ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಕರ್ನಾಟಕದ ವಿರುದ್ಧ ಆಶಿಶ್ ಬಲ್ಲಾಳ ಕಿಡಿ

ಚುನಾವಣೆಗೆ ಸಿದ್ಧಗೊಳಿಸಿರುವ ಜಿಲ್ಲಾ ಪ್ರತಿನಿಧಿಗಳ ಯಾದಿಯಲ್ಲಿ ‘ಅನ್ಯಾಯ’; ಒಲಿಂಪಿಯನ್ ಆರೋಪ
Last Updated 25 ಆಗಸ್ಟ್ 2022, 21:11 IST
ಅಕ್ಷರ ಗಾತ್ರ

ಬೆಂಗಳೂರು:ಹಾಕಿ ಕರ್ನಾಟಕ ಸಂಸ್ಥೆಯ ಪದಾಧಿಕಾರಿಗಳ ಚುನಾವಣೆಗಾಗಿ ಸಿದ್ಧಪಡಿಸಲಾಗಿರುವ ಜಿಲ್ಲಾ ಪ್ರತಿನಿಧಿಗಳ ಯಾದಿಯು ‘ನ್ಯಾಯಸಮ್ಮತ’ವಾಗಿಲ್ಲ. ಪ್ರಸ್ತುತ ಅಧಿಕಾರದಲ್ಲಿರುವ ಸಮಿತಿಯು ಜಿಲ್ಲಾಸಂಸ್ಥೆಗಳಿಂದ ಸೂಚಿತ ಪ್ರತಿನಿಧಿಗಳನ್ನು ಕೈಬಿಟ್ಟು, ತಮಗೆ ಆಪ್ತರಾದವರ ಹೆಸರು ಸೇರಿಸಿದೆ ಎಂದು ಭಾರತ ಹಾಕಿ ತಂಡದ ಮಾಜಿ ಗೋಲ್‌ಕೀಪರ್ ಆಶಿಶ್ ಬಲ್ಲಾಳ ಆರೋಪಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೆಪ್ಟೆಂಬರ್ 8ರಂದು ಹಾಕಿ ಕರ್ನಾಟಕದ ಸರ್ವಸದಸ್ಯರ ಸಭೆ ಹಾಗೂ ಚುನಾವಣೆ ನಡೆಯಲಿದೆ. ಅದಕ್ಕಾಗಿ ಜಿಲ್ಲಾ ಸಂಸ್ಥೆಗಳಿಂದ ಒಬ್ಬ ಪುರುಷ ಹಾಗೂ ಒಬ್ಬ ಮಹಿಳಾ ಪ್ರತಿನಿಧಿಯನ್ನು ಸೂಚಿಸುವಂತೆ ಸಂಸ್ಥೆಯು ತಿಳಿಸಿತ್ತು. ಹಾಕಿ ಉಡುಪಿಯು ನನ್ನ ಹೆಸರು ಸೂಚಿಸಿತ್ತು. ಆದರೆ ಇದೀಗ ಪ್ರಕಟವಾಗಿರುವ ಪ್ರತಿನಿಧಿಗಳ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಟ್ಟು, ಬೇರೆಯವರ ಹೆಸರು ಸೇರಿಸಲಾಗಿದೆ. ಇದೇ ರೀತಿ ಬಹಳಷ್ಟು ಜಿಲ್ಲಾ ಸಂಸ್ಥೆಗಳೊಂದಿಗೆ ಆಗಿದೆ’ ಎಂದರು.

ಆಗಸ್ಟ್ 23 (ಸಂಜೆ 5.30ರೊಳಗೆ ) ಹೆಸರು ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಆ ಪ್ರಕಾರ ಉಡುಪಿ ಸಂಸ್ಥೆಯು ಇಮೇಲ್ ಹಾಗೂ ಕೊರಿಯರ್ ಮೂಲಕ ದಾಖಲೆಗಳ ಸಮೇತ ಪ್ರತಿನಿಧಿಗಳ ಪಟ್ಟಿಯನ್ನು ಸಲ್ಲಿಸಿದೆ ಎಂದೂ ಬಲ್ಲಾಳ ಹೇಳಿದರು. ಬುಧವಾರ ಪ್ರಕಟವಾಗಿರುವ ಅಂತಿಮ ಪಟ್ಟಿಯಲ್ಲಿ ಬಲ್ಲಾಳ ಬದಲಿಗೆ ಕಂಚನಪ್ರಸಾದ್ ಹೆಸರು ಸೇರ್ಪಡೆಯಾಗಿದೆ.

‘ನನ್ನ ಹೆಸರು ಕೈಬಿಟ್ಟಿರುವುದಕ್ಕೆ ಯಾವುದೇ ಸ್ಪಷ್ಟನೆಯನ್ನು ಹಾಕಿ ಕರ್ನಾಟಕ ನೀಡಿಲ್ಲ. ರಾಜ್ಯದ 7–8 ಜಿಲ್ಲಾ ಸಂಸ್ಥೆಗಳೊಂದಿಗೆ ಈ ರೀತಿ ಅನ್ಯಾಯವಾಗಿದೆ. ತಮಗೆ ಬೇಕಾದ ಹಾಗೆ ಜಿಲ್ಲಾ ಸಂಸ್ಥೆಗಳನ್ನು ರಚಿಸಿಕೊಂಡಿದ್ದಾರೆ. ಸದ್ಯ ಸಿದ್ಧವಾಗಿರುವ ಪ್ರತಿನಿಧಿಗಳ ಪಟ್ಟಿಯಲ್ಲಿರುವವರಲ್ಲಿ ಬಹುತೇಕರು ಹಾಕಿ ಆಟಗಾರರೇ ಅಲ್ಲ’ ಎಂದೂ ಬಲ್ಲಾಳ್ ಆಪಾದಿಸಿದರು.

‘ಎಲ್ಲ ಜಿಲ್ಲೆಗಳಿಗೂ ಸಮಾನ ಪ್ರಾತಿನಿಧ್ಯ ಹಾಗೂ ಚುನಾವಣೆಯಲ್ಲಿ ಪಾರದರ್ಶಕತೆ ಬರಬೇಕು. ಆದರೆ ಹಾಕಿ ಕರ್ನಾಟಕದಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಒಂದು ಜಿಲ್ಲೆಯ ಜನರೇ ತುಂಬಿಕೊಂಡಿದ್ದಾರೆ. ರಾಜ್ಯದಲ್ಲಿ ವಯೋಮಿತಿ, ಅಂತರಶಾಲಾ ಟೂರ್ನಿಗಳ ಆಯೋಜನೆಯಾಗುತ್ತಿಲ್ಲ. ಯುವ ಪ್ರತಿಭೆಗಳ ಶೋಧ ನಡೆಯುತ್ತಿಲ್ಲ. ರಾಜ್ಯದ ಹಾಕಿ ಸೊರಗಿದೆ. ರಾಷ್ಟ್ರೀಯ ತಂಡದಲ್ಲ ಒಂದು ಸಮಯದಲ್ಲಿ ಕರ್ನಾಟಕದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈಗ ಒಬ್ಬರೂ ಇಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಹಾಕಿ ಕರ್ನಾಟಕದ ಅಧ್ಯಕ್ಷರು ತಮಗಿರುವ ವಿವೇಚನಾ ಕೋಟಾ ದುರ್ಬಳಕೆ ಮಾಡಿಕೊಂಡಿದ್ದಾರೆ. ಅರು ಜನ ಪದಾಧಿಕಾರಿಗಳನ್ನು ಅಸಾಂವಿಧಾನಿಕ ರೀತಿಯಲ್ಲಿ ನೇಮಕ ಮಾಡಿದ್ದಾರೆ. ಆಡಳಿತದ ಲೋಪದಿಂದಾಗಿ ಗ್ರಾಮಾಂತರ ಮಟ್ಟದಲ್ಲಿ ಹಾಕಿ ಕ್ರೀಡೆ ಸೊರಗಿದೆ. ಪ್ರತಿಭಾವಂತರಿಗೆ ಅವಕಾಶವೇ ಇಲ್ಲದಂತಾಗಿದೆ. ಆಡಳಿತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಆಟಗಾರರು ತೊಡಗಿಕೊಳ್ಳಲಿ ಎಂಬುದು ಕ್ರೀಡಾ ನೀತಿ ಹಾಗೂ ನ್ಯಾಯಾಲಯದ ಆಶಯವಾಗಿದೆ. ಆದರೆ ಅದಕ್ಕೆ ಇಲ್ಲಿ ಆಸ್ಪದ ಕೊಡುತ್ತಿಲ್ಲ’ ಎಂದು ಬಲ್ಲಾಳ ಹೇಳಿದರು.

‘ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಹಾಕಿ ಕರ್ನಾಟಕ ಮಧ್ಯಪ್ರವೇಶಿಸಬೇಕು. ಹಾಕಿ ಕರ್ನಾಟಕದಲ್ಲಿ ಪಾರದರ್ಶಕ ಹಾಗೂ ದಕ್ಷ ಆಡಳಿತ ನೆಲೆಗೊಳ್ಳುವಂತೆ ಮಾಡಬೇಕು. ಈ ಬಗ್ಗೆ ನಾನು ಕಾನೂನು ಹೋರಾಟಕ್ಕೂ ಸಿದ್ಧನಾಗಿದ್ದೇನೆ. ಅರ್ಹರಿಗೆ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ಸಿಗಬೇಕು’ ಎಂದು ಹೇಳಿದರು.

ತಡವಾಗಿ ತಲುಪಿದ ಅರ್ಜಿ: ಸುಬ್ಬಯ್ಯ

‘ಬಲ್ಲಾಳ ಅವರ ಅರ್ಜಿಯು ನಿಗದಿಯ ಸಮಯಕ್ಕಿಂತ (ಆ.23 ಸಂಜೆ 5) ತಡವಾಗಿ ತಲುಪಿತು. ಎರಡನೇಯದಾಗಿ ಹಾಕಿ ಉಡುಪಿ ಸಂಸ್ಥೆಯು ಸಕ್ರಿಯವಾಗಿರದ ಕಾರಣ ಕೆಲವು ತಿಂಗಳುಗಳ ಹಿಂದೆ ಅನರ್ಹಗೊಂಡಿದೆ. ಅವರು ಯಾವುದೇ ಟೂರ್ನಿಗಳನ್ನೂ ಆಯೋಜಿಸಿಲ್ಲ ಮತ್ತು ಸಭೆಗಳಿಗೂ ಹಾಜರಾಗಿಲ್ಲ. ಈ ರೀತಿ ಇರುವ ಕೆಲವು ಸಂಸ್ಥೆಗಳನ್ನು ಅಮಾನ್ಯಗೊಳಿಸಿದ್ದೇವೆ’ ಎಂದು ಹಾಕಿ ಕರ್ನಾಟಕದ ಮಹಾಪ್ರಧಾನ ಕಾರ್ಯದರ್ಶಿ ಎಬಿ ಸುಬ್ಬಯ್ಯ ಪ್ರತಿಕ್ರಿಯಿಸಿದ್ದಾರೆ.

‘ಬಲ್ಲಾಳ ನನ್ನ ಸ್ನೇಹಿತ. ಅವರು ಎಜಿಎಂಗೆ ಹಾಜರಾಗಲು ಬಯಸಿದ್ದರೆ ನಮ್ಮ ಜೊತೆಗೆ ನೇರವಾಗಿ ಮಾತನಾಡಬಹುದಿತ್ತು’ ಎಂದೂ ಸುಬ್ಬಯ್ಯ ಹೇಳಿದರು.

ಇದಕ್ಕೂ ತಿರುಗೇಟು ನೀಡಿದ ಬಲ್ಲಾಳ, ‘ಬೆಂಗಳೂರು ಗ್ರಾಮೀಣ, ಹಾಕಿ ಬೆಂಗಳೂರು ನಗರ ಸಂಸ್ಥೆಗಳಿಗೂ ಅವರ ಮಾತುಗಳು ಅನ್ವಯಿಸುತ್ತವೆ. ಹಾಕಿ ಬೆಂಗಳೂರು ಗ್ರಾಮೀಣ ಸಂಸ್ಥೆಯಡಿಯಲ್ಲಿ ಒಂದೂ ಕ್ಲಬ್ ಇಲ್ಲ. ಇದುವರೆಗೆ ಒಂದೇ ಒಂದು ಟೂರ್ನಿಯನ್ನೂ ಆಯೋಜಿಸಿಲ್ಲ. ಸುಬ್ಬಯ್ಯ ಅವರಿಗೆ ಅಪ್ತರಾಗಿರುವ ಎಸ್‌.ವಿ.ಎಸ್. ಸುಬ್ರಮಣ್ಯ ಗುಪ್ತಾ ಅವರು ಅಧ್ಯಕ್ಷರಾಗಿದ್ದಾರೆ’ ಎಂದರು.

‘ಯಾವುದೇ ಮಾಹಿತಿ ನೀಡದೇ ಅಥವಾ ವಿಚಾರಣೆ ನಡೆಸದೇ ಜಿಲ್ಲಾ ಸಂಸ್ಥೆಯನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ. ಅದಕ್ಕೊಂದು ರೀತಿ, ನೀತಿ ಹಾಗೂ ನಿಯಮ ಇದೆ. ಆದರೆ ಇಲ್ಲಿ ಯಾವುದನ್ನೂ ಪಾಲನೆ ಮಾಡಿಲ್ಲ’ ಎಂದೂ ಬಲ್ಲಾಳ ಹೇಳಿದ್ದಾರೆ.

ಆಶಿಶ್ ಮತ್ತು ಸುಬ್ಬಯ್ಯ ಅವರಿಬ್ಬರೂ 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಭಾರತ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT