ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 | ಬಿಲ್ಲು–ಬಾಣದ ಕಾರ್ಖಾನೆ ಈಗ ಪಿಪಿಇ ತಯಾರಿಕಾ ಘಟಕ

Last Updated 28 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕೋಲ್ಕತ್ತ: ಇಷ್ಟು ದಿನ ಆ ಕಾರ್ಖಾನೆಯಲ್ಲಿ ಸಾವಿರಾರು ಬಿಲ್ಲು ಬಾಣಗಳು ತಯಾರಾಗುತ್ತಿದ್ದವು. ಆದರೆ ಈಗ ಅಲ್ಲಿ ಕೋವಿಡ್‌–19 ಸೇನಾನಿಗಳಿಗಾಗಿ ವೈಯಕ್ತಿಕ ಸುರಕ್ಷತಾ ಸಾಧನಗಳ (ಪಿಪಿಇ) ಕಿಟ್‌ಗಳು ಸಿದ್ಧಗೊಳ್ಳುತ್ತಿವೆ.

ಭಾರತ ಆರ್ಚರಿ ಸಂಸ್ಥೆಯ (ಎಎಐ) ಮಹಾ ಕಾರ್ಯದರ್ಶಿ ಪ್ರಮೋದ್‌ ಚಂದುರ್ಕರ್‌ ಅವರು ರುತ್‌ ಇಂಡಿಯಾ ಕಂಪನಿಯ ಒಡೆತನ ಹೊಂದಿದ್ದಾರೆ. ಈ ಕಂಪನಿಯು ಬಿಲ್ಲು, ಬಾಣ ಹಾಗೂ ಇತರ ಕ್ರೀಡಾ ಪರಿಕರಗಳನ್ನು ತಯಾರಿಸುತ್ತದೆ.

ಅವರ ಕಂಪನಿಯಲ್ಲಿ ಕಾರ್ಯನಿರ್ವಹಿಸುವ 30 ಮಂದಿ ಉದ್ಯೋಗಿಗಳು ಈಗ ಮುಖಗವಸು, ಕೈಗವಸು ಹಾಗೂ ಗೌನ್‌ಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.

‘ನಮ್ಮ ಕಾರ್ಖಾನೆಯಲ್ಲಿ ಈಗಾಗಲೇ 1000 ಪಿಪಿಇ ಗೌನ್‌ಗಳನ್ನು ತಯಾರಿಸಿ ನನ್ನ ಗೆಳೆಯನ ಕಂಪನಿಗೆ ರವಾನಿಸಿದ್ದೇನೆ. ಅವುಗಳನ್ನು ಆತ ಅಗತ್ಯವಿದ್ದವರಿಗೆ ವಿತರಿಸಲಿದ್ದಾನೆ’ ಎಂದು 56 ವರ್ಷ ವಯಸ್ಸಿನ ಪ್ರಮೋದ್‌, ಮಂಗಳವಾರ ತಿಳಿಸಿದ್ದಾರೆ.

‘ಲಾಕ್‌ಡೌನ್‌ ಜಾರಿಯಾದ ಬಳಿಕ ಹಲವರು ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ. ವೈದ್ಯಕೀಯ ಕಿಟ್‌ಗಳನ್ನು ತಯಾರಿಸುವುದು ಹೇಗೆ ಎಂಬುದರ ಬಗ್ಗೆ ನನ್ನ ಸ್ನೇಹಿತ ಅಗತ್ಯ ಮಾರ್ಗದರ್ಶನ ನೀಡುತ್ತಾನೆ. ಜೊತೆಗೆ ಕಚ್ಚಾವಸ್ತುಗಳನ್ನೂ ಪೂರೈಸುತ್ತಾನೆ. ಅವುಗಳನ್ನು ಬಳಸಿ ನಾವು ಪಿಪಿಐ ಕಿಟ್‌ ಸಿದ್ಧಪಡಿಸುತ್ತಿದ್ದೇವೆ’ ಎಂದಿದ್ದಾರೆ.

ಹಿರಿಯ ಆರ್ಚರಿಪಟು ಆಗಿರುವ ಪ್ರಮೋದ್‌ ಅವರು 1976ರ ರಾಷ್ಟ್ರೀಯ ಕ್ರೀಡಾಕೂಟ ಹಾಗೂ 1982ರ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರು. 1989ರ ಏಷ್ಯಾಕಪ್‌ನಲ್ಲಿ ಭಾರತ ಚಿನ್ನದ ಪದಕದ ಸಾಧನೆ ಮಾಡಿತ್ತು. ಆಗ ಅವರು ತಂಡದ ಕೋಚ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT