ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಡ್‌ನಲ್ಲಿ ಲ್ಯಾಪ್‌ಟಾಪ್‌, ಗುರುತಿನ ಚೀಟಿಗಳ ಕಟ್ಟು ಪತ್ತೆ

Last Updated 10 ಮೇ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಜಾಲಹಳ್ಳಿಯ ‘ಎಸ್‌ಎಲ್‌ವಿ ಪಾರ್ಕ್‌ ವ್ಯೂ’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಭದ್ರತಾ ಸಿಬ್ಬಂದಿ ವಾಸವಿದ್ದ ಶೆಡ್‌ನಲ್ಲಿ ನಾಲ್ಕು ಲ್ಯಾಪ್‌ಟಾಪ್‌ಗಳು ಹಾಗೂ ಚುನಾವಣಾ ಗುರುತಿನ ಚೀಟಿ ಕಟ್ಟುಗಳು ಪತ್ತೆಯಾಗಿವೆ.

ಚುನಾವಣಾ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಪ್ರಕರಣ ಸಂಬಂಧ ಶಾಸಕ ಮುನಿರತ್ನ ಸೇರಿದಂತೆ 14 ಮಂದಿ ವಿರುದ್ಧ ಜಾಲಹಳ್ಳಿ ಠಾಣೆಗೆ ದೂರು ನೀಡಿರುವ ಅಧಿಕಾರಿ ಜೆ.ಆರ್.ಭಾಸ್ಕರ್, ಜಪ್ತಿ ಮಾಡಿದ ವಸ್ತುಗಳ ಬಗ್ಗೆ ತಿಳಿಸಿದ್ದಾರೆ.

‘ಅಪಾರ್ಟ್‌ಮೆಂಟ್‌ ಸಮುಚ್ಚಯದ ಮೇಲೆ ಮಂಗಳವಾರ ಮಧ್ಯಾಹ್ನ ದಾಳಿ ಮಾಡಿದ್ದೆವು. ಅದರಿಂದ ಹೆದರಿದ್ದ ಆರೋಪಿಗಳು, ಯಾರಿಗೂ ಅನುಮಾನ ಬರಬಾರದೆಂದು ಲ್ಯಾಪ್‌ಟಾಪ್‌ ಹಾಗೂ ಚೀಟಿಯ ಕಟ್ಟುಗಳನ್ನು ಭದ್ರತಾ ಸಿಬ್ಬಂದಿಯ ಶೆಡ್‌ನಲ್ಲಿ ಬಚ್ಚಿಟ್ಟಿದ್ದರು. ಶೆಡ್‌ನಲ್ಲಿ ಹುಡುಕಾಟ ನಡೆಸಿ ಅವೆಲ್ಲವನ್ನೂ ಜಪ್ತಿ ಮಾಡಿದ್ದೇವೆ’ ಎಂದು ಹೇಳಿದ್ದಾರೆ.

’ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ ನಂ. 115ರಲ್ಲಿ 9,564 ಮತದಾರರ ಗುರುತಿನ ಚೀಟಿಗಳು, ಆಯೋಗದ ಅಧಿಕಾರಿಗಳ ಸಹಿ ಇಲ್ಲದ 6,342 ಮತದಾರರ ಹೆಸರು ಸೇರ್ಪಡೆ ಅರ್ಜಿಯ ಸ್ವೀಕೃತಿ ಪತ್ರಗಳು ಹಾಗೂ 20,700 ಮತದಾರರ ಚೀಟಿಗಳು ಪತ್ತೆಯಾಗಿವೆ. ಅದೇ ಫ್ಲ್ಯಾಟ್‌ನಲ್ಲಿ 5 ಲ್ಯಾಪ್‌ಟಾಪ್‌ಗಳು, 3 ಜೆರಾಕ್ಸ್‌ ಯಂತ್ರಗಳು ಹಾಗೂ 10 ಮೊಬೈಲ್‌ಗಳೂ ಸಿಕ್ಕಿವೆ’ ಎಂದಿದ್ದಾರೆ.

‘ಮಂಜುಳಾ ನಂಜಾಮರಿ ಎಂಬುವರು ಈ ಫ್ಲ್ಯಾಟ್‌ ಮಾಲೀಕರು. ತಿಂಗಳ ಹಿಂದಷ್ಟೇ ರೇಖಾ ಎಂಬುವರಿಗೆ ಬಾಡಿಗೆ ಕೊಟ್ಟಿದ್ದಾರೆ. ರೇಖಾ ಅವರೇ ಇತರೆ ಆರೋಪಿಗಳ ಜತೆ ಸೇರಿ ಸಂಚು ರೂಪಿಸಿ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು’ ಎಂದು ತಿಳಿಸಿದ್ದಾರೆ.

ಶಾಸಕರ ವಿಚಾರಣೆ ನಡೆಸದ ಪೊಲೀಸರು: ಪ್ರಕರಣದ 13 ಆರೋಪಿಗಳನ್ನು ವಿಚಾರಣೆ ನಡೆಸಿರುವ ಪೊಲೀಸರು, ಶಾಸಕ ಮುನಿರತ್ನ ಅವರ ಹೇಳಿಕೆ ಪಡೆದಿಲ್ಲ.

‘ಈಗ ಚುನಾವಣೆ ಇದೆ. ಭದ್ರತೆಗೆ ಒತ್ತು ನೀಡಿದ್ದೇವೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಶಾಸಕರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಕರೆಯಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT