ಗುರುವಾರ , ನವೆಂಬರ್ 21, 2019
26 °C

ಏಷ್ಯನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌: ಭಾರತ ತಂಡದಲ್ಲಿ ಅರ್ಚನಾ

Published:
Updated:
Prajavani

ನವದೆಹಲಿ: ಕರ್ನಾಟಕದ ಅರ್ಚನಾ ಕಾಮತ್‌ ಏಷ್ಯನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಿ ಸತ್ಯನ್‌, ಶರತ್‌ ಕಮಲ್‌ ಹಾಗೂ ಮಣಿಕಾ ಬಾತ್ರಾ ತಂಡದ ಸವಾಲು ಮುನ್ನಡೆಸಲಿದ್ದಾರೆ. ಇದೇ ಭಾನುವಾರದಿಂದ ಇಂಡೊನೇಷ್ಯಾದ ಯೋಗ್ಯಕಾರ್ತಾದಲ್ಲಿ ಚಾಂಪಿಯನ್‌ಷಿಪ್‌ ನಡೆಯಲಿದೆ.

ಈ ಟೂರ್ನಿಯ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬಹುದಾಗಿದೆ. ಭಾರತದ 10 ಮಂದಿಯ ತಂಡದಲ್ಲಿ ಐವರು ಪುರುಷ ಹಾಗೂ ಐವರು ಮಹಿಳಾ ಆಟಗಾರ್ತಿಯರಿದ್ದಾರೆ. ಶನಿವಾರ ಈ ಆಟಗಾರರು ಯೋಗ್ಯಕಾರ್ತಾ ನಗರ ತಲುಪಿದರು.

ಭಾರತದ ಅನುಭವಿ ಆಟಗಾರ ಶರತ್‌, ಅಗ್ರ ರ‍್ಯಾಂಕಿನ ಸತ್ಯನ್‌ ಅವರು ಜಪಾನ್‌, ಕೊರಿಯಾ, ತೈಪೆ ಹಾಗೂ ಸಿಂಗಪುರದಂತಹ ಪ್ರಮುಖ ತಂಡಗಳ ಆಟಗಾರರ ಎದುರು ಸಾಮರ್ಥ್ಯ ಪರೀಕ್ಷೆಗೆ ಸಜ್ಜಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಮಣಿಕಾ ನಿರೀಕ್ಷೆ ಮೂಡಿಸಿದ್ದಾರೆ. ಭಾರತ ಟೇಬಲ್‌ ಟೆನಿಸ್‌ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಪಿ.ಸಿಂಗ್‌ ಹಾಗೂ ಖಜಾಂಚಿ ಅರುಣ್‌ ಕುಮಾರ್‌ ಬ್ಯಾನರ್ಜಿ ಕೂಡ ಇಂಡೊನೇಷ್ಯಾಕ್ಕೆ ತೆರಳಿದ್ದಾರೆ. ಇವರಿಬ್ಬರು ಏಷ್ಯನ್‌ ಟೇಬಲ್‌ ಟೆನಿಸ್‌ ಯೂನಿಯನ್‌ (ಎಟಿಟಿಯು) ಅಧಿವೇಶನದಲ್ಲಿ ಪಾಲ್ಗೊಳ್ಳುವರು.

ತಂಡ ಇಂತಿದೆ: ಪುರುಷರು: ಮಾನವ್‌ ಟಕ್ಕರ್‌, ಅಂಥೋನಿ ಅಮಲ್‌ರಾಜ್‌, ಜಿ.ಸತ್ಯನ್‌, ಹರ್ಮೀತ್‌ ದೇಸಾಯಿ ಮತ್ತು ಎ.ಶರತ್‌ ಕಮಲ್‌. 

ಮಹಿಳೆಯರು: ಸುತೀರ್ಥ ಮುಖರ್ಜಿ, ಮಧುರಿಕಾ ಪಾಟ್ಕರ್‌, ಐಹಿಕಾ ಮುಖರ್ಜಿ, ಮಣಿಕಾ ಬಾತ್ರಾ, ಅರ್ಚನಾ ಕಾಮತ್‌.

ಪ್ರತಿಕ್ರಿಯಿಸಿ (+)