ಬುಧವಾರ, ಜೂನ್ 23, 2021
22 °C
ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

ಸೈನಾ ಸವಾಲು ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬರ್ಮಿಂಗ್‌ಹ್ಯಾಮ್‌ : ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸುವ ಸೈನಾ ನೆಹ್ವಾಲ್‌ ಕನಸು ಶುಕ್ರವಾರ ಕಮರಿತು.

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಆಟಗಾರ್ತಿ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದರು.

ತೈವಾನ್‌ನ ತೈ ಜು ಯಿಂಗ್‌ 21–15, 21–19ರಲ್ಲಿ ಭಾರತದ ಆಟಗಾರ್ತಿಯನ್ನು ಸೋಲಿಸಿದರು. ಈ ಹೋರಾಟ 37 ನಿಮಿಷ ನಡೆಯಿತು. ಇದರೊಂದಿಗೆ ಯಿಂಗ್‌, ಸೈನಾ ಎದುರಿನ ಗೆಲುವಿನ ದಾಖಲೆಯನ್ನು 15–5ಕ್ಕೆ ಹೆಚ್ಚಿಸಿಕೊಂಡರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಯಿಂಗ್‌, ಮೊದಲ ಗೇಮ್‌ನ ಆರಂಭದಲ್ಲಿ ಪ್ರಾಬಲ್ಯ ಮೆರೆದರು. ಅಮೋಘ ಸ್ಟ್ರೋಕ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿ 11–3 ಮುನ್ನಡೆ ಗಳಿಸಿದರು. ಈ ಹಂತದಲ್ಲಿ ಸೈನಾ ಚುರುಕಿನ ಡ್ರಾಪ್‌ಗಳನ್ನು ಮಾಡಿ ಹಿನ್ನಡೆಯನ್ನು 12–14ಕ್ಕೆ ತಗ್ಗಿಸಿಕೊಂಡರು. ನಂತರ ತೈವಾನ್‌ನ ಆಟಗಾರ್ತಿ ಅಪೂರ್ವ ಆಟ ಆಡಿ ಗೇಮ್‌ ಕೈವಶ ಮಾಡಿಕೊಂಡರು.

ಚಾಂಪಿಯನ್‌ಷಿಪ್‌ನಲ್ಲಿ ಒಂಬತ್ತನೇ ಶ್ರೇಯಾಂಕ ಹೊಂದಿರುವ ಸೈನಾ ಎರಡನೇ ಗೇಮ್‌ನ ಶುರುವಿನಲ್ಲಿ ದಿಟ್ಟ ಆಟ ಆಡಿ 8–3ರಿಂದ ಮುಂದಿದ್ದರು. ನಂತರವೂ ಚುರುಕಿನ ಸಾಮರ್ಥ್ಯ ತೋರಿದ ಭಾರತದ ಆಟಗಾರ್ತಿ 11–8 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ದ್ವಿತೀಯಾರ್ಧದಲ್ಲಿ ಯಿಂಗ್‌ ಮೇಲುಗೈ ಸಾಧಿಸಿದರು. ಗ್ರೌಂಡ್‌ ಸ್ಟ್ರೋಕ್‌ಗಳ ಮೂಲಕ ಭಾರತದ ಆಟಗಾರ್ತಿಯನ್ನು ಕಂಗೆಡಿಸಿದ ಅವರು 17–15ರ ಮುನ್ನಡೆ ಪಡೆದರು. ನಂತರ ಉಭಯ ಆಟಗಾರ್ತಿಯರು ತುರುಸಿನ ಪೈಪೋಟಿ ನಡೆಸಿದರು. ಹೀಗಾಗಿ 19–19 ಸಮಬಲ ಕಂಡುಬಂತು. ಒತ್ತಡದ ಪರಿಸ್ಥಿತಿಯಲ್ಲಿ ಕೆಚ್ಚೆದೆಯಿಂದ ಹೋರಾಡಿದ ಯಿಂಗ್‌ ಸತತ ಎರಡು ಪಾಯಿಂಟ್ಸ್‌ ಗಳಿಸಿ ಸಂಭ್ರಮಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು