ ಇದು ಅಸಾಧ್ಯದ ಮಾತು. ಜೌಗು ಪ್ರದೇಶ ಮತ್ತು ಪಾಚಿ ಹೊಂಡದಲ್ಲಿ ಶುದ್ಧೀಕರಿಸಿದರೆ ಈ ಅಂಶಗಳನ್ನು ತೆಗೆಯಬಹುದು’ ಎನ್ನುತ್ತಾರೆ ರಾಮಚಂದ್ರ. ಈ ವಿಚಾರದಲ್ಲಿ ಹೊಸ ಸರ್ಕಾರದ ಮುಂದಿನ ನಡೆ ಏನಾಗಿರುತ್ತದೆ ಎನ್ನುವ ಕುತೂಹಲ ಜನರಲ್ಲಿ ಮನೆ ಮಾಡಿದೆ.

ಸರ್ಕಾರದ ನಿಲುವು ಬದಲಾಗದಿದ್ದರೆ ಕಾನೂನು ಹೋರಾಟ

ನಮ್ಮದು ಸತ್ಯದ ಹೋರಾಟ. ವೈಜ್ಞಾನಿಕ ದಾಖಲೆಗಳು, ಅಂಕಿಅಂಶಗಳು ನಮ್ಮ ಬಳಿ ಇರುವ ಕಾರಣ ನಾವು ಯಾರಿಗೂ ಸೊಪ್ಪು ಹಾಕುವ ಪ್ರಶ್ನೆಯೇ ಇಲ್ಲ. ಅಸ್ತಿತ್ವಕ್ಕೆ ಬರುವ ಹೊಸ ಸರ್ಕಾರಕ್ಕೂ ನಾವು ಈ ಬಗ್ಗೆ ಎಚ್ಚರಿಕೆ ನೀಡಿ ಯೋಜನೆ ಕೈಬಿಡುವಂತೆ ಆಗ್ರಹಿಸುತ್ತೇವೆ. ನೂತನ ಮುಖ್ಯಮಂತ್ರಿ ಸಹ ಈ ವಿಚಾರ ಗಂಭೀರವಾಗಿ ಪರಿಗಣಿಸದಿದ್ದರೆ ನಾವು ನ್ಯಾಯಾಂಗ ಹೋರಾಟ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ
– ಆರ್.ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ

ಇದು ಅಳಿವು ಉಳಿವಿನ ಪ್ರಶ್ನೆ

ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ನೂತನ ಮುಖ್ಯಮಂತ್ರಿಗಳನ್ನು ಹೋರಾಟಗಾರರೆಲ್ಲ ಭೇಟಿ ಮಾಡಿ ಯೋಜನೆಯ ದುಷ್ಪರಿಣಾಮವನ್ನು ಮನವರಿಕೆ ಮಾಡಿ, ಯೋಜನೆ ಕೈಬಿಡುವಂತೆ ಒತ್ತಾಯಿಸಲು ನಿರ್ಧರಿಸಿದ್ದೇವೆ. ಇದು ನಮ್ಮ ಭವಿಷ್ಯದ ಅಳಿವು ಉಳಿವಿನ ಪ್ರಶ್ನೆಯಾದ್ದರಿಂದ ಈ ಯೋಜನೆ ಒಪ್ಪುವ ಮಾತೇ ಇಲ್ಲ. ನೀರಿನ ಗುಣಮಟ್ಟವನ್ನು ತಜ್ಞರ ಮೂಲಕ ಖಾತರಿಪಡಿಸಿ ಜನಸಾಮಾನ್ಯರ ಮುಂದಿಡಲಿ. ಆಗ ಬೇಕಿದ್ದರೆ ಯೋಜನೆಯನ್ನು ಒಪ್ಪಿಕೊಳ್ಳುತ್ತೇವೆ
ಸುಷ್ಮಾ ಶ್ರೀನಿವಾಸ್, ಹೋರಾಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT