ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಾಟಿಷ್ ಓಪನ್: ತ್ವೇಸಾ ಶುಭಾರಂಭ; 48ನೇ ಸ್ಥಾನದಲ್ಲಿ ಅದಿತಿ

Last Updated 14 ಆಗಸ್ಟ್ 2020, 12:32 IST
ಅಕ್ಷರ ಗಾತ್ರ

ನಾರ್ತ್ ಬೆರ್ವಿಕ್ (ಸ್ಕಾಟ್ಲೆಂಡ್)‌: ಪ್ರತಿಕೂಲ ವಾತಾವರಣದಲ್ಲೂ ಎದೆಗುಂದದೆ ಆಡಿದ ಭಾರತದ ತ್ವೇಸಾ ಮಲಿಕ್ ಅವರು ಇಲ್ಲಿ ನಡೆಯುತ್ತಿರುವ ಲೇಡೀಸ್ ಸ್ಕಾಟಿಷ್ ಓಪನ್ ಗಾಲ್ಫ್ ಟೂರ್ನಿಯ ಮೊದಲ ದಿನ ಗಮನಾರ್ಹ ಸಾಧನೆ ಮಾಡಿದರು. 144 ಮಂದಿಯ ಕಣದಲ್ಲಿ ಅವರು 22ನೇ ಸ್ಥಾನವನ್ನು ಹಂಚಿಕೊಳ್ಳುವಲ್ಲಿ ಯಶಸ್ವಿಯಾದರು.

ಎಲ್‌ಪಿಜಿಎ ಸಹಪ್ರಾಯೋಜಕತ್ವದ ಟೂರ್ನಿ ಇದ್ದಾಗಿದ್ದು ಈ ಮಾದರಿಯ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಭಾರತದ ಮೂವರು ಆಡಲು ಅರ್ಹರಾಗಿದ್ದಾರೆ. ಆದರೆ ಮೊದಲ ದಿನ ಮೂವರ ಪೈಕಿ ತ್ವೇಸಾ ಮಾತ್ರ ಉತ್ತಮ ಸಾಧನೆ ಮಾಡಿದರು. ಬೆಂಗಳೂರಿನ ಅದಿತಿ ಅಶೋಕ್ 48ನೇ ಸ್ಥಾನವನ್ನು ಹಂಚಿಕೊಂಡರೆ ದಿಕ್ಷಾ ಡಾಗರ್ 120ನೇ ಸ್ಥಾನಕ್ಕೆ ಕುಸಿದರು.

ಮಾರ್ಚ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಮಹಿಳಾ ಓಪನ್‌ ನಂತರ ತ್ವೇಸಾ ಕಣಕ್ಕೆ ಇಳಿದ ಮೊದಲ ಟೂರ್ನಿ ಇದಾಗಿದೆ. ಇಲ್ಲಿ ಆರಂಭವೇ ಸವಾಲಿನದ್ದಾಗಿತ್ತು. ಚೆಂಡು ಸರಾಗವಾಗಿ ಉರುಳಲು ಅನುಕೂಲಕರ ವಾತಾವರಣ ಇರಲಿಲ್ಲ. ಗಾಳಿಯೂ ಜೋರಾಗಿ ಬೀಸುತ್ತಿತ್ತು. ದಟ್ಟ ಮಂಜು ಆವರಿಸಿದ್ದರಿಂದ ಎರಡು ತಾಸು ತಡವಾಗಿ ಪಂದ್ಯಗಳು ಆರಂಭಗೊಂಡಿದ್ದವು. ಹೀಗಾಗಿ ಒಂಬತ್ತು ಗುಂಪುಗಳ ಪಂದ್ಯಗಳನ್ನು ಪೂರ್ಣಗೊಳಿಸಲು ಆಗಲಿಲ್ಲ.

ಕಳೆದ ವರ್ಷ ಮಹಿಳೆಯರ ಇಂಡಿಯನ್ ಓಪನ್‌ನಲ್ಲಿ ಆರನೇ ಸ್ಥಾನ ಹಂಚಿಕೊಳ್ಳುವ ಮೂಲಕ ಜೀವನಶ್ರೇಷ್ಠ ಎಲ್‌ಇಟಿ ಮುಕ್ತಾಯದ ಸಾಧನೆ ಮಾಡಿದ್ದ ತ್ವೇಸಾ ಅವರು ಆರಂಭ ಮತ್ತು ಮುಕ್ತಾಯದ ಬೋಗೀಸ್‌ಗಳಲ್ಲಿ ನಿರಾಸೆ ಕಂಡರೂ ನಡುವಿನ ಅವಧಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದರು.

2016ರ ಮಹಿಳಾ ಇಂಡಿಯನ್ ಓಪನ್‌ನ ಪ್ರಶಸ್ತಿ ಗೆದ್ದಿದ್ದ ಅದಿತಿ ಅಶೋಕ್ ಫೆಬ್ರುವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಮಹಿಳಾ ನ್ಯೂ ಸೌತ್ ವೇಲ್ಸ್ ಓಪನ್‌ನಲ್ಲಿ ಅಗ್ರ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದರು. ಅದರ ನಂತರ ಇದೇ ಮೊದಲ ಬಾರಿ ಆಡುತ್ತಿದ್ದಾರೆ. ಕಳೆದ ವರ್ಷ ಮಹಿಳೆಯರ ದಕ್ಷಿಣ ಆಫ್ರಿಕಾ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ದಿಕ್ಷಾ ಡಾಗರ್ ಪಂದ್ಯದ ಉದ್ದಕ್ಕೂ ತಿಣುಕಾಡಿದರು.

ನಾಲ್ವರು ಆಟಗಾರ್ತಿಯರ ಸವಾಲನ್ನು ಮೆಟ್ಟಿನಿಂತ ಡೆನ್ಮಾರ್ಕ್‌ನ ನಿಕೋಲ್ ಬ್ರೊಚ್ ಲಾರ್ಸೆನ್ ಮೊದಲ ದಿನದ ಗೌರವ ಪಡೆದುಕೊಂಡರು. ಎಮಿಲಿ ಕ್ರಿಸ್ಟಿನ್ ಪೆಡೆರ್ಸನ್ ಮತ್ತು ನನ್ನಾ ಕೊರ್ಸ್ ಮಾಡ್ಸೆನ್ ಅವರು ನಕೋಲ್‌ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಮಹಿಳೆಯರ ಯುರೋಪಿಯನ್‌ ಟೂರ್‌ನಲ್ಲಿ ಪ್ರಮುಖ ಟೂರ್ನಿಯಾಗಿರುವ ಲೇಡೀಸ್ ಸ್ಕಾಟಿಷ್ ಓಪನ್‌ 1986ರಿಂದ ನಡೆಯುತ್ತಿದ್ದು 2017ರಲ್ಲಿ ಎಲ್‌ಪಿಜಿಇ ಸಹಭಾಗಿತ್ವ ಹೊಂದಿದೆ.

ಸ್ಕಾಟಿ‌ಷ್ ಓಪನ್ ಮೂಲಕ ಯುರೋಪ್‌ನಲ್ಲಿ ಈ ವರ್ಷದ ಮಹಿಳೆಯರ ಟೂರ್‌ಗೆ ಚಾಲನೆ ಸಿಕ್ಕಿದೆ. ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಎಲ್‌ಪಿಜಿಎ ಈಗಾಗಲೇ ಅಮೆರಿಕದಲ್ಲಿ ಡ್ರೈವ್ ಆನ್ ಚಾಂಪಿಯನ್‌ಷಿಪ್ ಮತ್ತು ಮ್ಯಾರಥಾನ್ ಎಲ್‌ಪಿಜಿಎ ಕ್ಲಾಸಿಕ್ ಟೂರ್ನಿಗಳನ್ನು ಆಯೋಜಿಸಿದೆ. ಈ ಎರಡು ಟೂರ್ನಿಗಳಲ್ಲಿ ಡ್ಯಾನಿಯಲಿ ಕಾಂಗ್ ಗೆಲುವು ಸಾಧಿಸಿಕೊಂಡಿದ್ದು 10 ತಿಂಗಳಲ್ಲಿ ಮೂರು ಜಯ ಗಳಿಸಿದ ಸಾಧನೆ ಅವರದಾಗಿತ್ತು. ಸ್ಕಾಟಿಷ್ ಓಪನ್‌ ನಂತರ ಮುಂದಿನ ವಾರ ರಾಯಲ್ ಟ್ರೂ್‌ನ್‌ನಲ್ಲಿ ಎಐಜಿ ಮಹಿಳೆಯರ ಓಪನ್ ನಡೆಯಲಿದೆ. ಸ್ಕಾಟಿಷ್ ಓಪನ್‌, ಇದರ ಅರ್ಹತಾ ಟೂರ್ನಿಯೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT