ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಅನಿಲ್ ಕಪೂರ್ ಫಿಟ್ ನೆಸ್ ಮಂತ್ರ :ಮುಂಜಾನೆ ಓಟ; ಒಳ್ಳೆಯ ಊಟ

ದಕ್ಷಿಣ ಭಾರತದ ಊಟದ ಪದ್ಧತಿಯಿಂದ ಫಿಟ್ ನೆಸ್‌ ಕಾಯ್ದುಕೊಳ್ಳಲು ಸಹಾಯ
Last Updated 6 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನ ಚಿರಯೌವ್ವನಿಗ ಅನಿಲ್‌ ಕಪೂರ್‌ ಇತ್ತೀಚೆಗೆ ತಮ್ಮ ಫಿಟ್‌ನೆಸ್‌ ಗುಟ್ಟನ್ನು ರಟ್ಟು ಮಾಡಿದರು. ವಯಸ್ಸು 62 ಆದರೂ, 80ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿರಿಸಿದಾಗ ಇದ್ದ ಅದೇ ಫಿಟ್‌ನೆಸ್‌ ಅನ್ನು ಈಗಲೂ ಉಳಿಸಿಕೊಂಡಿದ್ದಾರೆ. ಇದಕ್ಕೆ ದಕ್ಷಿಣ ಭಾರತದತಿನಿಸುಗಳೇ ಕಾರಣ ಎಂದಿದ್ದಾರೆ.

‘ದಕ್ಷಿಣ ಭಾರತದ ಪಾಕ ಪದ್ಧತಿಯಲ್ಲಿ ವಿಶಿಷ್ಟ ಕ್ರಮವಿದೆ. ದಶಕಗಳಿಂದ ಇದೇ ನನ್ನ ಆಹಾರ ಕ್ರಮವಾಗಿದೆ. ಇದರ ಜೊತೆಗೆ ಓಡುತ್ತೇನೆ’ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದರು.

‘ಬೆಳಿಗ್ಗೆ ಇಡ್ಲಿ– ದೋಸೆಯ ಜೊತೆಗೆ ಸಾಂಬಾರ್‌ ಅಥವಾ ಚಟ್ನಿ, ಮಧ್ಯಾಹ್ನಕ್ಕೆ ಅನ್ನ, ರಸಂ– ಸಾಂಬಾರ್‌ ಜೊತೆಗೆ ಉಪ್ಪಿನ ಕಾಯಿ ಮತ್ತು ಮೊಸರು ತಮ್ಮ ಫಿಟ್‌ನೆಸ್‌ನ ಡಯಟ್‌ ಮಂತ್ರ’ ಎಂದು ಕಪೂರ್‌ ಹೇಳುತ್ತಾರೆ. ‘ಅನಾರೋಗ್ಯದಿಂದ ನರಳುತ್ತಿರುವವರಿಗೆ ಇಡ್ಲಿಗಿಂತ ಉತ್ತಮ ಆಹಾರ ಇಲ್ಲ. ಹಾಗಿದ್ದ ಮೇಲೆ ಡಯಟ್‌ ಮಾಡುವವರಿಗೆ ಇದೇ ಸುರಕ್ಷಿತ ಆಹಾರ ಅಲ್ಲವೇ? ಎಂದು ಪ್ರಶ್ನಿಸುತ್ತಾರೆ.

ಉತ್ತಮ ಆಹಾರಭ್ಯಾಸದ ಜೊತೆಕಪೂರ್‌ ಅವರು, ಒಂದು ದಿನವೂ ಬೆಳಗ್ಗಿನ ಓಟವನ್ನು ತಪ್ಪಿಸಿಲ್ಲ. ಓಡುವುದೆಂದರೆ ತಮಗೆ ಖುಷಿ ನೀಡುವ ಅನುಭವ ಎಂದು ಅವರು ಹೇಳುತ್ತಾರೆ.

‘ನಿಮ್ಮ ದೇಹವನ್ನು ಉತ್ತಮವಾಗಿ ಸಲಹಿದರೆ, ಅದು ನಿಮ್ಮನ್ನು ಉತ್ತಮವಾಗಿ ಸಲಹುತ್ತದೆ’ ಎನ್ನುವ ಅವರು, ‘ತಿನ್ನುವಲ್ಲಿ, ಕುಡಿಯುವಲ್ಲಿ, ನಗುವಿನಲ್ಲಿ, ಪ್ರಯಾಣದಲ್ಲಿ, ಮಾತಿನಲ್ಲಿ, ಲೈಂಗಿಕತೆಯಲ್ಲಿ ನಮ್ಮ ದೇಹ ಜೊತೆಯಾಗಿದೆ. ನಮ್ಮ ಎಲ್ಲ ಅಭಿರುಚಿಗಳನ್ನು ಜೀವನದ ಕೊನೆಯವರೆಗೂ ಕಾಯ್ದುಕೊಳ್ಳಲು ನಾವು ನಮ್ಮ ದೇಹವನ್ನು ಚೆನ್ನಾಗಿ ಕಾಯ್ದುಕೊಳ್ಳಬೇಕಲ್ಲವೇ? ಅದಕ್ಕಾಗಿ ದಿನದ ಒಂದು ಗಂಟೆಯನ್ನಾದರೂ ವ್ಯಾಯಾಮಕ್ಕೆ ಮೀಸಲಿಡಬೇಕು ಎಂದು ಹೇಳುತ್ತಾರೆ.

ಶಿಸ್ತು ಎಲ್ಲದರಲ್ಲೂ

‘ದಿಲ್‌ ಧಡಕನೆ ದೋ’ ಸಿನಿಮಾ ಶೂಟಿಂಗ್‌ ಹಡಗೊಂದರಲ್ಲಿ ನಡೆಯುತ್ತಿದ್ದಾಗ ಸಹನಟರು ಶೂಟಿಂಗ್‌ ನಂತರ ಪಾರ್ಟಿ ಸಂಭ್ರಮದಲ್ಲಿ ಮುಳುಗಿದ್ದರೆ, ಅನಿಲ್‌ ಕಪೂರ್‌ ಅವರು ವರ್ಕ್‌ಔಟ್‌ ಮಾಡಿ, ತಮ್ಮ ‘ಡಯಟ್‌ ಫುಡ್‌’ ಸವಿದು ಒಳ್ಳೆಯ ನಿದ್ದೆ ಮಾಡುತ್ತಿದ್ದರು. ಅಲ್ಲದೆ, ಬಾಲಿವುಡ್‌ನ ‘ಎನೆರ್ಜಿಟಿಕ್‌’ ತಾರೆ ಎನಿಸಿಕೊಂಡ ರಣ್‌ವೀರ್‌ ಸಿಂಗ್‌ ಅವರಿಗೆ ಪೈಪೋಟಿ ನೀಡುವಂತೆ ಕಸರತ್ತನ್ನು ನಡೆಸುತ್ತಿದ್ದರು ಎಂದು ಚಿತ್ರದ ಸಹ ನಟಿ ಶೆಫಾಲಿ ಶಾ ಒಮ್ಮೆ ಹೇಳಿದ್ದರು.
‘ಬೆಳಿಗ್ಗೆ 5ಕ್ಕೆ ಶೂಟಿಂಗ್‌ ಆರಂಭವಾಗಿ ಸಂಜೆ ಮುಗಿದರೂ ಅವರ ಮುಖದಲ್ಲಿ ಆಯಾಸವೇ ಕಾಣುತ್ತಿರಲಿಲ್ಲ. ಬೆಳಿಗ್ಗೆ ಇದ್ದ ಅವರ ನಟನಾ ಕೌಶಲದ ಪಡಿಯಚ್ಚನ್ನು ಸಂಜೆಯಲ್ಲಿಯೂ ನಾವು ಕಾಣಬಹುದಿತ್ತು’ ಎಂದು ಶಾ, ಕಪೂರ್‌ ಅವರ ಜೀವನ ಪ್ರೀತಿ ಮತ್ತು ಶಿಸ್ತನ್ನು ಕೊಂಡಾಡಿದ್ದರು.

ಅನಿಲ್‌ ಅವರ ಮಾತುಗಳಲ್ಲಿ ಅವರ ಫಿಟ್‌ನೆಸ್‌ ಸೂತ್ರ ಬಿಡಿಸುವುದಾದರೆ...

1. ದೇಹದ ಸದೃಢತೆ ನಮ್ಮ ಶಿಸ್ತಿನ ಜೀವನಕ್ಕೆ ಸಂಬಂಧಿಸಿದ್ದು, ಆರೋಗ್ಯ ಉತ್ತಮವಾಗಿರಬೇಕೆಂದರೆ ವ್ಯಾಯಾಮ ಮಾಡಬೇಕು. ಅದನ್ನು ಸರಿಯಾದ ಕ್ರಮದಲ್ಲಿ ಅಭ್ಯಾಸ ನಡೆಸಬೇಕು

2. ನನಗೆ ನನ್ನದೇ ಆದ ಆಹಾರ ಪದ್ಧತಿ ಇದೆ. ನಾನು ಅನ್ನವನ್ನು ಇಷ್ಟಪಟ್ಟು ತಿನ್ನುತ್ತೇನೆ. ಆದರೆ, ಅದು ಎಷ್ಟು ಪ್ರಮಾಣದಲ್ಲಿ, ಅದನ್ನು ಹೇಗೆ ಬೇಯಿಸಲಾಗುತ್ತದೆ ಮತ್ತು ಅದು ಯಾವ ರೀತಿಯ ಅಕ್ಕಿ ಎಂಬುದನ್ನೂ ಒಳಗೊಂಡಿದೆ

3.ನಾನು ಎಂದಿಗೂ ಸಮೋಸಾಗಳನ್ನು ಮುಟ್ಟುವುದಿಲ್ಲ. ಆದರೆ, ಸಮೋಸ ಒಳಗಿನ ಭಾಗವನ್ನು ಇಷ್ಟ ಪಡುತ್ತೇನೆ. ಅದನ್ನು ಹೆಚ್ಚು ತಿನ್ನುವುದಿಲ್ಲ.ಇಷ್ಟಪಡುವ ಆಹಾರವನ್ನು ತೃಪ್ತಿಯಾಗುವ ಮಟ್ಟಿಗೆ ತಿನ್ನಲಾರೆ. ಎಚ್ಚರಿಕೆಯಿಂದ, ಅಷ್ಟೇ ಪ್ರೀತಿಯಿಂದ, ಮಿತವಾಗಿ ಆಹಾರ ಸ್ವೀಕರಿಸುತ್ತೇನೆ.

4. ನಾನು ಸ್ಲಿಮ್ ಆಗಲು ಜೀವನದ ಉದ್ದಕ್ಕೂ ಸಾಕಷ್ಟು ಶ್ರಮಿಸಿದ್ದೇನೆ.ಬಯಸಿದ್ದನ್ನು ಸಾಧಿಸಲು ನಮ್ಮ ಸಂತೋಷಗಳನ್ನು ತ್ಯಜಿಸಬೇಕು ಅಲ್ಲವೇ?

5. ನಿಮ್ಮ ಜೊತೆಗಿನ ಜನರು ನಿಮ್ಮ ಆಲೋಚನೆಗಳನ್ನು ಗೌರವಿಸಬೇಕು. ನಿಮ್ಮ ಶಿಸ್ತಿನ ಮೇಲೆ ಅವರ ಒಲವನ್ನು ಹೇರಬಾರದು. ಅಂದರೆ ತಿನ್ನಲು– ಕುಡಿಯಲು ಒತ್ತಾಯಿಸಬಾರದು. ಸಲ್ಮಾನ್‌ ಖಾನ್‌, ಹೃತಿಕ್‌ ರೋಷನ್‌ ಅವರು ತಮ್ಮ ದೇಹವನ್ನು ಫಿಟ್‌ ಆಗಿ ಇರಿಸಿಕೊಳ್ಳಲು ಹೆಚ್ಚು ಕಸರತ್ತು ನಡೆಸುತ್ತಾರೆ. ಅವರಂತೆಯೇ ನಾನೂ ಹೆಚ್ಚು ಶ್ರಮ ವಹಿಸುತ್ತೇನೆ

6. ಚೆನ್ನಾಗಿ ನಿದ್ದೆ ಮಾಡುತ್ತೇನೆ. ನಿದ್ರೆಯ ಕೊರತೆ ನಮ್ಮನ್ನು ಉಬ್ಬಿಸುತ್ತದೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತದೆ. ಒಳ್ಳೆಯ ಊಟದಂತೆ ಒಳ್ಳೆಯ ನಿದ್ದೆಯೂ ನಮ್ಮದಾಗಬೇಕು

7. ಸಕಾರಾತ್ಮಕವಾದ ಯೋಚನೆಗಳು ನಮ್ಮ ಆರೋಗ್ಯವನ್ನು ಸ್ಥಿರವಾಗಿಡುತ್ತದೆ. ಇದೇ ನಮ್ಮ ಅಸ್ತಿತ್ವದ ಮಂತ್ರ ಎಂದು ಭಾವಿಸಿದ್ದೇನೆ.ನೀವು ಇತರರಿಗೆ ಸುಳ್ಳು ಹೇಳುತ್ತೀರೆಂದರೆ ನೀವು ನಿಮಗೂ ಸುಳ್ಳು ಹೇಳಿತ್ತೀರಿ. ಅನಾರೋಗ್ಯ ಆಗಲೇ ನಿಮ್ಮ ಬೆನ್ನನ್ನು ಹತ್ತುತ್ತದೆ.

8. ಒಮ್ಮೆದಲೈ ಲಾಮಾ ಅವರನ್ನು ಭೇಟಿಯಾಗುವ ಅದೃಷ್ಟ ನನ್ನದಾಗಿತ್ತು. ಅವರ ಮಾತುಗಳು ನನ್ನನ್ನು ಉಲ್ಲಸಿತಗೊಳಿಸಿದ್ದವು. ಲಾಮಾ ಅವರಿಗೆ 80 ದಾಟಿದ್ದರೂ ಅವರ ಮುಖ ಎಷ್ಟು ತೇಜೋಮಯವಾಗಿದೆ ನೋಡಿ. ಅವರು ‘ನಿಮ್ಮ ಬದುಕನ್ನು ಪ್ರೀತಿಸಿ, ಅಂತೆಯೇ ನಿಮ್ಮ ದೇಹ ಮತ್ತು ಮನಸ್ಸನ್ನು’ ಎಂದಿದ್ದರು. ಅಂತೆಯೇ ನನ್ನ ಜೀವನವನ್ನು, ಫಿಟ್‌ನೆಸ್‌ ಅಭ್ಯಾಸವನ್ನು, ಆಹಾರ ಕ್ರಮವನ್ನು ಪ್ರೀತಿಸುತ್ತೇನೆ. ಎಲ್ಲ ಕೆಲಸಗಳನ್ನು ಉತ್ತಮವಾಗಿ ಮಾಡಲು ಅತ್ಯುತ್ತಮವಾಗಿ ಪ್ರಯತ್ನಿಸುತ್ತೇನೆ.

ಇಡ್ಲಿ– ಸಾಂಬಾರ್ ಮತ್ತು ಕಪೂರ್‌

‌ಇಡ್ಲಿ, ದೋಸೆ ಮೊದಲಾದ ದಕ್ಷಿಣ ಭಾರತದ ಆಹಾರಗಳಲ್ಲಿ ಅತ್ಯುತ್ತಮ ಪೋಷಕಾಂಶಗಳಿವೆ ಎಂದು ಆಹಾರ ತಜ್ಞರೂ ಒ‌ಪ್ಪಿದ್ದಾರೆ.ಭಾರತದ ಬೆಳಗಿನ ಉಪಹಾರಗಳ ಕುರಿತು2013ರಲ್ಲಿ ನಡೆಸಿದ ಸರ್ವೇಕ್ಷಣೆಯೊಂದು ‘ಚೆನ್ನೈನ ಉಪಹಾರವೇ ಉತ್ತಮ ಆಹಾರಕ್ರಮ’ ಎಂದು ಹೇಳಿತ್ತು. ಅಲ್ಲದೆ, ‘ಪೋಷಕಾಂಶಗಳಉತ್ತಮ ಸಮ್ಮಿಶ್ರಣ’ ಎಂಬ ಮನ್ನಣೆಯನ್ನೂನೀಡಿತ್ತು. ಅಕ್ಕಿ ಮತ್ತು ಉದ್ದಿನ ಬೇಳೆಯಲ್ಲಿ ತಯಾರಾದ ದೋಸೆ– ಇಡ್ಲಿ ಪರಿಪೂರ್ಣ ಉಪಹಾರ ಎಂದು ಹೇಳಿರುವ ಅದು, ತರಕಾರಿಗಳಿಂದ ಕೂಡಿದ ಸಾಂಬಾರ್‌ ಪೋಷಕಾಂಶಗಳ ಜೊತೆಗೆ ಜೀರ್ಣಕ್ರಿಯೆಗೂ ಸಹಕರಿಸಬಲ್ಲವು ಎಂದೂ ತಿಳಿಸಿತ್ತು. ಅನಿಲ್‌ ಕಪೂರ್‌ ಅವರ ಆಹಾರ ಕ್ರಮವೂ ಇದಕ್ಕೆ ಪುಷ್ಟಿ ನೀಡುತ್ತದೆ.

ಇಡ್ಲಿ ಸುಲಭವಾಗಿ ಜೀರ್ಣವಾಗುತ್ತದೆ. ಅಲ್ಲದೆ,ದೇಹವು ತನ್ನ ಕಡಿಮೆ ಶಕ್ತಿಯಲ್ಲಿ ಈ ಆಹಾರವನ್ನು ಅರಗಿಸಿಕೊಳ್ಳುತ್ತದೆ. ಹುದುಗಿದ ಆಹಾರದಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ. ಇವು ಕಾಯಿಲೆಗಳ ವಿರುದ್ಧವೂ ಹೋರಾಡುವ ಅಂಶಗಳನ್ನು ಹೊಂದಿವೆ. ವಿಟಮಿನ್ –ಬಿ ಅನ್ನು ಉದ್ದೀಪಿಸುವಹುದುಗಿದ ಆಹಾರಗಳು, ರೋಗ ನಿರೋಧಕ ಶಕ್ತಿಯನ್ನು, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ. ಇದರೊಂದಿಗೆ ಕೊಬ್ಬರಿ ಎಣ್ಣೆಯಲ್ಲಿ ಅಡಿಗೆ ಮಾಡುವ ಕ್ರಮವೂ ಇರುವುದರಿಂದ ನಮ್ಮ ಕರುಳು, ಚರ್ಮ, ಕೂದಲು ಆರೋಗ್ಯ ಪೂರ್ಣವಾಗಿರುತ್ತದೆಎನ್ನುತ್ತಾರೆ ಆಹಾರ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT