ಭಾನುವಾರ, ಅಕ್ಟೋಬರ್ 20, 2019
21 °C
ಅಖಿಲ ಭಾರತ ಆಹ್ವಾನಿತ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿ

ಸೂಪರ್‌ ಲೀಗ್‌ ಹಂತಕ್ಕೆ ಆಳ್ವಾಸ್‌ ತಂಡಗಳು

Published:
Updated:

ಬೆಂಗಳೂರು: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಪುರುಷರ ಮತ್ತು ಮಹಿಳಾ ತಂಡದವರು ಬಳ್ಳಾರಿಯ ಶ್ರವಣ ಸಂಸ್ಥೆ ಆಶ್ರಯದ ಅಖಿಲ ಭಾರತ ಆಹ್ವಾನಿತ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೂಪರ್‌ ಲೀಗ್‌ ಹಂತ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಆಳ್ವಾಸ್‌ ತಂಡ 35–19, 35–27 ನೇರ ಗೇಮ್‌ಗಳಿಂದ ಹೈದರಾಬಾದ್‌ನ ಸಾಯಿ ಸ್ಪೋರ್ಟ್ಸ್‌ ತಂಡವನ್ನು ಪರಾಭವಗೊಳಿಸಿತು.

ಇದಕ್ಕೂ ಮೊದಲು ನಡೆದಿದ್ದ ಲೀಗ್‌ ಪಂದ್ಯದಲ್ಲಿ ಆಳ್ವಾಸ್‌ 35–20, 35–28ರಲ್ಲಿ ಬಳ್ಳಾರಿಯ ಶ್ರವಣ ಫೈವ್ಸ್‌ ಎದುರು ಗೆದ್ದಿತ್ತು.

ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರವಣ ಫೈವ್ಸ್‌ 29–35, 29–35ರಲ್ಲಿ ಚೆನ್ನೈನ ದಕ್ಷಿಣ ರೈಲ್ವೆ ‘ಎ’ ಎದುರು ಪರಾಭವಗೊಂಡಿತು. ಹೀಗಿದ್ದರೂ ಆತಿಥೇಯ ತಂಡವಾಗಿರುವುದರಿಂದ ಸೂಪರ್‌ ಲೀಗ್‌ ಪ್ರವೇಶ ದೊರೆಯಿತು.

ಎಂಟರ ಘಟ್ಟದ ಇತರ ಪಂದ್ಯಗಳಲ್ಲಿ ಚೆನ್ನೈನ ಐ.ಸಿ.ಎಫ್‌ 35–32, 35–30ರಲ್ಲಿ ದಕ್ಷಿಣ ರೈಲ್ವೆ ‘ಬಿ’ ಎದುರೂ, ಸ್ಪಾರ್ಟನ್ಸ್‌, ಚೆನ್ನೈ 28–35, 35–28, 35–27ರಲ್ಲಿ ಚೆನ್ನೈನ ಎಸ್‌.ಆರ್‌.ಎಂ.ವಿಶ್ವವಿದ್ಯಾಲಯ ವಿರುದ್ಧವೂ ವಿಜಯಿಯಾದವು.

ಮಹಿಳಾ ವಿಭಾಗದ ಪಂದ್ಯದಲ್ಲಿ ಆಳ್ವಾಸ್‌ 35–28, 35–28ರಲ್ಲಿ ಕಾರುಣ್ಯ ತಂಡವನ್ನು ಸೋಲಿಸಿತು.

ಬಳ್ಳಾರಿಯ ಶ್ರವಣ ಫೈವ್ಸ್‌ 35–13, 35–19ರಲ್ಲಿ ಜಯಾ ಸ್ಪೋರ್ಟ್ಸ್‌ ಎದುರೂ, 35–11, 35–20ರಲ್ಲಿ ಹೋಲಿ ಕ್ರಾಸ್‌ ತಂಡಗಳ ವಿರುದ್ಧವೂ ಗೆದ್ದು ಸೂಪರ್‌ ಲೀಗ್‌ಗೆ ಅರ್ಹತೆ ಪಡೆಯಿತು.

ಇತರ ಪಂದ್ಯಗಳಲ್ಲಿ ಕೊಯಮತ್ತೂರಿನ ನಿರ್ಮಲಾ ಕಾಲೇಜು ತಂಡ 35–23, 35–9ರಲ್ಲಿ ಪಾಲಕ್ಕಾಡ್‌ನ ಗ್ಯಾಲಕ್ಸಿ ತಂಡದ ಎದುರೂ, ದಿಂಡಿಗಲ್‌ನ ಪಿಎಸ್‌ಎನ್‌ಎ ಎಂಜಿನಿಯರಿಂಗ್‌ ಕಾಲೇಜು 35–28, 35–25ರಲ್ಲಿ ಎಸ್‌.ಆರ್‌.ಎಂ.ವಿಶ್ವವಿದ್ಯಾಲಯದ ಮೇಲೂ ಗೆದ್ದವು.

ಮೊದಲ ಪಂದ್ಯದಲ್ಲಿ ಸೋತ ಎಸ್‌.ಆರ್‌.ಎಂ. ವಿಶ್ವವಿದ್ಯಾಲಯ ತಂಡ ನಂತರ 35–27, 35–25ರಲ್ಲಿ ಜಯಾ ಸ್ಪೋರ್ಟ್ಸ್‌ ಎದುರು ವಿಜಯಿಯಾಯಿತು.

Post Comments (+)