ಶುಕ್ರವಾರ, ಮೇ 14, 2021
30 °C

ಭಾರತದ ಪ್ರಥಮ ಮಹಿಳಾ ಹಾಕಿ ತೀರ್ಪುಗಾರ್ತಿ ಪುಚ್ಚಿಮಂಡ ಅನುಪಮಾ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ / ನಾಪೋಕ್ಲು: ಭಾರತದ ಪ್ರಥಮ ಅಂತರರಾಷ್ಟ್ರೀಯ ಮಹಿಳಾ ಹಾಕಿ ತೀರ್ಪುಗಾರ್ತಿ ಹಾಗೂ ಹಾಕಿಪಟು ಕೊಡಗು ಜಿಲ್ಲೆಯ ನಾಪೋಕ್ಲುವಿನ ಮುಂಡಂಡ ಅನುಪಮಾ ಮಂದಣ್ಣ (41) (ಪುಚ್ಚಿಮಂಡ) ಅವರು ಕೋವಿಡ್‌ಗೆ ಬಲಿಯಾಗಿದ್ದಾರೆ.

ಕೊರೊನಾ ಸೋಂಕು ತಗುಲಿದ ಬಳಿಕ, ಒಂದು ವಾರದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಮೃತಪಟ್ಟಿದ್ದಾರೆ. ಇವರು, ಕೊಡಗು ಜಿಲ್ಲೆ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ದಿವಗಂತ ಪುಚ್ಚಿಮಂಡ ಶಿವಪ್ಪ ಹಾಗೂ ಶಾಂತಿ ಅವರ ಪುತ್ರಿ. 1980ರ ಜುಲೈ 8ರಂದು ಬಿಟ್ಟಂಗಾಲದಲ್ಲಿ ಜನಿಸಿದ್ದರು.

ವಿರಾಜಪೇಟೆ ಕಾವೇರಿ ಪ್ರಾಥಮಿಕ ಶಾಲೆ, ಕೂಡಿಗೆಯ ಕ್ರೀಡಾಶಾಲೆ, ಮಡಿಕೇರಿಯ ಜೂನಿಯರ್‌ ಕಾಲೇಜು, ಕಾವೇರಿ ಮಹಿಳಾ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು. ಪತಿ ಮಿಥುನ್‌ ಮಂದಣ್ಣ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರ ಪತಿಗೂ ಸೋಂಕು ತಗುಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

88 ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದ ಅನುಪಮಾ ಅವರು, ಕಾಮನ್‌ವೆಲ್ತ್‌ ಗೇಮ್‌, ಜೂನಿಯರ್‌ ಹಾಕಿ ವಿಶ್ವಕಪ್‌ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ಜೂನಿಯರ್ ವಿಶ್ವಕಪ್‌ನಲ್ಲಿ ಭಾಗವಹಿಸಿದ ರಾಷ್ಟ್ರದ ಮೊದಲ ಮಹಿಳಾ ಅಂಪೈರ್‌ ಎಂಬ ಖ್ಯಾತಿಯೂ ಇವರಿಗಿತ್ತು. ಹಾಕಿ ಆಟಗಾರ್ತಿ ಆಗಿಯೂ ಸಾಕಷ್ಟು ಹೆಸರು ಮಾಡಿದ್ದರು. 2005ರಲ್ಲಿ ಅಂತರರಾಷ್ಟ್ರೀಯ ಹಾಕಿ ಸಂಸ್ಥೆಯು ಅನುಪಮಾಗೆ ‘ಯಂಗ್‌ ಅಂಪೈರ್‌’ ಎಂಬ ಪ್ರಶಸ್ತಿ ನೀಡಿ ಗೌರವಿಸಿತ್ತು. 2007ರಲ್ಲಿ ದೆಹಲಿಯ ಸರ್ದಾರ್‌ ಗ್ಯಾನ್‌ ಸಿಂಗ್‌ ಹಾಕಿ ಸಮುದಾಯದವು ‘ಭಾರತದ ಶ್ರೇಷ್ಠ ಮಹಿಳಾ ಅಂಪೈರ್‌’ ಎಂಬ ಪ್ರಶಸ್ತಿ ನೀಡಿತ್ತು. 

ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ಹಾಕಿಪಟುವಾಗಿದ್ದ ಅನುಪಮಾ ಅವರು ಕೊಡಗಿನ ಏಕೈಕ ಹಾಗೂ ದೇಶದ ಪ್ರಥಮ ಅಂತರರಾಷ್ಟ್ರೀಯ ಮಹಿಳಾ ಹಾಕಿ ತೀರ್ಪುಗಾರರಾಗಿ ಜಿಲ್ಲೆಗೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದರು.

ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳು ಅನುಪಮಾ ಅವರ ಸಾಧನೆ ಗುರುತಿಸಿ ಗೌರವಿಸಿದ್ದವು. 2011ರಲ್ಲಿ ‘ನಮ್ಮ ಬೆಂಗಳೂರು ಕ್ರೀಡಾ ವ್ಯಕ್ತಿ’ ಪ್ರಶಸ್ತಿಗೂ ಭಾಜನರಾಗಿದ್ದರು.

ನಾಪೋಕ್ಲುವಿನಲ್ಲಿ ನಡೆದ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ, ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ ನಡೆದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರನ್ನು ಗೌರವಿಸಲಾಗಿತ್ತು. ಅನುಪಮಾ ಅಗಲಿಕೆ ನಾಡಿನ ಹಾಕಿ ಪ್ರೇಮಿಗಳಲ್ಲಿ ತೀವ್ರ ಆಘಾತ ಉಂಟು ಮಾಡಿದೆ ಎಂದು ಈ ಭಾಗದ ಹಾಕಿಪಟುಗಳು ನೋವು ತೋಡಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಹಾಕಿ ಆಟಗಾರರೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಅನುಪಮಾ ಅವರ ಸಾಧನೆ: ರಾಜ್ಯ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅನುಪಮಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಬಳಿಕ, 2000ದಲ್ಲಿ ಅಂಪೈರ್‌ ಕೋರ್ಸ್‌ ಮುಗಿಸಿ, ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಅದಾದ ಮೇಲೆ ಅಂತರರಾಷ್ಟ್ರೀಯ ಮಟ್ಟಕ್ಕೆ ಅನುಪಮಾ ಅವರು ಬೆಳೆದರು. ಪ್ರತಿ ವರ್ಷ ನಡೆಯುವ ಕೊಡವ ಹಾಕಿ ಟೂರ್ನಿಗೂ ತಪ್ಪದೇ ಬರುತ್ತಿದ್ದರು ಎಂದು ಸ್ಥಳೀಯರು ನೆನಪು ಮಾಡಿಕೊಳ್ಳುತ್ತಾರೆ.

2004ರಲ್ಲಿ ಜಪಾನ್‌ನಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿ, ಅದೇ ವರ್ಷ ಹೈದರಾಬಾದ್‌ನಲ್ಲಿ ನಡೆದಿದ್ದ ಜೂನಿಯರ್‌ ಏಷ್ಯಾಕಪ್‌, 2005ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಹಾಕಿ ಟೂರ್ನಿ, 2006ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌, 2007ರಲ್ಲಿ ಇಟಲಿಯಲ್ಲಿ ನಡೆದ ತ್ರೀ ನೇಷನ್‌ ಟೂರ್ನಿಮೆಂಟ್‌, ಜರ್ಮನಿ, ಹಾಲೆಂಡ್‌ನಲ್ಲಿ ನಡೆದಿದ್ದ ಪ್ರಮುಖ ಪಂದ್ಯಾವಳಿಯಲ್ಲಿ ಇವರು ಕಾರ್ಯ ನಿರ್ವಹಿಸಿದ್ದರು. 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌, 2013ರಲ್ಲಿ ಮಲೇಷ್ಯಾದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಅಂಪೈರ್‌ ಆಗಿ ಕಾರ್ಯ ನಿರ್ವಹಿಸಿದ್ದರು.

 ಕುರಿತು ಹಾಕಿ ಇಂಡಿಯಾ ಟ್ವೀಟ್ ಮಾಡಿದ್ದು, ಮಾಜಿ ಅಂತರರಾಷ್ಟ್ರೀಯ ಆಟಗಾರ್ತಿ ಹಾಗೂ ಹಾಕಿ ತೀರ್ಪುಗಾರ್ತಿ  ಪುಚ್ಚಿಮಂಡ ಅನುಪಮಾ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು