ಕಠಿಣ ಪಥದತ್ತ ರಿತು

ಭಾನುವಾರ, ಮಾರ್ಚ್ 24, 2019
33 °C

ಕಠಿಣ ಪಥದತ್ತ ರಿತು

Published:
Updated:

ಹರಿಯಾಣದ ಪೋಗಟ್ ಕುಟುಂಬವೆಂದರೆ ಸಾಕು ‘ದಂಗಲ್’ ಗಮ್ಮತ್ತು ಕಣ್ಣುಗಳ ಮುಂದೆ ಅರಳಿ ನಿಲ್ಲುತ್ತದೆ.  ಮಹಿಳೆಯರ ಕುಸ್ತಿಯಲ್ಲಿ ಈ ಕುಟುಂಬದ ಕುಡಿಗಳು ಮಾಡಿರುವ ಸಾಧನೆಯೇ ದಂತಕಥೆಯಾಗಿದೆ.

ಮಹಾವೀರ ಪೋಗಟ್ ಅವರು ತಮ್ಮ ಪುತ್ರಿಯರಾದ ಗೀತಾ, ಬಬಿತಾ, ರಿತು ಮತ್ತು ಸಂಗೀತಾ ಈಗ ಹತ್ತಾರು ಸಾಧನೆಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ. ಮಹಾವೀರ ಅವರ ಮೂರನೇ ಪುತ್ರಿ ರಿತು ಈಗ ಕುಸ್ತಿಯ ಕಣ ಬಿಟ್ಟು ವಿಭಿನ್ನ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಅವರೀಗ ಮಿಕ್ಸ್‌ ಮಾರ್ಷಲ್ ಆರ್ಟ್ಸ್‌ (ಎಂಎಂಎ) ಎಂಬ ಕಠಿಣವಾದ ಸಮರ ಕಲೆಯಲ್ಲಿ ಸಾಧನೆ ಮಾಡಲು ಮುಂದಾಗಿದ್ದಾರೆ. 

24 ವರ್ಷದ ರಿತು ಅವರು ಮೂರು ವರ್ಷಗಳ ಹಿಂದೆ ಕಾಮನ್‌ವೆಲ್ತ್ ಕೂಟದ 48 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಹೋದ ವರ್ಷವೂ ಉತ್ತಮ ಸಾಧನೆ ಮಾಡಿದ್ದರು. 2020ರ ಒಲಿಂಪಿಕ್ಸ್‌ನಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸುವ ಸಾಧ್ಯತೆಯೂ ಇತ್ತು. ಆದರೆ ಇದೀಗ ಅವರು ಇದ್ದಕ್ಕಿದ್ದಂತೆ ತೆಗೆದುಕೊಂಡ ನಿರ್ಧಾರದಿಂದ ಭಾರತ ಕುಸ್ತಿ ಫೆಡರೇಷನ್  ತೀವ್ರ ಅಚ್ಚರಿ ವ್ಯಕ್ತಪಡಿಸಿದೆ.  ಸಿಂಗಪುರದಲ್ಲಿರುವ ಇವಾಲ್ವ್ ಫೈಟ್‌ ಟೀಮ್‌ ಅನ್ನು ಅವರು ಸೇರಿಕೊಂಡಿದ್ದಾರೆ. 

‘ಕುಸ್ತಿಯಲ್ಲಿ ಅಕ್ಕಂದಿರೊಂದಿಗೆ ಸಾಕಷ್ಟು ಅನುಭವ ಪಡೆದಿದ್ದಾರೆ. ಒಂದಷ್ಟು ಒಳ್ಳೆಯ ಸಾಧನೆಗಳನ್ನು ಮಾಡಿರುವ ತೃಪ್ತಿ ಇದೆ. ಎಂಎಂಎನಲ್ಲಿ ವಿಶ್ವಮಟ್ಟದ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗುವ ಗುರಿ ಇದೆ’ ಎಂದು ರಿತು ಹೇಳಿದ್ದಾರೆ.


ಮಹಾವೀರ ಪೋಗಟ್ ಕುಟುಂಬ  ಟ್ವಿಟರ್ ಚಿತ್ರ

ಏನಿದು ಎಂಎಂಎ?

ಈ ಸಮರ ಕಲೆಯು ಯುರೋಪ್, ಆಫ್ರಿಕಾ ಖಂಡಗಳಲ್ಲಿ ಜನಪ್ರಿಯವಾಗಿದೆ. ಏಷ್ಯಾದ ಕೊರಿಯಾ, ಜಪಾನ್ ಮತ್ತು ಚೀನಾದಲ್ಲಿ ಹೆಚ್ಚು ಜನಪ್ರಿಯ. ಆದರೆ ಎಲ್ಲ ಸಮರ ಕಲೆಗಳಲ್ಲಿಯೂ ಅತ್ಯಂತ ಕ್ಲಿಷ್ಟವಾದ ಪ್ರಕಾರ ಇದಾಗಿದೆ. ಏಕೆಂದರೆ ಪ್ರಮುಖ ಮಾರ್ಷಲ್‌ ಆರ್ಟ್ಸ್‌ಗಳಿಂದ ಆಯ್ದ ಕೌಶಲ್ಯಗಳ ಸಮ್ಮಿಶ್ರಣ ಇದಾಗಿದೆ.

ಕರಾಟೆ, ಕುಂಗ್‌ಫೂ, ಬ್ರೆಜಿಲಿಯನ್ ಜಿಜುತ್ತು, ಮುಯ್‌ಥಾಯ್, ಕೆಪೊರಿಯಾ ಮತ್ತು ಕ್ಯಾಚ್ ಮಾರ್ಷಲ್‌ ಆರ್ಟ್ಸ್‌ಗಳನ್ನು ಇದರಲ್ಲಿ ಮಿಶ್ರ ಮಾಡಲಾಗಿದೆ.  ಆದರೆ, ಇದಕ್ಕೆ ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಫೆಡರೇಷನ್‌ನನಿಂದ ಮಾನ್ಯತೆ ಲಭಿಸಿಲ್ಲ. ಆದರೂ ಎಂಎಂಎದ ಅದ್ದೂರಿ ಟೂರ್ನಿಗಳು ಬಹಳಷ್ಟು ದೇಶಗಳಲ್ಲಿ ನಡೆಯುತ್ತಿವೆ. ವೃತ್ತಿಪರವಾಗಿ ಈ ಕಲೆ ಬೆಳೆದಿದೆ. ಕೋಟ್ಯಂತರ ಹಣದ ಪ್ರಶಸ್ತಿ ಇದೆ. ಅಲ್ಲದೇ ಇದೀಗ ಬಹುತೇಕ ದೇಶಗಳಲ್ಲಿ ಫಿಟ್‌ನೆಸ್‌ಗಾಗಿಯೂ ಎಂಎಂಎ ಕಲಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !