ಶುಕ್ರವಾರ, ಡಿಸೆಂಬರ್ 6, 2019
17 °C

ಸೋಲರಿಯದ ಸರದಾರ ‘ವಿಜೇಂದರ್‌ ಸಿಂಗ್‌’

Published:
Updated:

ಒಲಿಂಪಿಕ್ಸ್‌ ಕ್ರೀಡಾಕೂಟ ಶುರುವಾಗಿ ಶತಮಾನವೇ ಕಳೆದಿತ್ತು. ಹೀಗಿದ್ದರೂ ಈ ಮಹಾಕೂಟದಲ್ಲಿ ಭಾರತದ ಬಾಕ್ಸರ್‌ಗಳಿಗೆ ಪದಕ ಕೈಗೆಟುಕದಾಗಿತ್ತು. 112 ವರ್ಷಗಳಿಂದ ಕಾಡುತ್ತಿದ್ದ ಈ ಕೊರಗನ್ನು ದೂರ ಮಾಡಿದ್ದು ವಿಜೇಂದರ್‌ ಸಿಂಗ್‌.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ವಿಜೇಂದರ್, ಕಂಚಿನ ಪದಕಕ್ಕೆ ಕೊರಳೊಡ್ಡಿ ಚೀನಾ ನೆಲದಲ್ಲಿ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಿದ್ದರು. ಅದಾಗಿ ಎರಡು ವರ್ಷಕ್ಕೆ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಹೊಳಪು ಮೂಡಿಸಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಪದಕಗಳ ಬೇಟೆಯಾಡಿ ದೇಶದ ಹಿರಿಮೆ ಹೆಚ್ಚಿಸಿರುವ ಹರಿಯಾಣದ ಈ ಬಾಕ್ಸರ್‌, ವೃತ್ತಿಪರ ಬಾಕ್ಸಿಂಗ್‌ನಲ್ಲೂ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ.

ಯಶಸ್ಸಿನ ಉತ್ತುಂಗದಲ್ಲಿದ್ದ ಹೊತ್ತಿನಲ್ಲೇ ಅಮೆಚೂರ್‌ ಬಾಕ್ಸಿಂಗ್‌ಗೆ ಪೂರ್ಣ ವಿರಾಮ ಇಟ್ಟ ವಿಜೇಂದರ್‌, ರಿಯೊ ಒಲಿಂಪಿಕ್ಸ್‌ಗೆ (2016) ಕೆಲವೇ ತಿಂಗಳುಗಳು ಬಾಕಿ ಇದ್ದಾಗ ಪ್ರೊ ಬಾಕ್ಸಿಂಗ್‌ನತ್ತ ಹೊರಳಿದ್ದರು. ಅವರ ಈ ನಡೆಯ ಬಗ್ಗೆ ಆಗ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅದ್ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳದ ಅವರು, ಕಠಿಣ ಅಭ್ಯಾಸದತ್ತ ಮಾತ್ರ ಚಿತ್ತ ಹರಿಸಿ ಪ್ರೊ ಬಾಕ್ಸಿಂಗ್‌ ಪಯಣದಲ್ಲಿ ಸೋಲರಿಯದ ಸರದಾರನಂತೆ ಮುನ್ನುಗ್ಗುತ್ತಿದ್ದಾರೆ.

ಬ್ರಿಟನ್‌, ಐರ್ಲೆಂಡ್‌, ಭಾರತ, ಅಮೆರಿಕ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಹೀಗೆ ಹೋದಲೆಲ್ಲಾ ಗೆಲುವಿನ ಗೋಪುರ ಕಟ್ಟುತ್ತಾ ಬಾಕ್ಸಿಂಗ್‌ ಪ್ರಿಯರ ಮನ ಗೆಲ್ಲುತ್ತಿದ್ದಾರೆ. ವಿಶ್ವದ ‘ಡೆಡ್ಲಿ ಫೈಟರ್‌’ಗಳೆಂದೇ ಗುರುತಿಸಿಕೊಂಡಿದ್ದ ಅದೆಷ್ಟೊ ಮಂದಿ ಬಾಕ್ಸರ್‌ಗಳ ಪಾಲಿಗೆ ಸಿಂಹಸ್ವಪ್ನವೂ ಆಗಿಬಿಟ್ಟಿದ್ದಾರೆ.

ಕಡಿಮೆಯಾಗದ ಕಸುವು
ಮೂರು ಒಲಿಂಪಿಕ್ಸ್‌ನಲ್ಲಿ (2004, 2008 ಮತ್ತು 2012) ಭಾರತವನ್ನು ಪ್ರತಿನಿಧಿಸಿರುವ ವಿಜೇಂದರ್‌ಗೆ ಈಗ 34 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರಲ್ಲಿನ ಬಾಕ್ಸಿಂಗ್‌ ಕಸುವು ಕಿಂಚಿತ್ತೂ ಕಡಿಮೆಯಾಗಿಲ್ಲ. ಹೋದ ತಿಂಗಳು ನಡೆದಿದ್ದ ಪ್ರೊ ಬಾಕ್ಸಿಂಗ್ ಪಂದ್ಯದಲ್ಲಿ ಘಾನಾದ ಚಾರ್ಲಸ್‌ ಅಡಮು ಅವರನ್ನು ಮಣಿಸಿದ್ದು ಇದಕ್ಕೊಂದು ನಿದರ್ಶನ.

ಕಾಮನ್‌ವೆಲ್ತ್ ಚಾಂಪಿಯನ್‌ ಆಗಿದ್ದ ಅಡಮು, ವೃತ್ತಿಪರ ಬಾಕ್ಸಿಂಗ್‌ನಲ್ಲಿ 47 ಪಂದ್ಯಗಳನ್ನು ಆಡಿದ್ದರು. ಈ ಪೈಕಿ 33ರಲ್ಲಿ ಗೆದ್ದಿದ್ದರು. ಅವರ ವಿರುದ್ಧ ವಿಜೇಂದರ್‌ ಪೂರ್ಣ ಆಧಿಪತ್ಯ ಸಾಧಿಸಿದ್ದರು. ಪಂದ್ಯದ ನಂತರ ಅಡಮು ಅವರೇ ಭಾರತದ ಬಾಕ್ಸರ್‌ನ ಆಟವನ್ನು ಕೊಂಡಾಡಿದ್ದರು.

30ರ ಹರೆಯದಲ್ಲಿ ಪ್ರೊ ಬಾಕ್ಸಿಂಗ್‌ಗೆ ಅಡಿ ಇಟ್ಟಿದ್ದ ವಿಜೇಂದರ್‌, ಈ ಪ್ರಕಾರದಲ್ಲಿ ಗಟ್ಟಿಯಾಗಿ ನೆಲೆಯೂರಲು ಬೇಕಿದ್ದ ಎಲ್ಲಾ ಕೌಶಲಗಳನ್ನೂ ಕೆಲವೇ ತಿಂಗಳುಗಳಲ್ಲಿ ಕಲಿತು ಮೈಗೂಡಿಸಿಕೊಂಡಿದ್ದರು.

ಐಒಎಸ್‌ ಸ್ಪೋರ್ಟ್ಸ್‌ ಆ್ಯಂಡ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯ ಮೂಲಕ ಫ್ರಾಂಕ್‌ ವಾರೆನ್‌ ಮಾಲೀಕತ್ವದ ಕ್ವೀನ್ಸ್‌ಬೆರ‍್ರಿ ಪ್ರೊಮೋಷನ್ಸ್‌ ಜೊತೆ ಒಪ್ಪಂದ ಮಾಡಿಕೊಂಡ ಅವರು, ಬ್ರಿಟನ್‌ನ ಸೋನ್ನಿ ವಿಟಿಂಗ್‌ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಮೋಡಿ ಮಾಡಿದ್ದರು. ನಾಲ್ಕು ಸುತ್ತುಗಳ ಈ ಹಣಾಹಣಿಯನ್ನು ಎರಡೇ ನಿಮಿಷಗಳಲ್ಲಿ ಗೆದ್ದು ಬೀಗಿದ್ದರು. ನಂತರ ಅವರು ಮುಟ್ಟಿದ್ದೆಲ್ಲವೂ ಚಿನ್ನವಾಯಿತು.

ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್‌ ಮತ್ತು ಓರಿಯೆಂಟಲ್‌ ಸೂಪರ್‌ ಮಿಡಲ್‌ವೇಟ್‌ ಕಿರೀಟಗಳೂ ಮುಡಿಗೇರಿದವು. 2018ರ ನವೆಂಬರ್‌ 20ರಂದು ಅಮೆರಿಕದ ಟಾಪ್ ರ‍್ಯಾಂಕ್‌ ಪ್ರೊಮೋಷನ್ಸ್‌ ಜೊತೆ ಕೈಜೋಡಿಸಿದ ವಿಜೇಂದರ್‌ 2019ರ ಋತುವಿನಲ್ಲಿ ಆಡಿದ ಎರಡು ಪಂದ್ಯಗಳನ್ನೂ ಗೆದ್ದು ಸೈ ಎನಿಸಿಕೊಂಡರು. ಈಗ ಅವರ ಕಣ್ಣು ವಿಶ್ವ ಕಿರೀಟದತ್ತ ನೆಟ್ಟಿದೆ. ಮುಂದಿನ ವರ್ಷ ವಿಶ್ವ ಪ್ರಶಸ್ತಿಯನ್ನೂ ಎತ್ತಿ ಹಿಡಿದು ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಅವರು ಸನ್ನದ್ಧರಾಗಿದ್ದಾರೆ.

ವರ್ಣರಂಜಿತ ವ್ಯಕ್ತಿತ್ವ
ವಿಜೇಂದರ್‌ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ರಾಜೀವ್‌ ಗಾಂಧಿ ಖೇಲ್‌ ರತ್ನ ಮತ್ತು ಪದ್ಮಶ್ರೀ ಗೌರವಗಳಿಗೆ ಭಾಜನರಾಗಿರುವ ಅವರು ಬಾಕ್ಸಿಂಗ್‌ ರಿಂಗ್‌ನ ಹೊರಗೂ ಅದೃಷ್ಟ ಪರೀಕ್ಷೆ ನಡೆಸಿದ್ದರು.

ಒಂದಷ್ಟು ಸಮಯ ಮಾಡೆಲಿಂಗ್‌ ಮಾಡಿದ್ದ ಅವರು 2014ರಲ್ಲಿ ತೆರೆಗೆ ಬಂದಿದ್ದ ‘ಫಗ್ಲಿ’ ಎಂಬ ಬಾಲಿವುಡ್‌ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿದ್ದ ‘ದಸ್‌ ಕಾ ದಮ್‌’, ಪ್ರಸಿದ್ಧ ಡ್ಯಾನ್ಸ್‌ ರಿಯಾಲಿಟಿ ಕಾರ್ಯಕ್ರಮ ‘ನಚ್‌ ಬಲಿಯೇ’ ಹಾಗೂ ರೋಡಿಸ್‌ ಎಕ್ಸ್‌–2 ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದರು.

ರಾಜಕೀಯಕ್ಕೂ ಧುಮುಕಿದ್ದ ವಿಜೇಂದರ್‌, 2019ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ದೆಹಲಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು