ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಆರ್ಚರಿ: ಭಾರತದ ಅಭಿಷೇಕ್–ಜ್ಯೋತಿ ಚಿನ್ನಕ್ಕೆ ಗುರಿ

Last Updated 25 ಜೂನ್ 2022, 13:12 IST
ಅಕ್ಷರ ಗಾತ್ರ

ಪ್ಯಾರಿಸ್‌: ಭಾರತದ ಅಭಿಷೇಕ್‌ ವರ್ಮ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರು ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದಿತ್ತರು.

ಶನಿವಾರ ನಡೆದ ಕಾಂಪೌಂಡ್‌ ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಭಾರತದ ಜೋಡಿ 152–149 ರಲ್ಲಿ ಫ್ರಾನ್ಸ್‌ನ ಜೀನ್‌ ಬೌಲ್ಶ್ ಮತ್ತು ಸೋಫಿ ಡಾಡ್ಮಂಟ್‌ ಅವರನ್ನು ಮಣಿಸಿತು. ವಿಶ್ವಕಪ್‌ನಲ್ಲಿ ಈ ವಿಭಾಗದಲ್ಲಿ ಭಾರತ ಚಿನ್ನ ಜಯಿಸಿದ್ದು ಇದೇ ಮೊದಲು.

ಇಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದ ಭಾರತದ ಜೋಡಿ ಆರಂಭದಿಂದಲೇ ನಿಖರವಾಗಿ ಗುರಿ ಹಿಡಿದು ಎದುರಾಳಿಗಳ ಮೇಲೆ ಒತ್ತಡ ಹೇರಿತು. ಮೊದಲ ಸೆಟ್‌ ಕೊನೆಗೊಂಡಾಗ 40-37 ರಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಸೆಟ್‌ನ ಕೊನೆಯಲ್ಲಿ ಫ್ರಾನ್ಸ್‌ ಹಿನ್ನಡೆಯನ್ನು ಒಂದು ಪಾಯಿಂಟ್‌ಗೆ (75–76) ತಗ್ಗಿಸಿತು.

ಮೂರನೇ ಸೆಟ್‌ನಲ್ಲಿ ಎರಡೂ ತಂಡಗಳು ತಲಾ 39 ಪಾಯಿಂಟ್ಸ್‌ ಸಂಗ್ರಹಿಸಿದವು. ಒಟ್ಟಾರೆಯಾಗಿ ಭಾರತ 115–114 ರಲ್ಲಿ ಮುನ್ನಡೆಯಲ್ಲಿತ್ತು. ನಿರ್ಣಾಯಕ ಸೆಟ್‌ನಲ್ಲಿ ಏಕಾಗ್ರತೆ ಸಾಧಿಸಿದ ಭಾರತದ ಜೋಡಿ 37 ಪಾಯಿಂಟ್ಸ್ ಗಳಿಸಿದರೆ, ಫ್ರಾನ್ಸ್‌ ತಂಡ 35 ಪಾಯಿಂಟ್ಸ್‌ ಮಾತ್ರ ಕಲೆಹಾಕಿತು. ಮೂರು ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಭಾರತ ಚಿನ್ನ ಜಯಿಸಿತು.

ಕಾಂಪೌಂಡ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಜೋಡಿ ಎನಿಸಿಕೊಂಡಿರುವ ಅಭಿಷೇಕ್‌– ಜ್ಯೋತಿ, ವಿಶ್ವಕಪ್‌ನಲ್ಲಿ ಈ ಹಿಂದೆ ಹಲವು ಸಲ ಕಂಚಿನ ಪದಕ ಗೆದ್ದುಕೊಂಡಿದ್ದರು. ಕಳೆದ ವರ್ಷ ಅಮೆರಿಕದ ಯಾಂಕ್ಟನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಬೆಳ್ಳಿ ಜಯಿಸಿದ್ದು ಅವರ ಇದುವರೆಗಿನ ಉತ್ತಮ ಸಾಧನೆ ಎನಿಸಿಕೊಂಡಿತ್ತು.

ಭಾರತದ ದೀಪಿಕಾ ಕುಮಾರಿ, ಅಂಕಿತಾ ಭಕತ್‌ ಮತ್ತು ಸಿಮ್ರನ್‌ಜೀತ್‌ ಕೌರ್‌ ಅವರನ್ನೊಳಗೊಂಡ ಮಹಿಳಾ ರಿಕರ್ವ್‌ ತಂಡ ಈಗಾಗಲೇ ಫೈನಲ್‌ ಪ್ರವೇಶಿಸಿದ್ದು, ಚಿನ್ನದ ಪದಕಕ್ಕಾಗಿ ಭಾನುವಾರ ಪೈಪೋಟಿ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT