ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯಮ ಕಲಿತ ಅರ್ಜುನ

Last Updated 23 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

‘ಜೂನಿಯರ್ ಮಟ್ಟದಲ್ಲಿ ನಾನು ಹೇಗೆ ಬೇಕೋ ಹಾಗೆ ಪಟ್ಟುಗಳನ್ನು ಹಾಕುತ್ತಿದ್ದೆ. ಸೀನಿಯರ್‌ ಲೆವೆಲ್‌ ಹಾಗೆ ಅಲ್ಲ ಅಂತ ಈಗಷ್ಟೇ ಗೊತ್ತಾಯಿತು’–ಶಿವರಾತ್ರಿ ಹಬ್ಬದ ಆಚರಣೆಗೆಂದು ರಜೆ ಮೇಲೆ ಬಂದಿರುವ ಕುಸ್ತಿ ಪಟು ಅರ್ಜುನ್ ಹಲಕುರ್ಕಿ ಹೀಗೆ ಹೇಳುವಾಗ ನುರಿತ ಕ್ರೀಡಾಪಟುವಿನ ಗುಣಲಕ್ಷಣ ಎದ್ದುಕಂಡಿತು.

ನವದೆಹಲಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕವನ್ನು ಕೊರಳಿಗೆ ಹಾಕಿಸಿಕೊಂಡು ತವರು ಬಾಗಲಕೋಟೆ ತಾಲ್ಲೂಕಿನ ಬೇವಿನಮಟ್ಟಿಗೆ ಮರಳಿರುವ ಅರ್ಜುನ್‌ ಮನಸ್ಸಿನಲ್ಲಿ ಈಗಲೂ ಒಲಿಂಪಿಕ್ಸ್‌ ಹಂತಕ್ಕೆ ಏರುವ ಕನಸು ಜತನವಾಗಿದೆ. ಇಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕು ಎನ್ನುವುದು ಅವರ ಗುರಿ.

ಏಷ್ಯನ್‌ ಕುಸ್ತಿಯ ಪುರುಷರ ಗ್ರಿಕೊ ರೋಮನ್ ವಿಭಾಗದ 55 ಕೆ.ಜಿ. ಸ್ಪರ್ಧೆಯಲ್ಲಿ ಅರ್ಜುನ್‌ ಸೀನಿಯರ್ ವಿಭಾಗದಲ್ಲಿ ಮೊದಲ ಪದಕವನ್ನೇನೋ ಜಯಿಸಿದರು. ಇದು ಅವರಿಗೆ ಅಷ್ಟೇನೂ ಸಮಾಧಾನ ತಂದಿಲ್ಲ. ಅವರೊಳಗಿನ ಹಸಿವಿಗೆ ಇದು ಕನ್ನಡಿ ಹಿಡಿಯುತ್ತದೆ.

ಕಂಚಿನ ಪದಕದ ‘ಪ್ಲೇ ಆಫ್‌’ನಲ್ಲಿ 7–4 ಪಾಯಿಂಟ್ಸ್‌ನಿಂದ ದಕ್ಷಿಣ ಕೊರಿಯಾದ ಡಾಂಗ್‌ಯೆವೊಕ್‌ ಅವರನ್ನು ಸೋಲಿಸಿ, ಕ್ವಾರ್ಟರ್‌ ಫೈನಲ್‌ನಲ್ಲಿ 10–2 ಪಾಯಿಂಟ್ಸ್‌ನಿಂದ ತೌರ್ಕಿ ಅಲಿ ವಿರುದ್ಧ ಜಯಿಸಿದ್ದ ಈ ಪೈಲ್ವಾನ, ಸೆಮಿಫೈನಲ್‌ನಲ್ಲಿ ಸಹಜವಾಗಿಯೇ ದಾಳಿಕೋರ ತಂತ್ರವನ್ನು ತಮ್ಮದಾಗಿಸಿಕೊಂಡಿದ್ದರು. ಕೊನೆಯ ಒಂದು ನಿಮಿಷದಲ್ಲಿ ಏಳು ಪಾಯಿಂಟ್‌ಗಳನ್ನು ಒಗ್ಗೂಡಿಸಿದ ಇರಾನ್‌ನ ಪೌಯಾ ಮೊಹಮ್ಮದ್‌ ನಾಸರ್‌ಪೌರ್‌ 8–7 ಪಾಯಿಂಟ್ಸ್‌ನಿಂದ ಗೆಲುವನ್ನು ಕಸಿದುಕೊಂಡಿದ್ದರು.

ದಾವಣಗೆರೆ ಕ್ರೀಡಾ ನಿಲಯದ ತರಬೇತಿ ಕೇಂದ್ರದಲ್ಲಿ ಕುಸ್ತಿ ಪಟ್ಟುಗಳನ್ನು ಅರ್ಜುನ್‌ ಕಲಿಯಲು ಆರಂಭಿಸಿ ಎಂಟು ವರ್ಷಗಳೇ ಉರುಳಿವೆ. ಈಗ ಭೋಪಾಲ್‌ನಲ್ಲಿ ಸೇನೆಯಲ್ಲಿ ಹವಾಲ್ದಾರ್‌ ಆಗಿ ಉದ್ಯೋಗದಲ್ಲಿದ್ದಾರೆ.

‘ಬೆಳಿಗ್ಗೆ, ಸಂಜೆ ಸೇರಿ ದಿನಕ್ಕೆ ಆರೇಳು ತಾಸಿನಷ್ಟು ವ್ಯಾಯಾಮ, ಅಭ್ಯಾಸ ನಡೆಸುತ್ತೇನೆ. ಬಿಡುವು ಆದಾಗಲೆಲ್ಲ ಸೀದಾ ದಾವಣಗೆರೆಯ ಹಾಸ್ಟೆಲ್‌ಗೆ ಹೋಗುತ್ತೇನೆ. ಅಲ್ಲಿ ಶಿವಾನಂದ ಸರ್ ನನ್ನ ಗುರು. ಅವರಿಂದ ಸಾಕಷ್ಟು ಕಲಿತಿದ್ದೇನೆ. ತಿದ್ದಿಕೊಳ್ಳುವುದು ಇದ್ದೇ ಇರುತ್ತದೆ. ಜೂನಿಯರ್‌ ಹಂತದಲ್ಲೇ ನಾಲ್ಕು ಸಲ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದೆ. ಇನ್ನು ಒಲಿಂಪಿಕ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ನನ್ನ ಕನಸು. ಅದಕ್ಕಾಗಿ ನನ್ನೆಲ್ಲ ಪ್ರಯತ್ನಗಳನ್ನೂ ಮಾಡುವೆ’ ಎನ್ನುತ್ತಾರೆ ಅರ್ಜುನ್.

‘ಏಷ್ಯನ್ ಕುಸ್ತಿಯಲ್ಲಿ ಪದಕ ಗೆಲ್ಲುವುದಕ್ಕೆ ಹೋಲಿಸಿದರೆ ವಿಶ್ವ ಮಟ್ಟದಲ್ಲಿ ಜಯ ಕಷ್ಟ. ಪೌಯಾ ಮೊಹಮ್ಮದ್‌ ನಾಸರ್‌ಪೌರ್‌ ತುಂಬಾ ಕೂಲ್‌ ಆಗಿ ಇದ್ದರು. ನಾನು ಹತ್ತಕ್ಕೆ ಹತ್ತೂ ಪಾಯಿಂಟ್‌ಗಳನ್ನು ಗೆಲ್ಲಲೇಬೇಕು ಎಂದು ಜೂನಿಯರ್‌ ಮಟ್ಟದಲ್ಲಿ ಪಟ್ಟುಗಳನ್ನು ಹಾಕುವಂತೆಯೇ ಇಲ್ಲೂ ಮುನ್ನುಗ್ಗಿದೆ. ತುಸು ಹಿಂದೆ ನಿಂತು, ಅವಕಾಶಕ್ಕಾಗಿ ಕಾಯಬೇಕಿತ್ತು. ವಿಶ್ವಮಟ್ಟದ ಬಹುತೇಕ ಸ್ಪರ್ಧಿಗಳು ಒಂದು, ಎರಡು ಪಾಯಿಂಟ್ ಅಂತರದಿಂದ ಜಯ ಗಳಿಸುತ್ತಾರಷ್ಟೆ. ಅವರ ಸಂಯಮವೇ ನನಗೀಗ ಪಾಠ’ ಎನ್ನುತ್ತಾರೆ ಅರ್ಜುನ್‌. ಅವರು ಗೆಲ್ಲುತ್ತಿರುವ ಪದಕಗಳ ಸಂಖ್ಯೆ ಈಗ ಏರುತ್ತಿದೆ.

2016ರಲ್ಲಿ ಸ್ಕೂಲ್‌ ಗೇಮ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅವರು 2016 ಹಾಗೂ 2017ರ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿಯೂ ಸ್ಪರ್ಧಿಸಿದ್ದರು. ಅರ್ಜುನ್ ಹಲಕುರ್ಕಿ ಅವರ ಯಶಸ್ಸಲ್ಲದೆ ರಫೀಕ್‌ ಹೊಳಿ, ಕಾರ್ತಿಕ್‌ ಕಾಟೆ ಅವರ ಸಾಧನೆಗಳಿಂದಾಗಿ ದಾವಣಗೆರೆಯ ಕ್ರೀಡಾ ನಿಲಯಕ್ಕೆ ದಿನೇದಿನೇ ಮನ್ನಣೆ ಹೆಚ್ಚಾಗುತ್ತಿದೆ. ಈ ಕುರಿತು ಹಾಗೂ ತಮ್ಮ ಶಿಷ್ಯರ ಸಾಧನೆಯ ಬಗೆಗೆ ತರಬೇತುದಾರ ಶಿವಾನಂದ ಆರ್. ಅವರಿಗೆ ಇನ್ನಿಲ್ಲದ ಹೆಮ್ಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT