ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಏಷ್ಯಾಕಪ್: ಗೆಲುವಿನ ಓಟ ಮುಂದುವರಿಸುವ ಛಲದಲ್ಲಿ ಸವಿತಾ ಬಳಗ

ಭಾರತ–ಜಪಾನ್ ಮುಖಾಮುಖಿ ಇಂದು
Last Updated 22 ಜನವರಿ 2022, 16:28 IST
ಅಕ್ಷರ ಗಾತ್ರ

ಮಸ್ಕತ್: ಸವಿತಾ ಪೂನಿಯಾ ನಾಯಕತ್ವದ ಭಾರತ ತಂಡವು ಏಷ್ಯಾಕಪ್ ಮಹಿಳೆಯರ ಹಾಕಿ ಟೂರ್ನಿಯಲ್ಲಿ ಭಾನುವಾರ ಜಪಾನ್ ಎದುರು ಕಣಕ್ಕಿಳಿಯಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭರ್ಜರಿ ಜಯಗಳಿಸಿದ್ದ ತಂಡವು ಆತ್ಮವಿಶ್ವಾಸದ ಉತ್ತುಂಗದಲ್ಲಿದೆ.

ಹಾಲಿ ಚಾಂಪಿಯನ್ ಭಾರತ ತಂಡದಲ್ಲಿರುವ ಅನುಭವಿ ಸ್ಟ್ರೈಕರ್ ವಂದನಾ ಕಟಾರಿಯಾ, ನವನೀತ್ ಕೌರ್ ಮತ್ತು ಶಮಿಲಾ ದೇವಿ ಮಲೇಷ್ಯಾ ವಿರುದ್ಧ ಮಿಂಚಿದ್ದರು. ಲಾಲ್‌ರೆಮಿಸಿಯಾಮಿ, ಮೊನಿಕಾ ಮತ್ತು ದೀಪ್ ಗ್ರೇಸ್ ಎಕಾ ಅವರು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಲ್ಲಿ ಪರಿವರ್ತಿಸಿದರು.

ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಫಾರ್ವರ್ಡ್ ಆಟಗಾರ್ತಿಯರು ಉತ್ತಮವಾಗಿ ಆಡಿದ್ದರು. ಜಪಾನ್ ತಂಡವು ವಿಶ್ವ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿದೆ. ತಂಡವು ಯಾವುದೇ ಸಂದರ್ಭದಲ್ಲಿ ಭಾರತಕ್ಕೆ ಆಘಾತ ನೀಡುವ ಸಾಮರ್ಥ್ಯ ಹೊಂದಿದೆ.

‘ಜಪಾನ್ ತಂಡದಲ್ಲಿ ಅನುಭವಿ ಆಟಗಾರ್ತಿಯರು ಇದ್ದಾರೆ. ಈ ಪಂದ್ಯವು ರೋಚಕವಾಗಿರುವ ನಿರೀಕ್ಷೆ ಇದೆ. ನಮ್ಮ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಆಟಗಾರ್ತಿಯರು ಯಶಸ್ವಿಯಾದರೆ ಎದುರಾಳಿಯನ್ನು ಮಣಿಸಬಹುದು’ ಎಂದು ಭಾರತದ ಮುಖ್ಯ ಕೋಚ್ ಜ್ಯಾನೆಕ್ ಶಾಪ್‌ಮ್ಯಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಪಾನ್ ಬಳಗವು ತನ್ನ ಮೊದಲ ಪಂದ್ಯದಲ್ಲಿ 6–0ಯಿಂದ ಸಿಂಗಪುರ ವಿರುದ್ಧ ಜಯಿಸಿತ್ತು. 2019ರಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ಭಾರತದ ವನಿತೆಯರು 2–1ರಿಂದ ಜಪಾನ್ ತಂಡವನ್ನು ಮಣಿಸಿತ್ತು.

ಹೋದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಭಾರತ ತಂಡವನ್ನು ಇಲ್ಲಿ ಮಣಿಸಲು ಜಪಾನ್ ತಂಡವೂ ಉತ್ತಮ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯುವ ಛಲದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT