ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಡಬಲ್ಸ್‌ ಸೆಮಿಗೆ ತ್ರಿಷಾ ಜಾಲಿ–ಗಾಯತ್ರಿ ಗೋಪಿಚಂದ್

ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ನಾಲ್ಕರ ಘಟ್ಟಕ್ಕೆ ಲಕ್ಷ್ಯ ಸೇನ್
Last Updated 18 ಮಾರ್ಚ್ 2022, 21:44 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಅಂಗಣದಲ್ಲಿ ಶುಕ್ರವಾರ ಭಾರತದ ಪ್ರತಿಭೆಗಳದ್ದೇ ಪಾರಮ್ಯ.

ಮಹಿಳೆಯರ ಡಬಲ್ಸ್‌ನ ಎಂಟರ ಘಟ್ಟದಲ್ಲಿ ತ್ರಿಷಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ತಮ್ಮ ವೃತ್ತಿಜೀವನದಲ್ಲಿಯೇ ಅತಿದೊಡ್ಡ ಜಯ ದಾಖಲಿಸಿದರು.ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಇದೇ ಮೊದಲ ಬಾರಿಗೆ ಸೂಪರ್–1000 ಟೂರ್ನಿಯಲ್ಲಿ ಆಡುತ್ತಿರುವ ತ್ರಿಷಾ–ಗಾಯತ್ರಿ ಜೋಡಿಯು 14–21, 22–20, 21–15ರಿಂದ ದಕ್ಷಿಣ ಕೊರಿಯಾದ ಲೀ ಸೋಹಿ ಮತ್ತು ಶಿನ್ ಸೆಂಗ್ಚಾನ್ ಜೋಡಿಗೆ ಆಘಾತ ನೀಡಿದರು.

46ನೇ ಶ್ರೇಯಾಂಕದ ಕೊರಿಯಾ ಜೋಡಿಯು ಮೊದಲ ಗೇಮ್‌ನಲ್ಲಿ ಏಳು ಅಂಕಗಳ ಅಂತರದಿಂದ ಜಯಿಸಿತು. ಆದರೆ ಎರಡನೇ ಗೇಮ್‌ನಲ್ಲಿ ಭಾರತದ ಜೋಡಿ ತಿರುಗೇಟು ನೀಡಿತು.

ತುರುಸಿನ ಹೋರಾಟ ನಡೆದ ಈ ಗೇಮ್‌ ಫಲಿತಾಂಶವು ಟೈಬ್ರೇಕರ್‌ನಲ್ಲಿ ನಿರ್ಧಾರವಾಯಿತು. ತ್ರಿಷಾ ಮತ್ತು ಗಾಯತ್ರಿ ಜೋಡಿಯು ಜಯಿಸಿ ಸಮಬಲ ಸಾಧಿಸಿತು. ಇದರಿಂದಾಗಿ ಕೊನೆಯ ಮತ್ತು ನಿರ್ಣಾಯಕ ಗೇಮ್ ಅತ್ಯಂ ತ ಕುತೂಹಲ ಕೆರಳಿಸಿತ್ತು.

ಈ ಗೇಮ್‌ನ ಆರಂಭಿಕ ಹಂತದಲ್ಲಿ ಸ್ವಲ್ಪ ಪೈಪೋಟಿ ಯೊಡ್ಡಿದ ಕೊರಿಯಾ ಜೋಡಿ ನಂತರ ಒತ್ತಡಕ್ಕೊಳಗಾಯಿತು. ತ್ರಿಷಾ–ಗಾಯತ್ರಿ ಜೋಡಿಯು ಜಯದತ್ತ ನಡೆಯಿತು.

‘ನಮ್ಮ ಸಂಪೂರ್ಣ ಸಾಮರ್ಥ್ಯ ಪಣಕ್ಕೊಡ್ಡುವ ಪ್ರಯತ್ನ ಮಾಡಿದೆವು. ಎರಡನೇ ಗೇಮ್‌ನಲ್ಲಿ ನಾವು 18–20ಯಿಂದ ಹಿನ್ನಡೆಯಲ್ಲಿದ್ದೆವು. ಆ ಸಂದರ್ಭದಲ್ಲಿ ದಿಟ್ಟ ಹೋರಾಟ ನಡೆಸಲೇಬೇಕೆಂದು ನಿರ್ಧರಿಸಿದೆವು’ ಎಂದು ಗಾಯತ್ರಿ ಹೇಳಿದರು.ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಅವರ ಮಗಳು ಗಾಯತ್ರಿ ಹಾಗೂ ತ್ರಿಷಾ ಜೋಡಿಯು ಈಚೆಗೆ ಇನ್ಫೊಸಿಸ್ ಪ್ರತಿಷ್ಠಾನದ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಪ್ರಶಸ್ತಿಯನ್ನು ಗೆದ್ದಿತ್ತು.

ಸೆಮಿಗೆ ಲಕ್ಷ್ಯ: ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲ ಗೋಪಿಚಂದ್ ಅವರ ನಂತರ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ ಸೆಮಿಫೈನಲ್ ಪ್ರವೇಶಿಸಿದ ಭಾರತದ ಆಟಗಾರನೆಂಬ ಹೆಗ್ಗಳಿಕೆಗೆ ಲಕ್ಷ್ಯ ಸೇನ್ ಪಾತ್ರರಾದರು.

ಎಂಟರ ಘಟ್ಟದಲ್ಲಿ ಲಕ್ಷ್ಯ ಅವರಿಗೆ ಚೀನಾದ ಲು ಗುವಾಂಗ್ ಝೂ ಅವರಿಂದ ವಾಕ್‌ಓವರ್ ಲಭಿಸಿತು. ಗುವಾಂಗ್ ಗಾಯಗೊಂಡಿದ್ದಾರೆ.

ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನುಭವಿಸಿದರು. ಇಂಡೊನೇಷ್ಯಾದ ಮಾರ್ಕಸ್ ಜಿಡಿಯಾನ್ ಮತ್ತು ಕೆವಿನ್ ಸುಕಾಮುಲ್ಜೊ 24–22, 21–17ರಿಂದ ಭಾರತದ ಜೋಡಿಯನ್ನು ಪರಾಭವಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT