ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರಾಟ ತೊಂದರೆಯಲ್ಲೂ ಛಲ ಬಿಡದ ಅಮಿತ್

ಬೆಳ್ಳಿ ಪಥದಲ್ಲಿ ಹರಿಯಾಣ ಹುಡುಗನ ನಡಿಗೆ
Last Updated 21 ಆಗಸ್ಟ್ 2021, 20:15 IST
ಅಕ್ಷರ ಗಾತ್ರ

ನೈರೋಬಿ, ಕೆನ್ಯಾ: ಹರಿಯಾಣದ ಅಮಿತ್ ಖತ್ರಿ ಉಸಿರಾಟದ ಸಮಸ್ಯೆಯ ನಡುವೆಯೂ ಗುರಿ ಮುಟ್ಟಿ ಪದಕಕ್ಕೆ ಕೊರಳೊಡ್ಡಿದರು.

ಶನಿವಾರ ಇಲ್ಲಿ 20 ವರ್ಷದೊಳಗಿನವರ 10 ಕಿ.ಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಅಮಿತ್ ಮೊದಲ ಒಂಬತ್ತು ಸಾವಿರ ಮೀಟರ್ಸ್‌ ದೂರದವರೆಗೂ ಮುನ್ನಡೆ ಸಾಧಿಸಿದ್ದರು. ಆದರೆ, ಚಿನ್ನದ ಪದಕದ ಸನಿಹದಲ್ಲಿ ಎಡವಿದರು. ಅದಕ್ಕೆ ಕಾರಣವಾಗಿದ್ದು ಸ್ಪರ್ಧೆ ನಡೆದ ಪ್ರದೇಶವು ಎತ್ತರದಲ್ಲಿರುವುದು. ಸಮುದ್ರಮಟ್ಟದಿಂದ ಸುಮಾರು 1800 ಮೀಟರ್ಸ್ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ನಡೆಯುವಾಗ ಅಮಿತ್ ಉಸಿರಾಟದ ತೊಂದರೆ ಅನುಭವಿಸಿದರು. ಇದರಿಂದಾಗಿ ಅವರ ವೇಗ ಕುಂಠಿತವಾಯಿತು.

ಅವರು ಹೋದ ಜನವರಿಯಲ್ಲಿ ನಡೆದಿದ್ದ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ನಲ್ಲಿ 40 ನಿಮಿಷ, 40.97 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿದ್ದರು. ಅದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯೂ ಆಗಿತ್ತು.

‘ಈಗ ಲಭಿಸಿರುವ ಬೆಳ್ಳಿ ಪದಕದಿಂದ ಖುಷಿಯಾಗಿದೆ. ಆದರೆ, ಇದಕ್ಕಿಂತಲೂ ಉತ್ತಮ ಫಲಿತಾಂಶದ ನಿರೀಕ್ಷೆ ಇತ್ತು. ಐದು ದಿನಗಳ ಹಿಂದಷ್ಟೇ ಇಲ್ಲಿಗೆ ಬಂದಿದ್ದೇನೆ. ಎತ್ತರದ ಪ್ರದೇಶದ ವಾತಾವರಣದಿಂದಾಗಿ ತೊಂದರೆಯಾಯಿತು’ ಎಂದು ಖತ್ರಿ ಹೇಳಿದರು.

‘ಸ್ಪರ್ಧೆಯ ಒಂದು ಹಂತದಲ್ಲಿ ಉಸಿರಾಡಲು ಬಹಳ ಕಷ್ಟವಾಗಿತ್ತು. ಆದರೂ ಕಷ್ಟಪಟ್ಟು ಗುರಿ ಮುಟ್ಟಿ ಪದಕ ಜಯಿಸಿರುವುದು ಸಂತಸ ತಂದಿದೆ’ ಎಂದರು. ಈ ವಿಭಾಗದಲ್ಲಿ ಭಾರತ ಪದಕ ಜಯಿಸಿರುವುದು ಇದೇ ಮೊದಲು.

ಟಾಪ್ಸ್‌ಗೆ ಸೇರಿಸಿ: ಅಮಿತ್ ಅವರನ್ನು ಟಾರ್ಗೆಟ್‌ ಒಲಿಂಪಿಕ್ಸ್ ಪೋಡಿಯಂ ಯೋಜನೆಗೆ (ಟಾಪ್ಸ್) ಸೇರಿಸಬೇಕೆಂದು ಅವರ ಕೋಚ್‌ ಚಂದನ್ ಸಿಂಗ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

‘ಅಮಿತ್ ಅವರ ನಡಿಗೆ ತಂತ್ರಗಳು ಉತ್ತಮವಾಗಿವೆ. ಆತ ಬೇಗನೆ ಕಲಿತುಕೊಳ್ಳುವ ಹುಡುಗ. ಕೆಲವೇ ವರ್ಷಗಳಲ್ಲಿ ಆತ ದೇಶದ ಅಗ್ರ ನಡಿಗೆ ಸ್ಪರ್ಧಿ ಆಗುವ ಸಾಧ್ಯತೆಯಿದೆ. ಆದರೆ ಆತನಿಗೆ ಆರ್ಥಿಕ ನೆರವು ಬೇಕು. ಹೀಗಾಗಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಅವರನ್ನು ಟಾಪ್ಸ್‌ಗೆ ಸೇರಿಸಿಕೊಳ್ಳಬೇಕು‘ ಎಂದು ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಚಂದನ್ ಹೇಳಿದ್ದಾರೆ.

2018ರಿಂದ ಚಂದನ್ ಅವರು ಅಮಿತ್‌ ಖತ್ರಿಗೆ ತರಬೇತಿ ಕೊಡುತ್ತಿದ್ದಾರೆ. ನೈರೋಬಿಯ ಸ್ಪರ್ಧೆಯ ಪೂರ್ವಸಿದ್ಧತೆಗಾಗಿ ಉತ್ತರಾಖಂಡದ ನೈನಿತಾಲ್ ಮತ್ತು ಮುಕ್ತೇಶ್ವರದ ಗುಡ್ಡಗಾಡು ಪ್ರದೇಶಗಳಲ್ಲಿ ಅಮಿತ್‌ಗೆ ತರಬೇತಿ ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT