ಒಂದಾದ ಏಷ್ಯಾದ ಬಣ್ಣಗಳು

7
ಜಕಾರ್ತದಲ್ಲಿ ಏಷ್ಯನ್ ಗೇಮ್ಸ್‌ಗೆ ರಂಗುರಂಗಿನ ಚಾಲನೆ : ಇಂದಿನಿಂದ ಸ್ಪರ್ಧೆಗಳು

ಒಂದಾದ ಏಷ್ಯಾದ ಬಣ್ಣಗಳು

Published:
Updated:
Deccan Herald

ಜಕಾರ್ತ: ಶನಿವಾರ ರಾತ್ರಿ ಕಣ್ಮನ ಸೆಳೆಯುವ ವಿವಿಧ ಬಣ್ಣಗಳು, ಸಂಗೀತದ ಲಯ ಮತ್ತು ಇಂಡೊನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಸ್ಫೂರ್ತಿದಾಯಕ ಭಾಷಣದೊಂದಿಗೆ 18ನೇ ಏಷ್ಯನ್ ಕ್ರೀಡಾಕೂಟಕ್ಕೆ ಚಾಲನೆ ಲಭಿಸಿತು.

ಮುಂದಿನ ವರ್ಷ ನಡೆಯಲಿರುವ ಇಲ್ಲಿಯ ಅಧ್ಯಕ್ಷೀಯ ಚುನಾವಣೆಯ ಮರು ಆಯ್ಕೆ ಬಯಸಿ ಕಣಕ್ಕಿಳಿಯುವ ತಯಾರಿಯಲ್ಲಿರುವ ಜೊಕೊ ವಿಡೊಡೊ ಅವರು ಕೂಟವು ಉದ್ಘಾಟನೆಯಾಗಿದೆ ಎಂದು ಘೋಷಿಸಿದರು. ಇದಕ್ಕೂ ಮುನ್ನ ಅವರು ಕಾರ್ಯಕ್ರಮದ ಸ್ಥಳದ ಸಮೀಪ ಕಾರಿನಿಂದ ಇಳಿಯುವಾಗ ಕೆಲವು ಪ್ರತಿಭಟನಾಕಾರರು ಅವರನ್ನು ಸುತ್ತುವರಿದರು. ಆದರೆ ಅವರಿಂದ ತಪ್ಪಿಸಿಕೊಂಡ ಜೊಕೊ ಬೈಕ್‌ವೊಂದರಲ್ಲಿ ಗೆಲೊರಾ ಬಂಗ್ ಕರ್ಣೊ ಕ್ರೀಡಾಂಗಣಕ್ಕೆ ಬಂದರು. ಇದನ್ನು ಟಿವಿ ಪರದೆಯಲ್ಲಿ ನೋಡಿದವರು ಚಪ್ಪಾಳೆ ತಟ್ಟಿ ಅಭಿನಂದಿಸಿದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಜೇಮ್ಸ್‌ ಬಾಂಡ್ ಬೈಕ್‌ ಮೇಲೆ ರಾಣಿ ಎಲಿಜಬೆತ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ರೂಪಕವನ್ನು ಜೊಕೊ ಘಟನೆ ನೆನಪಿಸಿತು.  ಇದು ಎಲ್ಲರ ಮುಖದ ಮೇಲೆ ನಗೆಯುಕ್ಕಿಸಿತ್ತು.

ನಂತರ ನಡೆದ ಎರಡೂವರೆ ಗಂಟೆಗಳ ಕಾರ್ಯಕ್ರಮವು ‘ಏಷ್ಯಾದ ತಾಕತ್ತು’ ಏನೆಂಬುದನ್ನು ಅನಾವರಣಗೊಳಿ ಸಿತು. ಏಷ್ಯಾ ಖಂಡದ ಬೇರೆ ಬೇರೆ ದೇಶಗಳ ಆಥ್ಲೀಟ್‌ಗಳು ಒಂದೆಡೆ ಸೇರಿದ್ದರಿಂದ ಹಬ್ಬದ ವಾತಾವರಣ ಇತ್ತು. ನಗಾರಿಗಳ ಸದ್ದು, ಕ್ರೀಡಾಂ ಗಣದ ಸುತ್ತ ಬೆಳಕಿನ ಚಿತ್ತಾರ ವೈವಿಧ್ಯ ಬಿಂಬಿಸಿದ ಸುಡುಮದ್ದು. ಪ್ರಕೃತಿ ಮಾತೆಯ ಅವತರಣಿಕೆಯ ರೂಪಕಗಳು ಕಣ್ಮನ ಸೆಳೆದವು. ಈ ಹಿಂದಿನ ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದ ಇಂಡೊನೇಷ್ಯಾದ ಕ್ರೀಡಾಪಟುಗಳು ಕೈಯಿಂದ ಕೈ ಬದಲಾಗಿ ಬಂದ ಕ್ರೀಡಾ ಜ್ಯೋತಿಯ ಟಾರ್ಚ್‌ನ್ನು ಪಡೆದ ‘ಸ್ಟೋರ್ಟ್ಸ್‌ ಐಕಾನ್’ ಬ್ಯಾಡ್ಮಿಂಟನ್ ಆಟಗಾರ್ತಿ ಸುಸಿ ಸುಸಾಂತಿ ಪ್ರೇಕ್ಷಕರತ್ತ ಕೈಬೀಸಿದಾಗ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಲನ ಸೃಷ್ಟಿಯಾಯಿತು.  1992ರ ಬಾರ್ಸಿಲೋನಾ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಸುಸಾಂತಿ ಅವರು ಕಾಲ್ಡ್ರನ್‌ನಲ್ಲಿ ಜ್ಯೋತಿ ಬೆಳಗಿಸಿದರು. ಅದರ ಹಿಂದೆಯೇ ಸುಡುಮದ್ದುಗಳ ಚಿತ್ತಾರ ಆಗಸ ತುಂಬಿತು.


ಜಕಾರ್ತದ ಗೆಲೊರಾ ಬಂಗ್‌ ಕರ್ಣೊ ಕ್ರೀಡಾಂಗಣದಲ್ಲಿ ಶನಿವಾರ ಸುಡುಮದ್ದುಗಳನ್ನು ಸಿಡಿಸಿದಾಗ ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿತು -ರಾಯಿಟರ್ಸ್‌ ಚಿತ್ರ

ನೂರಕ್ಕು ಹೆಚ್ಚು ಕಲಾವಿದರು ನೃತ್ಯ, ಸಂಗೀತ ಪ್ರಸ್ತುತಪಡಿಸಿದರು. ಸ್ಪರ್ಧಿಸಿರುವ ತಂಡಗಳ ಪಥಸಂಚಲನ ನಡೆಯಿತು. ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರು ತ್ರಿವರ್ಣ ಧ್ವಜ ಹಿಡಿದು ತಂಡವನ್ನು ಮುನ್ನಡೆಸಿದರು. ಆತಿಥೇಯ ದೇಶದ ತಂಡವು ಮುನ್ನೆಲೆಗೆ ಬಂದಾಗ ಕರತಾಡನದ ಸದ್ದು ಪ್ರತಿಧ್ವನಿಸಿತು.

ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ತಂಡಗಳು ಒಂದೇ ಧ್ವಜದಡಿ ಯಲ್ಲಿ ಪಥಸಂಚಲನದಲ್ಲಿ ಬಂದಿದ್ದು ಸಾಮರಸ್ಯದ ಹೊಸಬೆಳಕು ಪಸರಿಸಿದಂತಾಯಿತು. 2000ರಲ್ಲಿ ಸಿಡ್ನಿ ಒಲಿಂಪಿಕ್ಸ್‌ ಮತ್ತು 2002ರ ಬುಸಾನ್ ಏಷ್ಯನ್ ಗೇಮ್ಸ್‌ನಲ್ಲಿ ಉಭಯ ದೇಶಗಳು ಒಂದಾಗಿ ಸ್ಪರ್ಧಿಸಿದ್ದವು. ಇರಾನ್‌ ತಂಡವು ಮಹಿಳಾ ಶೂಟರ್ ಇಲಾಹೆ ಅಹಮದಿ ಅವರ ನಾಯಕತ್ವದಲ್ಲಿ ಭಾಗವಹಿಸಿದ್ದು ವಿಶೇಷ. ಇಡೀ ಉದ್ಘಾಟನಾ ಸಮಾರಂಭವು ಏಷ್ಯಾದ ವೈವಿಧ್ಯಗಳು, ಸಾಂಸ್ಕೃತಿಕ ವಿಭಿನ್ನತೆಯನ್ನು ಬಿಂಬಿಸಿದವು. ಬೇರೆ ಬೇರೆ ಜನಾಂಗಗಳು ದೇಶಗಳ ಭಾವನೆಗಳು ಮಿಳಿತವಾದವು. ಒಟ್ಟಾರೆ ಹಿತಾನುಭವ ಸೃಷ್ಟಿಸಿತು.

ವಿಶ್ವಾಸದಲ್ಲಿ ಶ್ರೀಹರಿ
ಜಕಾರ್ತ:
ಭಾರತ ತಂಡದಲ್ಲಿ ಸ್ಥಾನ ಗಳಿಸಿರುವ ಕರ್ನಾಟಕದ ಶ್ರೀಹರಿ ನಟರಾಜ್‌ ಪದಕ ಜಯಿಸುವ ಕನಸಿ ನೊಂದಿಗೆ ಜಕಾರ್ತದ ಈಜು ಕೊಳಕ್ಕೆ ಧುಮುಕಲಿದ್ದಾರೆ. ಭಾನುವಾರ ನಡೆ ಯುವ 100 ಮೀಟರ್ಸ್‌ ಬ್ಯಾಕ್‌ ಸ್ಟ್ರೋಕ್‌ ನ ಹೀಟ್ಸ್‌ನಲ್ಲಿ ಭಾಗವಹಿಸಲಿದ್ದಾರೆ.

*


ಕಲಾವಿದರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟ ವೇಳೆ ಕಂಡ ಮನಮೋಹಕ ದೃಶ್ಯ.

*

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !