ಬುಧವಾರ, ಡಿಸೆಂಬರ್ 11, 2019
27 °C

ನ್ಯೂಜಿಲೆಂಡ್‌–ಅರ್ಜೆಂಟೀನಾಗೆ ಜಯದ ಭರವಸೆ

Published:
Updated:
Deccan Herald

ಭುವನೇಶ್ವರ: ಮೊದಲ ಪಂದ್ಯಗಳಲ್ಲಿ ಪ್ರಯಾಸದ ಜಯ ಸಾಧಿಸಿದ ನ್ಯೂಜಿಲೆಂಡ್ ಮತ್ತು ಅರ್ಜೆಂಟೀನಾ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಗೆಲುವಿನ ನಿರೀಕ್ಷೆಯೊಂದಿಗೆ ಸೋಮವಾರ ಕಣಕ್ಕೆ ಇಳಿಯಲಿವೆ.

ಮಂಗಳವಾರದ ಮೊದಲ ಪಂದ್ಯದಲ್ಲಿ ಸ್ಪೇನ್‌ ತಂಡ ಫ್ರಾನ್ಸ್‌ ವಿರುದ್ಧ ಮತ್ತು ನಂತರದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಅರ್ಜೆಂಟೀನಾವನ್ನು ಎದುರಿಸಲಿದೆ. ಟೂರ್ನಿಯ ಎರಡನೇ ದಿನ ನಡೆದ್ದಿ ಪಂದ್ಯದಲ್ಲಿ  ಅರ್ಜೆಂಟೀನಾ 4–3ರಿಂದ ಸ್ಪೇನ್‌ ವಿರುದ್ಧ ಗೆದ್ದಿತ್ತು. ನ್ಯೂಜಿಲೆಂಡ್‌, ಫ್ರಾನ್ಸ್‌ ವಿರುದ್ಧ 2–1ರಿಂದ ಜಯಿಸಿತ್ತು.

ಮಜಿಲಿ ಆಗಸ್ಟಿನ್ ಮತ್ತು ಪಿಲೆಟ್ ಗೊನ್ಜಾಲೊ ತಲಾ ಎರಡು ಗೋಲುಗಳನ್ನು ಗಳಿಸಿ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾದ ಗೆಲುವಿನ ರೂವಾರಿ ಎನಿಸಿದ್ದರು. ಎದುರಾಳಿಗಳ ಆಕ್ರಮಣವನ್ನು ತಡೆಯಲು ವಿಫಲವಾದ ರಕ್ಷಣಾ ವಿಭಾಗದವರು ಮೂರು ಗೋಲುಗಳನ್ನು ಬಿಟ್ಟುಕೊಟ್ಟು ನಿರಾಸೆಗೆ ಒಳಗಾಗಿದ್ದರು. ಈ ಲೋಪವನ್ನು ಸರಿಪಡಿಸುವುದು ಸೋಮವಾರದ ಪಂದ್ಯದಲ್ಲಿ ಅರ್ಜೆಂಟೀನಾದ ಪ್ರಮುಖ ಆದ್ಯತೆ ಆಗಲಿದೆ.

ಫ್ರಾನ್ಸ್‌ಗೆ ವಿರುದ್ಧ ಪಂದ್ಯದ ಉದ್ದಕ್ಕೂ ಆಧಿಪತ್ಯ ಸ್ಥಾಪಿಸಿದ್ದ ನ್ಯೂಜಿಲೆಂಡ್‌ ಕೊನೆಯ ಕ್ಷಣದಲ್ಲಿ ‍ಗೋಲು ಬಿಟ್ಟುಕೊಟ್ಟಿತ್ತು. ಕೇನ್ ರಸೆಲ್ ಮತ್ತು ಸ್ಟೀಫನ್‌ ಜೆನಿಸ್ ಗಳಿಸಿದ್ದ ಗೋಲುಗಳ ಮೂಲಕ ನ್ಯೂಜಿಲೆಂಡ್ ಜಯ ಗಳಿಸಿತ್ತು. ಅರ್ಜೆಂಟೀನಾ ಎದುರಿನ ಪಂದ್ಯದಲ್ಲಿ ತಪ್ಪುಗಳು ಮರುಕಳಿಸಿದರೆ ನ್ಯೂಜಿಲೆಂಡ್‌ ನಿರಾಸೆಗೆ ಒಳಗಾಗಲಿದೆ.

ಸ್ಪೇನ್‌ಗೆ ಫ್ರಾನ್ಸ್ ಸವಾಲು: ಬಲಿಷ್ಠ ತಂಡಕ್ಕೆ ಪ್ರಬಲ ಪೈಪೋಟಿ ನೀಡಲು ಸಾಧ್ಯವಾದ ಕಾರಣ ಸ್ಪೇನ್‌ ಸೋಮವಾರ ಭರವಸೆಯಿಂದ ಕಣಕ್ಕೆ ಇಳಿಯಲಿದೆ. ನ್ಯೂಜಿಲೆಂಡ್ ಎದುರು ನಿರೀಕ್ಷಿತ ಸಾಮರ್ಥ್ಯ ತೋರಲು ಆಗದ ಫ್ರಾನ್ಸ್‌ಗೆ ಸ್ಪೇನ್ ವಿರುದ್ಧದ ಪಂದ್ಯ ಸತ್ವ ಪರೀಕ್ಷೆಯಾಗಲಿದೆ. ಮೊದಲ ಪಂದ್ಯಗಳಲ್ಲಿ ಸೋತ ತಂಡಗಳ ಮುಖಾಮುಖಿ ಕುತೂಹಲಕ್ಕೆ ಕಾರಣವಾಗಿದೆ.  

ಇಂದಿನ ಪಂದ್ಯಗಳು

ಸ್ಪೇನ್‌ – ಫ್ರಾನ್ಸ್‌

ಆರಂಭ: ಸಂಜೆ 5.00

ನ್ಯೂಜಿಲೆಂಡ್‌ – ಅರ್ಜೆಂಟೀನಾ

ಆರಂಭ: ಸಂಜೆ 7.00

ಸ್ಥಳ: ಕಳಿಂಗ ಕ್ರೀಡಾಂಗಣ, ಭುವನೇಶ್ವರ

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌/ದೂರದರ್ಶನ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು