ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ಗೆ ತೆರೆ: ಕರ್ನಾಟಕಕ್ಕೆ ಸಮಗ್ರ ಪ್ರಶಸ್ತಿ

75ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ಗೆ ತೆರೆ
Last Updated 10 ಸೆಪ್ಟೆಂಬರ್ 2022, 18:05 IST
ಅಕ್ಷರ ಗಾತ್ರ

ಗುವಾಹಟಿ: ಈಜು ಸ್ಪರ್ಧೆಯಲ್ಲಿ ಪ್ರಾಬಲ್ಯ ಮುಂದುವರಿಸಿದ ಕರ್ನಾಟಕ ತಂಡ, ಶನಿವಾರ ಇಲ್ಲಿ ಕೊನೆಗೊಂಡ 75ನೇ ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.

ಡಾ.ಜಾಕಿರ್‌ ಹುಸೇನ್‌ ಈಜು ಕೇಂದ್ರದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಒಟ್ಟು 250 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಗಳಿಸಿತು. ಪುರುಷರ ವಿಭಾಗದಲ್ಲಿ 129 ಹಾಗೂ ಮಹಿಳೆಯರ ವಿಭಾಗದಲ್ಲಿ 121 ಪಾಯಿಂಟ್‌ಗಳು ಬಂದವು.

ರಾಜ್ಯದ ಈಜುಪಟುಗಳು 14 ಚಿನ್ನ, 4 ಬೆಳ್ಳಿ ಮತ್ತು 11 ಕಂಚು ಸೇರಿದಂತೆ ಒಟ್ಟು 29 ಪದಕ ಜಯಿಸಿದರು. 6 ಚಿನ್ನ, 4 ಬೆಳ್ಳಿ ಮತ್ತು 2 ಕಂಚಿನ ಪದಕ ಗೆದ್ದ ಎಸ್‌ಎಸ್‌ಸಿಬಿ ಎರಡನೇ ಸ್ಥಾನ ಗಳಿಸಿತು.

ಕರ್ನಾಟಕದ ಎಸ್‌.ಶಿವ ಹಾಗೂ ಗುಜರಾತ್‌ನ ಮಾನಾ ಪಟೇಲ್‌ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ‘ಶ್ರೇಷ್ಠ ಈಜುಪಟು’ ಗೌರವ ಪಡೆದುಕೊಂಡರು. ಮೂರು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದ ಶಿವ, ಒಂದು ಕೂಟ ದಾಖಲೆಯನ್ನೂ ಮಾಡಿದ್ದಾರೆ.

ಕೊನೆಯ ದಿನವಾದ ಶನಿವಾರ, ಕರ್ನಾಟಕ ಎರಡು ಚಿನ್ನ ಹಾಗೂ ಮೂರು ಕಂಚಿನ ಪದಕ ಗೆದ್ದುಕೊಂಡಿತು. ಅನೀಶ್‌ ಎಸ್‌.ಗೌಡ ಅವರು ಪುರುಷರ 200 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ 1 ನಿ. 52.49 ಸೆ.ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ದೆಹಲಿಯ ವಿಶಾಲ್‌ ಗ್ರೆವಾಲ್‌ ಬೆಳ್ಳಿ ಹಾಗೂ ಕರ್ನಾಟಕದ ಆರ್‌.ಸಂಭವ್‌ ಕಂಚು ಪಡೆದರು.

ಎಸ್‌.ಶಿವ ಅವರು 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ 57.59 ಸೆ.ಗಳಲ್ಲಿ ಗುರಿತಲುಪಿ ಚಿನ್ನ ತಮ್ಮದಾಗಿಸಿಕೊಂಡರು. ಎಸ್‌ಎಸ್‌ಸಿಬಿಯ ವಿ.ವಿನಾಯಕ್‌ ಬೆಳ್ಳಿ ಗೆದ್ದರೆ, ಕರ್ನಾಟಕದ ಉತ್ಕರ್ಷ್‌ ಎಸ್‌.ಪಾಟೀಲ್‌ (58.38 ಸೆ.) ಕಂಚು ಪಡೆದರು.

ಮಾನವಿ ವರ್ಮಾ ಅವರು ಮಹಿಳೆಯರ 100 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ (1 ನಿ. 16.99 ಸೆ.) ಪಡೆದರು. ಪಂಜಾಬ್‌ನ ಚಾಹತ್‌ ಅರೋರಾ (1:13.61 ಸೆ.) ಚಿನ್ನ ಗೆದ್ದರೆ, ಮಹಾರಾಷ್ಟ್ರದ ಜ್ಯೋತಿ ಪಾಟೀಲ್‌ (1:16.33 ಸೆ.) ಬೆಳ್ಳಿ ಪಡೆದರು.

ಚಾಹತ್‌ ಅರೋರಾ ಅವರು ಈ ವಿಭಾಗದಲ್ಲಿ ಕೂಟ ದಾಖಲೆಯನ್ನು ಮಾಡಿದರು. ಮಾನಾ ಪಟೇಲ್‌ ಅವರು 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ತಮ್ಮದೇ ಹೆಸರಿನಲ್ಲಿದ್ದ ಕೂಟ ದಾಖಲೆ ಸರಿಗಟ್ಟಿದ ಸಾಧನೆ
ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT