ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಕೊರಿಯಾಗೆ ಕಿರೀಟ, ಭಾರತಕ್ಕೆ ಕಂಚು

Last Updated 22 ಡಿಸೆಂಬರ್ 2021, 16:03 IST
ಅಕ್ಷರ ಗಾತ್ರ

ಢಾಕಾ: ಚಾಂಪಿಯನ್‌ ಪಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕ ಗಳಿಸಿತು.

ಫೈನಲ್‌ನಲ್ಲಿ ಜಪಾನ್ ತಂಡವನ್ನು ಮಣಿಸಿದ ದಕ್ಷಿಣ ಕೊರಿಯಾ ತಂಡವು ಚಿನ್ನದ ಪದಕ ಜಯಿಸಿತು. ಶೂಟೌಟ್‌ನಲ್ಲಿ ಕೊರಿಯಾ ತಂಡವು 4–2 ಗೋಲುಗಳಿಂದ ಜಪಾನ್ ಎದುರು ಜಯಿಸಿತು. ಪಂದ್ಯದ ನಿಗದಿಯ ಅವಧಿಯಲ್ಲಿ ಉಭಯ ತಂಡಗಳು 3–3ರಿಂದ ಸಮಬಲ ಸಾಧಿಸಿದವು.

ಮೂರನೇ ಸ್ಥಾನಕ್ಕಾಗಿ ಬುಧವಾರ ನಡೆದ ಹಣಾಹಣಿಯಲ್ಲಿ ತಂಡ ಪಾಕಿಸ್ತಾನ ವಿರುದ್ಧ 4–3ರಲ್ಲಿ ಜಯ ಗಳಿಸಿತು.

ರೌಂಡ್ ರಾಬಿನ್ ಹಂತದ ಮೊದಲ ಪಂದ್ಯದಲ್ಲಿ ಸೋತಿದ್ದ ಮನ್‌ಪ್ರೀತ್ ಸಿಂಗ್ ಬಳಗ ನಂತರ ಪುಟಿದೆದ್ದಿತ್ತು. ಆದರೆ ಸೆಮಿಫೈನಲ್‌ನಲ್ಲಿ ಜಪಾನ್‌ಗೆ ಮಣಿದಿತ್ತು. ಕಂಚಿನ ‍ಪದಕದ ಪಂದ್ಯದಲ್ಲಿ ಪಾಕಿಸ್ತಾನದ ಪ್ರಬಲ ಪೈಪೋಟಿಯನ್ನು ಮೀರಿ ಜಯಿಸಿತು. ಮಸ್ಕತ್‌ನಲ್ಲಿ ಕಳೆದ ಬಾರಿ ನಡೆದಿದ್ದ ಟೂರ್ನಿಯ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಚಾಂಪಿಯನ್‌ ಪಟ್ಟ ಗಳಿಸಿದ್ದವು.

ಆರಂಭದಿಂದಲೇ ಆಕ್ರಮಣಕ್ಕೆ ಇಳಿದ ತಂಡ ಒಟ್ಟಾರೆ 11 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗಳಿಸಿಕೊಂಡಿತು. ಈ ಪೈಕಿ ಎರಡರಲ್ಲಿ ಯಶಸ್ಸು ಸಾಧಿಸಿತು. ಮೊದಲ ನಿಮಿಷದಲ್ಲೇ ಹರ್ಮನ್‌ಪ್ರೀತ್ ಸಿಂಗ್ ಗಳಿಸಿದ ಗೋಲಿನೊಂದಿಗೆ ಮುನ್ನಡೆ ಸಾಧಿಸಿದ ಭಾರತದ ಪರ 45ನೇ ನಿಮಿಷದಲ್ಲಿ ಸುಮಿತ್, 53ನೇ ನಿಮಿಷದಲ್ಲಿ ವರುಣ್ ಕುಮಾರ್ ಮತ್ತು 57ನೇ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ ಚೆಂಡನ್ನು ಗುರಿ ಮುಟ್ಟಿಸಿದರು.

ಪಾಕಿಸ್ತಾನ 10ನೇ ನಿಮಿಷದಲ್ಲಿ ಅಫ್ರಾಜ್ ಅವರ ಗೋಲಿನೊಂದಿಗೆ ಪಾಕಿಸ್ತಾನ ತಿರುಗೇಟು ನೀಡಿತ್ತು. 33ನೇ ನಿಮಿಷದಲ್ಲಿ ಅಬ್ದುಲ್ ರಾಣಾ ಮತ್ತು 57ನೇ ನಿಮಿಷದಲ್ಲಿ ಅಹಮ್ಮದ್ ನದೀಮ್ ಚೆಂಡನ್ನು ಗುರಿ ಮುಟ್ಟಿಸಿ ಸೋಲಿನ ಅಂತರ ಕಡಿಮೆ ಮಾಡಿದರು. ರೌಂಡ್ ರಾಬಿನ್ ಹಂತದಲ್ಲ ಪಾಕಿಸ್ತಾನವನ್ನು ಭಾರತ 3–1ರಲ್ಲಿ ಸೋಲಿಸಿತ್ತು.

ಪಾಕಿಸ್ತಾನದ ರಕ್ಷಣಾ ವಿಭಾಗದ ಮೇಲೆ ಆರಂಭದಿಂದಲೇ ಒತ್ತಡ ಹೇರಲು ಯಶಸ್ವಿಯಾದ ಭಾರತ ತಂಡ ಜಪಾನ್ ಎದುರಿನ ಪಂದ್ಯಕ್ಕಿಂತ ಭಿನ್ನವಾಗಿ ಆಕ್ರಮಣಕಾರಿ ಆಟಕ್ಕೇ ಒತ್ತು ನೀಡಿತು. ಮೊದಲ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಕೆಳಹಂತದ ಮೋಹಕ ಫ್ಲಿಕ್ ಮೂಲಕ ಹರ್ಮನ್‌ಪ್ರೀತ್ ಸಿಂಗ್ ಗೋಲು ಗಳಿಸಿದರು.

ನಿಧಾನವಾಗಿ ಆಟಕ್ಕೆ ಕುದುರಿಕೊಂಡ ಪಾಕಿಸ್ತಾನ ಭರವಸೆ ಗಳಿಸಿಕೊಂಡು ಮುನ್ನುಗ್ಗಿತು. ಇದರ ಫಲವಾಗಿ 10ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ಲಭಿಸಿತು. ಪ್ರತಿದಾಳಿ ನಡೆಸಿದ ಭಾರತಕ್ಕೆ ಪೆನಾಲ್ಟಿ ಅವಕಾಶಗಳು ಲಭಿಸಿದವು. ಆದರೆ ಪಾಕಿಸ್ತಾನದ ರಕ್ಷಣಾ ವಿಭಾಗದವರು ತಡೆಯೊಡ್ಡಲು ಯಶಸ್ವಿಯಾದರು. 14ನೇ ನಿಮಿಷದಲ್ಲಿ ಪಾಕಿಸ್ತಾನಕ್ಕೆ ಪಂದ್ಯದ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ ಗೋಲ್‌ಕೀಪರ್ ಪಾಠಕ್ ಚೆಂಡನ್ನು ತಡೆದರು.

ಎರಡನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿಯ ಹೋರಾಟ ಪ್ರದರ್ಶಿಸಿದವು. 22 ಮತ್ತು 26ನೇ ನಿಮಿಷಗಳಲ್ಲಿ ಭಾರತದ ಪ್ರಯತ್ನವನ್ನು ಅಮ್ಜದ್ ಅಲಿ ತಡೆದರು. ಆದರೂ ಭಾರತ ಛಲ ಬಿಡದೆ ಆಕ್ರಮಣಕಾರಿ ಆಟ ಮುಂದುವರಿಸಿತು.

ಏಷ್ಯನ್ ಹಾಕಿ ಚಾಂಪಿಯನ್‌ಷಿಪ್ ಟ್ರೋಫಿಯೊಂದಿಗೆ ಸಂಭ್ರಮಿಸಿದ ದಕ್ಷಿಣ ಕೊರಿಯಾದ ಆಟಗಾರರು –ಎಎಫ್‌ಪಿ ಚಿತ್ರ
ಏಷ್ಯನ್ ಹಾಕಿ ಚಾಂಪಿಯನ್‌ಷಿಪ್ ಟ್ರೋಫಿಯೊಂದಿಗೆ ಸಂಭ್ರಮಿಸಿದ ದಕ್ಷಿಣ ಕೊರಿಯಾದ ಆಟಗಾರರು –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT