ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಆರಂಭಿಕ ಆಘಾತ

ಫಿಬಾ ಏಷ್ಯಾ ಕಪ್ ಬ್ಯಾಸ್ಕೆಟ್‌ಬಾಲ್: ರಂಗೇರಿದ ಹಿಮವಾರಿ ಅಕಾಹೊ ಆಟ
Last Updated 24 ಸೆಪ್ಟೆಂಬರ್ 2019, 18:53 IST
ಅಕ್ಷರ ಗಾತ್ರ

ಬೆಂಗಳೂರು: ಸತತ ನಾಲ್ಕನೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಕನಸಿನೊಂದಿಗೆ ಕಣಕ್ಕೆ ಇಳಿದ ಜಪಾನ್ ಆಟಗಾರ್ತಿಯರು ಆತಿಥೇಯರನ್ನು ಕ್ಷಣ ಕ್ಷಣವೂ ಕಾಡಿದರು.

ಹಿಮವಾರಿ ಅಕಾಹೊ (23ಪಾಯಿಂಟ್ಸ್‌) ಅವರ ಅಮೋಘ ಆಟದ ನೆರವಿನಿಂದ ಜಪಾನ್ ತಂಡ ಫಿಬಾ ಮಹಿಳೆಯರ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಏಷ್ಯಾಕಪ್‌ನಲ್ಲಿ ಮೊದಲ ಬಾರಿ ‘ಎ’ ವಲಯದಲ್ಲಿ ಆಡಿದ ಭಾರತ ಆರಂಭದಲ್ಲೇ ಆಘಾತ ಕಂಡಿತು.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ತಂಡವನ್ನು ಜಪಾನ್ 103–27ರಲ್ಲಿ ಮಣಿಸಿತು.

ಮೊದಲ ನಿಮಿಷದಲ್ಲೇ ಪಾಯಿಂಟ್ ಗಳಿಸಿಕೊಟ್ಟಹಿಮವಾರಿ ಅಕಾಹೊ ಪಂದ್ಯದುದ್ದಕ್ಕೂ ಜಪಾನ್‌ಗೆ ಬಲ ತುಂಬಿದರು. ಮೊದಲ ಕ್ವಾರ್ಟರ್‌ನಲ್ಲಿ ಲಭಿಸಿದ ನಾಲ್ಕೂ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡ ಅವರು ನಂತರವೂ ಚಾಣಾಕ್ಷ ಆಟದ ಮೂಲಕ ಭಾರತ ಪಾಳಯದಲ್ಲಿ ಆತಂಕ ಸೃಷ್ಟಿಸಿದರು.

ತಮಾಮಿ ನಕಾಡ (11) ರೀಬೌಂಡ್‌ನಲ್ಲೂ ನಕೊ ಮೊಟೊಹಶಿ (5) ಅಸಿಸ್ಟ್‌ಗಳಲ್ಲೂ ಮಿಂಚು ಹರಿಸಿ ಜಪಾನ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಪರ ಶಿರೀನ್ ವಿಜಯ್ ಲಿಮಯೆ 11ಪಾಯಿಂಟ್ಸ್ ಗಳಿಸಿದರೆ ಅಸಿಸ್ಟ್‌ಗಳಲ್ಲಿ ಅಂಜನಾ ಪ್ರಸನ್ನ ಗೀತಾ (3) ಪರಿಣಾಮಕಾರಿ ಆಟವಾಡಿ ಸೋಲಿನ ಅಂತರ ಕಡಿಮೆ ಮಾಡುವಲ್ಲಿ ಯಶಸ್ವಿಯಾದರು.

ಕರ್ನಾಟಕದ ಬಾಂಧವ್ಯ ಮತ್ತು ನವನೀತ ಅವರಿಗೆ ಆರಂಭದಲ್ಲೇ ಅವಕಾಶ ಲಭಿಸಿದರೆ, ಇದೇ ಮೊದಲ ಬಾರಿ ಸೀನಿಯರ್ ತಂಡಕ್ಕೆ ಆಯ್ಕೆಯಾಗಿರುವ ಲೋಪಾಮುದ್ರ ಎರಡನೇ ಕ್ವಾರ್ಟರ್‌ನಲ್ಲಿ ಬದಲಿ ಆಟಗಾರ್ತಿಯಾಗಿ ಕಣಕ್ಕೆ ಇಳಿದರು.

ಆಸ್ಟ್ರೇಲಿಯಾ, ಚೀನಾ, ಕೊರಿಯಾ ಜಯಭೇರಿ:ಮಧ್ಯಾಹ್ನ ನಡೆದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ರನ್ನರ್ ಅಪ್ ಆಸ್ಟ್ರೇಲಿಯಾ ದುರ್ಬಲ ಫಿಲಿಪ್ಪೀನ್ಸ್ ವಿರುದ್ಧ 123–57ರ ಜಯಭೇರಿ ಮೊಳಗಿಸಿತು. ಮತ್ತೊಂದು ಪಂದ್ಯದಲ್ಲಿ 12 ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾ 48–44ರಲ್ಲಿ ಚೀನಾ ತೈಪೆಯನ್ನು ಮಣಿಸಿತು. ಸಂಜೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 11 ಬಾರಿಯ ಚಾಂಪಿಯನ್ ಚೀನಾ 67–44ರ ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT