ಮಂಗಳವಾರ, ಆಗಸ್ಟ್ 16, 2022
29 °C
ಅಭಿಷೇಕ್ ಸಿಂಗ್ ಮಿಂಚು

ಪ್ರೊ ಕಬಡ್ಡಿ: ಬೆಂಗಳೂರಿಗೆ ‘ಮೊದಲ’ ಆಘಾತ, ಯು ಮುಂಬಾಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಭಿಷೇಕ್ ಸಿಂಗ್ ಅವರ ಅಮೋಘ ಆಟದ ಬಲದಿಂದ ಯು ಮುಂಬಾ ತಂಡವು ಬುಧವಾರ ಆರಂಭವಾದ ಪ್ರೊ ಕಬಡ್ಡಿ ಟೂರ್ನಿಯ ಮೊದಲ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಬೆಂಗಳೂರು ಬುಲ್ಸ್‌ ಸೋಲಿನ ಕಹಿಯುಂಡಿತು. 

ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯ  ಉದ್ಘಾಟನೆ ಪಂದ್ಯದಲ್ಲಿ ಅಭಿಷೇಕ್ ಸಿಂಗ್ ಗಳಿಸಿದ 19 ಪಾಯಿಂಟ್‌ಗಳ ಬಲದಿಂದ ಮುಂಬಾ ತಂಡವು 46–30ರಿಂದ ಬೆಂಗಳೂರಿನ ಎದುರು ಜಯಿಸಿತು. 

ಬೆಂಗಳೂರು ತಂಡದ ನಾಯಕ ಪವನ್ ಶೆರಾವತ್ ಮತ್ತು ರೈಡರ್ ಚಂದ್ರನ್ ರಂಜೀತ್ ಅವರು ಸೂಪರ್ 10 ಗಳಿಸಿದರೂ ಮುಂಬಾ ತಂಡದ ರಕ್ಷಣಾ ಪಡೆಯು ತಿರುಗೇಟು ನೀಡಿತು. ಬುಲ್ಸ್ ತಂಡವು ಪಂದ್ಯದಲ್ಲಿ ಉತ್ತಮ ಆರಂಭ ಮಾಡಿತ್ತು. 4–1ರ ಮುನ್ನಡೆ ಸಾಧಿಸಿತ್ತು. ಆದರೆ, ಬುಲ್ಸ್‌ ದಾಳಿಗೆ ತಕ್ಕ ರಕ್ಷಣಾ ತಂತ್ರ ಹೆಣೆದ ಮುಂಬೈನ ಅಭಿಷೇಕ್  ಒಂದರ ಹಿಂದೆ  ಒಂದು ಪಾಯಿಂಟ್ ಗಳಿಸಿ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಿಸಿದರು. ಅವರ ಚಾಣಾಕ್ಷ ಆಟದ ಮುಂದೆ ಪವನ್ ಪಡೆಯು ಬಸವಳಿಯಿತು. 

ಆದರೆ, ಬುಲ್ಸ್‌ ತಂಡದ ರಂಜಿತ್ ಎರಡು ಸೂಪರ್ ರೇಡ್‌ಗಳ ಮೂಲಕ ಮಿಂಚಿದರು. ಅದಕ್ಕೂ ತಿರುಗೇಟು ನೀಡಿದ ಅಭಿಷೇಕ್ ಸೂಪರ್ ರೇಡ್‌ನಲ್ಲಿ ನಾಲ್ಕು ಪಾಯಿಂಟ್‌ಗಳನ್ನು ಜೇಬಿಗಿಳಿಸಿಕೊಂಡರು. ಇದರಿಂದಾಗಿ ಮುಂಬಾ ತಂಡವು ಮತ್ತೆ ಮುನ್ನಡೆಯತ್ತ ಹೊರಳಿತು. ಅರ್ಧವಿರಾಮದ ವೇಳೆಗೆ ಮುಂಬಾ ತಂಡವು 24–17ರಿಂದ ಮುನ್ನಡೆ ಸಾಧಿಸಿತು. 

ವಿರಾಮದ ನಂತರ ಅವಧಿಯಲ್ಲಿ ಉಭಯ ತಂಡಗಳ ಪೈಪೋಟಿ ತುರುಸಿನಿಂದ ಕೂಡಿತ್ತು. ಎರಡೂ ತಂಡಗಳು ರೇಡ್‌ನಲ್ಲಿ ತಲಾ 11 ಅಂಕಗಳನ್ನು ಗಳಿಸಿದವು. ಆದರೆ ಟ್ಯಾಕಲ್‌ನಲ್ಲಿ ಮುಂಬಾ ಒಂಬತ್ತು ಅಂಕ ಗಳಿಸಿದರೆ, ಬುಲ್ಸ್‌ ಕೇವಲ ಎರಡು ಪಾಯಿಂಟ್ ಪಡೆಯಿತು. ಈ ಅವಧಿಯಲ್ಲಿ ಮುಂಬಾ ತಂಡವು ಒಟ್ಟು 22 ಅಂಕ ಗಳಿಸಿದರೆ, ಬೆಂಗಳೂರು ಕೇವಲ 13 ಪಾಯಿಂಟ್ ಗಳಿಸಿತು. ಇದರಿಂದಾಗಿ ಮುಂಬಾ ತಂಡವು ಜಯದ ಸಂಭ್ರಮ ಆಚರಿಸಿತು. 

ಮುಂಬಾ ತಂಡದ ಹರೇಂದರ್ ಕುಮಾರ್ ರಕ್ಷಣಾ ಚಾತುರ್ಯ ಮೆರೆದರು. ಅವರು ಒಟ್ಟು ನಾಲ್ಕು ಟ್ಯಾಕಲ್ ಪಾಯಿಂಟ್ ಗಳಿಸಿದರು. ಬುಲ್ಸ್ ತಂಡದ ಚಂದ್ರನ್ ರಂಜಿತ್ 13 ರೇಡಿಂಗ್ ಪಾಯಿಂಟ್ ಮತ್ತು ಮಯೂರ ಜಗನ್ನಾಥ್ ಮೂರು ಟ್ಯಾಕಲ್ ಪಾಯಿಂಟ್ಸ್ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು