ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿ ಡೈರಿಯಲ್ಲಿ 7 ಸಾಹಿತಿಗಳ ಹೆಸರು!

Last Updated 31 ಮೇ 2018, 19:33 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿ ಕೆ.ಎಸ್.ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಬಂಧಿತನಾಗಿರುವ ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್ (37) ಬಳಿ ಎಸ್‌ಐಟಿಗೆ ಸಿಕ್ಕಿರುವ ಡೈರಿಯಲ್ಲಿ, ಪತ್ರಕರ್ತೆ ಗೌರಿ ಲಂಕೇಶ್ ಮಾತ್ರವಲ್ಲದೆ ರಾಜ್ಯದ ಏಳು ಸಾಹಿತಿಗಳ ಹೆಸರುಗಳೂ ಇವೆ.

ಇದನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ ಎಸ್‌ಐಟಿ ಅಧಿಕಾರಿಯೊಬ್ಬರು, ‘ಡೈರಿಯಲ್ಲಿ ಒಟ್ಟು ಎಂಟು ಮಂದಿಯ ಹೆಸರುಗಳಿವೆ. ಗೌರಿ ಅವರ ಹೆಸರೇ ಪಟ್ಟಿಯಲ್ಲಿ ಮೊದಲಿದೆ. ತನಿಖೆ ದೃಷ್ಟಿಯಿಂದ ಉಳಿದವರ ಹೆಸರುಗಳನ್ನು ಈಗಲೇ ಬಹಿರಂಗ ಮಾಡುವುದಿಲ್ಲ. ಆದರೆ, ಗೌರಿ ಹತ್ಯೆ‌ ನಡೆದ ಬಳಿಕ ಮುಂಜಾಗ್ರತಾ ಕ್ರಮವಾಗಿ ರಾಜ್ಯದ 28 ಸಾಹಿತಿಗಳ ಮನೆಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಅವರಲ್ಲೇ ಏಳು ಮಂದಿಯ ಹೆಸರುಗಳು ಡೈರಿಯಲ್ಲಿವೆ’ ಎಂದು ತಿಳಿಸಿದರು.

‘ಮಹಾರಾಷ್ಟ್ರ ಮತ್ತು ಬೆಂಗಳೂರಿನ ಕೆಲ ಸ್ಥಳಗಳ ವಿವರ, ಹಣಕಾಸಿನ ಲೆಕ್ಕಾಚಾರ, ಮೊಬೈಲ್ ಸಂಖ್ಯೆಗಳು ಹಾಗೂ ಕೆಲ ಕೋಡ್‌ ವರ್ಡ್‌ಗಳೂ ಡೈರಿಯಲ್ಲಿವೆ. ಅದು ಅಮೋಲ್ ಕಾಳೆಯ ಕೈಬರಹವೇ ಎಂಬುದನ್ನು ತಿಳಿಯಲು ಡೈರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಿದ್ದೇವೆ’ ಎಂದು ತಿಳಿಸಿದರು.

‘ಆರೋಪಿಗಳು ಕೋಡ್‌ ವರ್ಡ್‌ ರಹಸ್ಯವನ್ನು ಬಾಯ್ಬಿಡುತ್ತಿಲ್ಲ. ಈ ಗ್ಯಾಂಗ್‌ನ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತ ಸಿಕ್ಕರೆ, ಗೌರಿ ಹಾಗೂ ಭಗವಾನ್ ಎರಡೂ ಪ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಹೆಸರು, ವಿಳಾಸ ಸೇರಿದಂತೆ ಈಗಾಗಲೇ ಆತನ ಸಂಪೂರ್ಣ ಮಾಹಿತಿ ಸಿಕ್ಕಿದ್ದು, ಎಸಿಪಿ ನೇತೃತ್ವದ ತಂಡವೊಂದು ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿದೆ’ ಎಂದು ವಿವರಿಸಿದರು.

ಬಾಡಿ ವಾರಂಟ್ ಮೇಲೆ ಆರೋಪಿಗಳನ್ನು ಹತ್ತು ದಿನ ತಮ್ಮ ಕಸ್ಟಡಿಗೆ ಪಡೆದಿರುವ ಎಸ್‌ಐಟಿ, ಗುರುವಾರ ರಾತ್ರಿಯಿಂದಲೇ ವಿಚಾರಣೆ ತೀವ್ರಗೊಳಿಸಿದೆ. ಅಗತ್ಯ ಬಿದ್ದರೆ, ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದಕ್ಕೂ ಅಧಿಕಾರಿಗಳು ನಿರ್ಧರಿಸಿದ್ದಾರೆ.

1 ಸಿಮ್, 74 ಮೊಬೈಲ್!: ‘ಹತ್ಯೆಗೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದ ಅರೋಪಿಗಳು, ‘ಮಿಷನ್–1, ಅಧರ್ಮೀಯರ ವಿನಾಶ’ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಿದ್ದರು. ಬಂಧಿತರ ಪೈಕಿ ಒಬ್ಬಾತನ ಬಳಿಯೇ 22 ಮೊಬೈಲ್‌ ಫೋನ್‌ಗಳು ಸಿಕ್ಕವು. ಆತನ ಪರ್ಸ್‌ನಲ್ಲಿದ್ದ ಒಂದು ಸಿಮ್‌ ಪರಿಶೀಲಿಸಿದಾಗ, ಅದು 74 ಮೊಬೈಲ್‌ಗಳಿಗೆ ಬಳಕೆಯಾಗಿತ್ತು. ಇದೊಂದು ಸಿಮ್‌ನಿಂದ ಯಾವ ಯಾವ ಸಂಖ್ಯೆಗಳಿಗೆ ಕರೆಗಳು ಹೋಗಿವೆಯೋ, ಅವೆಲ್ಲವುಗಳ ಸಿಡಿಆರ್‌ ತೆಗೆಸುತ್ತಿದ್ದೇವೆ’ ಎಂದು ಅಧಿಕಾರಿಗಳು ಹೇಳಿದರು.

ಗುಂಡುಗಳ ಸಾಮ್ಯತೆ

‘ಗೌರಿ ಹಂತಕರಿಗೆ ಗುಂಡುಗಳನ್ನು ಪೂರೈಸಿದ್ದ ನವೀನ್ ಅಲಿಯಾಸ್ ಹೊಟ್ಟೆ ಮಂಜನೇ ಭಗವಾನ್ ಅವರನ್ನು ಕೊಲ್ಲುವುದಕ್ಕೂ ಸುಜಿತ್ ಅಲಿಯಾಸ್ ಪ್ರವೀಣ್‌ಗೆ ಗುಂಡುಗಳನ್ನು ಕೊಟ್ಟಿದ್ದ ಎಂಬುದು ಖಚಿತವಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT