ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಗೆ ಏಟು: ಕಿಕ್ ಬಾಕ್ಸರ್‌ ಸಾವು

ಎರಡು ತಿಂಗಳ ಅವಧಿಯಲ್ಲಿ ಎರಡನೇ ದುರ್ಘಟನೆ
Last Updated 25 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ನವದೆಹಲಿ: ಕಿಕ್‌ ಬಾಕ್ಸಿಂಗ್‌ ವೇಳೆ ತಲೆಗೆ ಗಂಭೀರ ಏಟು ಬಿದ್ದ ಪರಿಣಾಮ ಯುವ ಕಿಕ್‌ ಬಾಕ್ಸರ್‌ವೊಬ್ಬರು ಮೃತಪಟ್ಟಿದ್ದಾರೆ. ದೇಶದಲ್ಲಿ ಎರಡು ತಿಂಗಳ ಅವಧಿಯಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ.

ಅರುಣಾಚಲ ಪ್ರದೇಶದ 24 ವರ್ಷದ ಯೋರಾ ತಾಡೆ ಅವರು ಮೃತಪಟ್ಟ ಕಿಕ್‌ ಬಾಕ್ಸರ್‌. ಚೆನ್ನೈನಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಕಿಕ್‌ ಬಾಕ್ಸಿಂಗ್‌ ಸ್ಪರ್ಧೆಯ ಫೈನಲ್‌ನಲ್ಲಿ ಕೇಶವ್‌ ಮುದೆಲ್‌ ಜತೆಗಿನ ಸೆಣಸಾಟದ ವೇಳೆ ತಾಡೆ ಗಾಯಗೊಂಡಿದ್ದರು. ಎದುರಾಳಿ ನೀಡಿದ ‘ಕಿಕ್‌’ನಿಂದ ಮಿದುಳಿಗೆ ಏಟು ಬಿದ್ದಿತ್ತು.

ಅವರನ್ನು ತಕ್ಷಣವೇ ರಾಜೀವ್‌ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಿದುಳಿನ
ಶಸ್ತ್ರಕ್ರಿಯೆ ನಡೆಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ.

‘ಕಿಕ್‌ ಬಾಕ್ಸರ್‌ಅನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಯ ವೇಳೆ ಅವರು ಮೃತಪಟ್ಟರು’ ಎಂದು ರಾಜೀವ್‌ ಗಾಂಧಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಘಟನೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸ್ಪರ್ಧೆಯ ವೇಳೆ ಗಾಯಗೊಂಡು ಕಿಕ್‌ ಬಾಕ್ಸರ್‌ ಮೃತಪಟ್ಟ ಘಟನೆ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ನಡೆದಿದೆ.

ಕಳೆದ ತಿಂಗಳು ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗಾಯಗೊಂಡಿದ್ದ ಮೈಸೂರಿನ ಎಸ್‌.ನಿಖಿಲ್‌ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಎದುರಾಳಿಯು ಮುಖಕ್ಕೆ ನೀಡಿದ್ದ ಪಂಚ್‌ನಿಂದ ಅವರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT