ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಅರ್ಹತಾ ಬೌಟ್‌ಗೆ ಆಶಿಶ್‌, ಸತೀಶ್

ಬಳ್ಳಾರಿಯಲ್ಲಿ ಆರಂಭಗೊಂಡ ಆಯ್ಕೆ ಟ್ರಯಲ್ಸ್‌; ಫೈನಲ್‌ಗೆ ವಿಕಾಸ್, ದುರ್ಯೋಧನ್
Last Updated 29 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಬಳ್ಳಾರಿ: ಆಶಿಶ್ ಕುಮಾರ್ ಮತ್ತು ಸತೀಶ್ ಕುಮಾರ್ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ನ ಬಾಕ್ಸಿಂಗ್‌ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದರು. ಇಲ್ಲಿನ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್‌ ಆವರಣದಲ್ಲಿ ಭಾನುವಾರ ಆರಂಭಗೊಂಡ ಆಯ್ಕೆ ಟ್ರಯಲ್ಸ್‌ನಲ್ಲಿ ವಿಕಾಸ್ ಕೃಷ್ಣ ಫೈನಲ್ ಪ್ರವೇಶಿಸಿದರು.

75 ಕೆಜಿ ವಿಭಾಗದಲ್ಲಿ ಏಷ್ಯಾ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಆಶಿಶ್ ಕುಮಾರ್ ರಾಷ್ಟ್ರೀಯ ಚಾಂಪಿಯನ್‌ ಮತ್ತು ದಕ್ಷಿಣ ಏಷ್ಯಾ ಗೇಮ್ಸ್‌ನ ಚಿನ್ನದ ಪದಕ ವಿಜೇತ ಅಂಕಿತ್ ಖತಾನ ಎದುರು ಏಕಪಕ್ಷೀಯ (9–0) ಜಯ ಗಳಿಸಿದರು. +91 ಕೆಜಿ ವಿಭಾಗದಲ್ಲಿ ಕಾಮನ್‌ವೆಲ್ಸ್‌ ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತ ಸತೀಶ್ ಕುಮಾರ್ ರೋಚಕ ಹಣಾಹಣಿಯಲ್ಲಿ ನರೇಂದ್ರ ವಿರುದ್ಧ 6–3ರ ಗೆಲುವು ಸಾಧಿಸಿದರು.

81 ಕೆಜಿ ವಿಭಾಗದಲ್ಲಿ ಸಚಿನ್‌ ಕುಮಾರ್ ಅವರು ಬ್ರಿಜೇಶ್‌ ಯಾದವ್‌ ಎದುರು 6–3ರಲ್ಲಿ ಗೆದ್ದು ಅರ್ಹತೆ ಗಳಿಸಿದರು. ಈ ವಿಭಾಗದವರ ಪಟ್ಟಿಯಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಸುಮಿತ್ ಸಾಂಗ್ವಾನ್ ಹೆಸರು ಕೂಡ ಇತ್ತು. ಆದರೆ ಉದ್ದೀಪನ ಮದ್ದು ಸೇವನೆ ವಿವಾದದಲ್ಲಿ ಸಿಲುಕಿ ಅವರು ಒಂದು ವರ್ಷ ನಿಷೇಧ ಶಿಕ್ಷೆಗೆ ಒಳಗಾಗಿದ್ದಾರೆ.

ವಿಕಾಸ್ ಕೃಷ್ಣಗೆ ಆಶಿಶ್ ಖುಲೇರಿಯಾ ಎದುರು ಜಯ: 69 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ವಿಕಾಸ್ ಕೃಷ್ಣ 9–0 ಅಂತರದಲ್ಲಿ ಆಶಿಶ್ ಖುಲೇರಿಯಾ ವಿರುದ್ಧ ಜಯ ಗಳಿಸಿದರೆ, ಇದೇ ವಿಭಾಗದ ಮತ್ತೊಂದು ಬೌಟ್‌ನಲ್ಲಿ ದುರ್ಯೋಧನ್ ನೇಗಿ 8–1ರಲ್ಲಿ ನವೀನ್ ಬೂರಾ ಅವರನ್ನು ಮಣಿಸಿದರು.

57 ಕೆಜಿ ವಿಭಾಗದ ಫೈನಲ್‌ನಲ್ಲಿ ಗೌರವ್ ಸೋಲಂಕಿ ಮತ್ತು ಹಸಾಮುದ್ದೀನ್ ಸೆಣಸುವರು. ಭಾನುವಾರ ನಡೆದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಗೌರವ್‌ 6–3ರಲ್ಲಿ ಕವಿಂದರ್ ಬಿಷ್ಠ್ ವಿರುದ್ಧ ಮತ್ತು ಹಸಮುದ್ದೀನ್ ಇದೇ ಅಂತರದಲ್ಲಿ ಸಚಿನ್ ಸಿವಾಚ್ ಅವರನ್ನು ಸೋಲಿಸಿದರು.

91 ಕೆಜಿ ವಿಭಾಗದ ಸೆಮಿಫೈನಲ್‌ ಬೌಟ್‌ನಲ್ಲಿ ನವೀನ್ ಕುಮಾರ್ 5–4ರಲ್ಲಿ ಗೌರವ್ ಚೌಹಾಣ್ ವಿರುದ್ಧ ಗೆಲುವು ಸಾಧಿಸಿದರು. ಅರ್ಹತಾ ಸುತ್ತಿನ ಸ್ಪರ್ಧೆಗಳು ಫೆಬ್ರುವರಿ 3ರಿಂದ 14ರ ವರೆಗೆ ಚೀನಾದಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT