ಪಾಕಿಸ್ತಾನ ಸ್ಪರ್ಧಿಗಳಿಗೆ ವೀಸಾ ನಿರಾಕರಣೆ;ಭಾರತ ವಿರುದ್ಧ ಒಲಿಂಪಿಕ್‌ ಸಮಿತಿ ಕ್ರಮ

ಭಾನುವಾರ, ಮೇ 26, 2019
30 °C
ಸ್ಪರ್ಧೆಗಳ ಮಾತುಕತೆ ರದ್ದುಪಡಿಸಿದ ಒಲಿಂಪಿಕ್‌ ಸಮಿತಿ

ಪಾಕಿಸ್ತಾನ ಸ್ಪರ್ಧಿಗಳಿಗೆ ವೀಸಾ ನಿರಾಕರಣೆ;ಭಾರತ ವಿರುದ್ಧ ಒಲಿಂಪಿಕ್‌ ಸಮಿತಿ ಕ್ರಮ

Published:
Updated:

ನವದೆಹಲಿ: ಇಲ್ಲಿ ಆಯೋಜಿಸಲಾಗಿರುವ ಶೂಟಿಂಗ್‌ ವಿಶ್ವಕಪ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಪಾಕಿಸ್ತಾನದ ಶೂಟರ್‌ಗಳಿಗೆ ವೀಸಾ ಒದಗಿಸದ ಕಾರಣ ಮುಂದಿಟ್ಟು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) ಜಾಗತಿಕ ಮಟ್ಟದ ಸ್ಪರ್ಧೆಗಳ ಆಯೋಜನೆ ಕುರಿತಾದ ಎಲ್ಲ ಮಾತುಕತೆಯನ್ನು ರದ್ದುಪಡಿಸಲು ನಿರ್ಧರಿಸಿದೆ. 

ಕಳೆದ ವಾರ ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಸಿಬ್ಬಂದಿ ಮೃತಪಟ್ಟಿದ್ದರು. ಇದರ ಬೆನ್ನಲೇ ನವದೆಹಲಿಯಲ್ಲಿ ಆಯೋಜಿಸಿರುವ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾಗಿಯಾಗಲು ಪಾಕಿಸ್ತಾನದ ಶೂಟರ್‌ಗಳಿಗೆ ಭಾರತ ವೀಸಾ ನಿರಾಕರಿಸಿದೆ. ಪಾಕಿಸ್ತಾನದ ಶೂಟರ್‌ಗಳಿಗೆ ವೀಸಾ ನಿರಾಕರಿಸಿರುವುದನ್ನು ಖಂಡಿಸಿ ಐಒಸಿ, ಇಲ್ಲಿನ ವಿಶ್ವಕಪ್‌ ಸ್ಫರ್ಧೆಯಲ್ಲಿ ಪುರುಷರ 25 ಮೀಟರ್‌ ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ಸ್ಪರ್ಧೆಯ ಒಲಿಂಪಿಕ್‌ ಅರ್ಹತಾ ಸ್ಥಾನವನ್ನು ರದ್ದುಪಡಿಸಿದೆ. 

ಸರ್ಕಾರದಿಂದ ಲಿಖಿತ ಆಶ್ವಾಸನೆ ಸಿಗುವವರೆಗೂ ಭಾರತದಲ್ಲಿ ಒಲಿಂಪಿಕ್‌ ಸಂಬಂಧಿತ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ನೀಡುವುದಿಲ್ಲ ಎಂದು ಐಒಸಿ ಹೇಳಿದೆ. ದೇಶದಲ್ಲಿ ಉಗ್ರ ದಾಳಿ ನಡೆದಿರುವ ಕಾರಣದಿಂದಾಗಿ ಪಾಕಿಸ್ತಾನದ ಇಬ್ಬರು ಶೂಟರ್‌ಗಳು ಟೂರ್ನಮೆಂಟ್‌ನಲ್ಲಿ ಭಾಗಿಯಾಗಲು ಅವಕಾಶ ಸಿಗುವುದು ಅನುಮಾನ ಎಂದು ವರದಿಯಾಗಿತ್ತು.

2020ರ ಕ್ರೀಡಾಕೂಟಕ್ಕೆ ನಿಗದಿ ಪಡಿಸಲಾಗಿದ್ದ ಎಲ್ಲ 16 ಒಲಿಂಪಿಕ್‌ ಕೋಟಾ ರದ್ದುಪಡಿಸಿ ಅಂತರರಾಷ್ಟ್ರೀಯ ಶೂಟಿಂಗ್‌ ಕ್ರೀಡಾ ಒಕ್ಕೂಟ (ಐಎಸ್‌ಎಸ್ಎಫ್‌)ದ ಅಧ್ಯಕ್ಷ ವ್ಲಾದಿಮಿರ್‌ ಲಿಸಿನ್‌ ಹೊರಡಿಸಿದ ಪ್ರಕಟಣೆಯ ಹಿಂದೆಯೇ ಐಒಸಿ ತನ್ನ ನಿರ್ಧಾರ ಪ್ರಕಟಿಸಿದೆ. ಶೂಟಿಂಗ್‌ ವಿಶ್ವಕಪ್‌ನಲ್ಲಿ ಗೆದ್ದ ಪದಕಗಳನ್ನು ಮುಂದಿನ ಒಲಿಂಪಿಕ್‌ನಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ವ್ಲಾದಿಮಿರ್‌ ಲಿಸಿನ್‌ ಘೋಷಿಸಿದ್ದರು. ಆದರೆ, ಪದಕ ಪರಿಗಣನೆಯಲ್ಲಿ ಎರಡಕ್ಕೆ ತಡೆ ಹಿಡಿಯಲು ಅವಕಾಶವಿದ್ದು 14 ಕೋಟಾ ಉಳಿಯಲಿವೆ. 

25 ಮೀಟರ್‌ ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ಸ್ಫರ್ಧೆಯಲ್ಲಿ ಪಾಕಿಸ್ತಾನದ ಇಬ್ಬರು ಶೂಟರ್‌ಗಳು ಭಾಗಿಯಾಗಬೇಕಿತ್ತು. ಆದರೆ, ಈ ಸ್ಪರ್ಧೆಯು ಒಲಿಂಪಿಕ್‌ ಅರ್ಹತೆಗೆ ಪರಿಗಣಿಸಲಾಗುವುದಿಲ್ಲ ಎಂದು ಐಒಸಿ ಹೇಳಿದ್ದು, ಇತರೆ ಸ್ಪರ್ಧೆಗಳಲ್ಲಿ ಭಾಗಿಯಾಗಲು ಈಗಾಗಲೇ ಭಾರತದಲ್ಲಿರುವ 61 ರಾಷ್ಟ್ರಗಳ 500 ಸ್ಪರ್ಧಿಗಳ ಹಿತದೃಷ್ಟಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐಒಸಿ ಸ್ವಿಡ್ಜರ್ಲೆಂಡ್‌ನಲ್ಲಿ ಕಾರ್ಯಕಾರಿ ಮಂಡಳಿ ಸಭೆ ಬಳಿಕ ಪ್ರಕಟಿಸಿದೆ. 

ಐಒಸಿ, ಐಎಸ್‌ಎಸ್‌ಎಫ್‌ ಹಾಗೂ ಭಾರತದ ರಾಷ್ಟ್ರೀಯ ಒಲಿಂಪಿಕ್‌ ಸಮಿತಿ(ಎನ್‌ಒಸಿ) ಜತೆಗೂಡಿ ಭಾರತ ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರೂ, ಸ್ಪರ್ಧೆಯಲ್ಲಿ ಪಾಕಿಸ್ತಾನದ ಸ್ಪರ್ಧಿಗಳು ಭಾಗಿಯಾಗಲು ಅವಕಾಶ ದೊರೆತಿಲ್ಲ ಎಂದು ಐಒಸಿ ಹೇಳಿದೆ. 

ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಆತಿಥೇಯ ರಾಷ್ಟ್ರವು ಸ್ಪರ್ಧಿಗಳ ಬಗ್ಗೆ ಯಾವುದೇ ರೀತಿ ತಾರತಮ್ಯ ಮಾಡುವಂತಿಲ್ಲ. ಎಲ್ಲ ಸ್ಪರ್ಧಿಗಳನ್ನು ಸಮಾನವಾಗಿ ಕಾಣಬೇಕು ಹಾಗೂ ರಾಜಕೀಯ ಪ್ರವೇಶ ಇರಕೂಡಲು. ತಾರತಮ್ಯ ಮಾಡಿದರೆ ಅದು ಒಲಿಂಪಿಕ್‌ ನಿಯಮಾವಳಿಗಳ ವಿರುದ್ಧವಾಗುತ್ತದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಆಯೋಜನೆಯಾಗಬೇಕಿದ್ದ ಒಲಿಂಪಿಕ್‌ ಸ್ಪರ್ಧೆಗಳ ಮಾತುಕತೆಯನ್ನು ರದ್ದು ಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐಒಸಿ ಹೇಳಿದೆ. 

2020ರ ಒಲಿಂಪಿಕ್‌ ಸ್ಪರ್ಧೆಗಳಿಗೆ ಅರ್ಹತೆ ಎಂದೇ ಪರಿಗಣಿಸಲಾದ ವಿಶ್ಚಕಪ್‌ ಶೂಟಿಂಗ್‌ನ ರ್‍ಯಾಪಿಡ್‌ ಫೈರ್‌ ಸುತ್ತಿನಲ್ಲಿ ಪಾಕಿಸ್ತಾನದ ಜಿ.ಎಂ.ಬಶೀರ್‌ ಹಾಗೂ ಖಲೀಲ್‌ ಅಹ್ಮದ್‌ ಭಾಗಿಯಾಗಬೇಕಿತ್ತು. 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !