ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಶ್ರೀಹರಿ

ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಷಿಪ್‌: ಮೂರನೇ ದಿನವೂ ಆಧಿಪತ್ಯ ಸಾಧಿಸಿದ ಕುಶಾಗ್ರ
Last Updated 26 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಈಜು ಪ್ರಿಯರ ನಿರೀಕ್ಷೆ ಹುಸಿಯಾಗಲಿಲ್ಲ. ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌ನ ಮೂರನೇ ದಿನ, ಪುರುಷರ 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಕಣಕ್ಕಿಳಿದಿದ್ದ ಕರ್ನಾಟಕದ ಶ್ರೀಹರಿ ನಟರಾಜ್‌, ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ನಗರದ ಹೊರವಲಯದ ಬೆಟ್ಟ ಹಲಸೂರಿನಲ್ಲಿರುವ ಪಡುಕೋಣೆ–ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನಲ್ಲಿ ಗುರುವಾರ ನಡೆದ ಸ್ಪರ್ಧೆಯಲ್ಲಿ ಶ್ರೀಹರಿ 55.06 ಸೆಕೆಂಡು ಗಳಲ್ಲಿ ಗುರಿ ಮುಟ್ಟಿದರು. ಇದರೊಂದಿಗೆ ಇಂಡೊನೇಷ್ಯಾದ ಸುದರಾತ್ವಾ ಹೆಸರಿನಲ್ಲಿದ್ದ ನಾಲ್ಕು ವರ್ಷಗಳ ಹಿಂದಿನ ದಾಖಲೆಯನ್ನು ಮೀರಿ ನಿಂತರು. 2015ರಲ್ಲಿ ಬ್ಯಾಂಕಾಂಕ್‌ನಲ್ಲಿ ನಡೆದಿದ್ದ ಕೂಟದಲ್ಲಿ ಸುದರಾತ್ವಾ 55.89 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.

18ರ ಹರೆಯದ ಶ್ರೀಹರಿ, ಒಲಿಂಪಿಕ್ಸ್‌ ‘ಎ’ ಅರ್ಹತಾ ಮಟ್ಟ (53.85ಸೆ.) ಪೂರೈಸಲು ವಿಫಲರಾದರು. ಐದನೇ ಸಾಲಿನಿಂದ ಸ್ಪರ್ಧೆ ಆರಂಭಿಸಿದ್ದ ಬೆಂಗಳೂರಿನ ಈಜುಪಟು, ಮೊದಲ 50 ಮೀಟರ್ಸ್‌ ಸ್ಪರ್ಧೆ ಪೂರ್ಣಗೊಳಿಸಲು 26.68 ಸೆಕೆಂಡು ತೆಗೆದುಕೊಂಡರು. ನಂತರ ಮಿಂಚಿನ ಗತಿಯಲ್ಲಿ ಮುನ್ನುಗ್ಗಿದ ಅವರು ತುರ್ಕಮೆನಿಸ್ತಾನದ ಅತಾಯೆವ್‌ ಮೆರ್ದಾನ್‌ ಅವರನ್ನು ಹಿಂದಿಕ್ಕಿದರು. ಈ ವೇಳೆ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಗೋ.. ಗೋ..ಗೋ.. ಎಂದು ಕೂಗುತ್ತಾ ಭಾರತದ ಈಜುಪಟುವನ್ನು ಹುರಿದುಂಬಿಸಿದರು. ಅಭಿಮಾನಿಗಳ ಪ್ರೀತಿಯಿಂದ ಪುಳಕಿತರಾದಂತೆ ಕಂಡ ಶ್ರೀಹರಿ, ಅಗ್ರಸ್ಥಾನದಲ್ಲಿ ಗುರಿ ಸೇರಿದರು.

ಬೆಂಗಳೂರಿನ ಈಜುಪಟುಗೆ ಪ್ರಬಲ ಸ್ಪರ್ಧೆ ಒಡ್ಡಿದ ಮೆರ್ದಾನ್ ಬೆಳ್ಳಿಯ ಪದಕ ಪಡೆದರು. ಅವರು 55.28 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ವಿಭಾಗದ ಕಂಚಿನ ಪದಕ ಹಾಂಕಾಂಗ್‌ನ ಲವು ಶಿಯು ಯೂಯಿ (57.56ಸೆ.) ಅವರ ಪಾಲಾಯಿತು.

ಫ್ರೀಸ್ಟೈಲ್‌ನಲ್ಲಿ ಕಂಚು: ಪುರುಷರ 100 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಶ್ರೀಹರಿ, ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ನಿಗದಿತ ಗುರಿ ಕ್ರಮಿಸಲು ಅವರು 50.91 ಸೆಕೆಂಡು ತೆಗೆದುಕೊಂಡರು. ಇದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ನಾಲ್ಕು ಪದಕಗಳನ್ನು ಜಯಿಸಿದ ಸಾಧನೆ ಮಾಡಿದರು. ಮೊದಲ ದಿನ ನಡೆದಿದ್ದ 4X100 ಮೀಟರ್ಸ್‌ ಫ್ರೀಸ್ಟೈಲ್‌ ರಿಲೆ ಮತ್ತು 50 ಮೀ.ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಗಳಲ್ಲಿ ಅವರಿಂದ ಚಿನ್ನದ ಸಾಧನೆ ಅರಳಿತ್ತು.

ನಾಲ್ಕನೇ ಚಿನ್ನ ಗೆದ್ದ ಕುಶಾಗ್ರ: ದೆಹಲಿಯ 19ರ ಹರೆಯದ ಕುಶಾಗ್ರ ರಾವತ್‌, ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸಿದರು. ಸಂಜೆ ನಡೆದ ಮೊದಲ ಸ್ಪರ್ಧೆಯಲ್ಲೇ (400 ಮೀ.ಫ್ರೀಸ್ಟೈಲ್‌) ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 3 ನಿಮಿಷ 55.81 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ನಾಲ್ಕು ಚಿನ್ನದ ಪದಕ ಜಯಿಸಿದ ಸಾಧನೆಯನ್ನೂ ಮಾಡಿದರು.

ಚಿನ್ನದ ಹೊಳಪು ಮೂಡಿಸಿದ ಸಾಜನ್‌: ಪುರುಷರ 200 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ಸಾಜನ್‌ ಪ್ರಕಾಶ್‌ ಚಿನ್ನ ಜಯಿಸಿದರು. ಅವರು 2 ನಿಮಿಷ 00.38 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ಮೂಲಕ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಪದಕ ಗೆದ್ದ ಶ್ರೇಯಕ್ಕೂ ಭಾಜನರಾದರು. 100 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಸ್ಪರ್ಧಿಸಿದ್ದ ವೀರಧವಳ್‌ ಖಾಡೆ ಬೆಳ್ಳಿಯ ಪದಕ ಪಡೆದರು. ಅವರು ನಿಗದಿತ ಗುರಿ ಮುಟ್ಟಲು 50.68 ಸೆಕೆಂಡು ತೆಗೆದುಕೊಂಡರು.

ಕರ್ನಾಟಕದ ಸ್ಪರ್ಧಿಗಳ ವೈಫಲ್ಯ: ಕರ್ನಾಟಕದ ಇತರ ಸ್ಪರ್ಧಿಗಳಾದ ಖುಷಿ ದಿನೇಶ್‌, ಸಿ.ಜೆ.ಸಂಜಯ್‌, ಸುವನ ಸಿ.ಭಾಸ್ಕರ್‌ ಅವರು ಮೂರನೇ ದಿನ ಪದಕ ಗೆಲ್ಲಲು ವಿಫಲರಾದರು. 200 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಖುಷಿ (2:11.41ಸೆ.) ಐದನೇ ಸ್ಥಾನ ಪಡೆದರು. 1,500 ಮೀ. ಫ್ರೀಸ್ಟೈಲ್‌ನಲ್ಲಿ ಆರನೇಯವರಾಗಿ ಸ್ಪರ್ಧೆ ಮುಗಿಸಿದರು.

ಮೂರನೇ ದಿನ ಪದಕ ಗೆದ್ದ ಭಾರತದ ಸ್ಪರ್ಧಿಗಳು: ಪುರುಷರು:400 ಮೀಟರ್ಸ್‌ ಫ್ರೀಸ್ಟೈಲ್‌: ಕುಶಾಗ್ರ ರಾವತ್‌ (ಕಾಲ: 3ನಿಮಿಷ 55.81ಸೆ.)–1, 200 ಮೀ.ಬಟರ್‌ಫ್ಲೈ: ಸಾಜನ್‌ ಪ್ರಕಾಶ್‌ (2:00.38ಸೆ.)–1, 100 ಮೀ.ಬ್ಯಾಕ್‌ ಸ್ಟ್ರೋಕ್‌: ಶ್ರೀಹರಿ ನಟರಾಜ್‌ (55;06ಸೆ.)–1, 100 ಮೀ.ಫ್ರೀಸ್ಟೈಲ್‌: ವೀರಧವಳ್‌ ಖಾಡೆ (50.68ಸೆ.)–2, ಶ್ರೀಹರಿ ನಟರಾಜ್‌ (50.91 ಸೆ.)–3. 4X100 ಮೀ.ಮೆಡ್ಲೆ ರಿಲೆ: ಭಾರತ (3:46.49ಸೆ.)–1,

ಮಹಿಳೆಯರು: 400 ಮೀಟರ್ಸ್‌ ಫ್ರೀಸ್ಟೈಲ್‌: ಶಿವಾನಿ ಕತಾರಿಯಾ (4:27.16ಸೆ.)–3, 100 ಮೀ.ಬ್ಯಾಕ್‌ಸ್ಟ್ರೋಕ್‌: ಮಾನಾ ಪಟೇಲ್‌ (1:05.08ಸೆ.)–2, 4X100 ಮೀ. ಮೆಡ್ಲೆ ರಿಲೆ: ಭಾರತ (4:26.69)–2.

ಬಾಲಕರು: 200 ಮೀ.ಬಟರ್‌ಫ್ಲೈ: ತನೀಷ್ ಮ್ಯಾಥ್ಯೂ ಜಾರ್ಜ್‌ (2:03.31ಸೆ.)–2. ದೇವಾಂಶ ಪಾರ್ಮರ್‌ (2:12.90ಸೆ.)–3. ಬಾಲಕಿಯರು: 200 ಮೀ.ಬ್ರೆಸ್ಟ್‌ಸ್ಟ್ರೋಕ್‌: ಅಪೇಕ್ಷಾ ಫರ್ನಾಂಡೀಸ್‌ (2:40.38ಸೆ.)–3.

***

ಕೂಟ ದಾಖಲೆ ನಿರ್ಮಿಸಿದ್ದು ಖುಷಿ ನೀಡಿದೆ. ಇದಕ್ಕಿಂತಲೂ ವೇಗವಾಗಿ ಗುರಿ ಮುಟ್ಟಬೇಕೆಂದುಕೊಂಡಿದ್ದೆ. ಅದು ಸಾಧ್ಯವಾಗಲಿಲ್ಲ. ಹಾಗಂತ ನಿರಾಸೆಗೊಂಡಿಲ್ಲ.
–ಶ್ರೀಹರಿ ನಟರಾಜ್‌, ಭಾರತದ ಈಜುಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT