ಸಿಂಧು, ಸೈನಾ ಮೇಲೆ ನಿರೀಕ್ಷೆಯ ಭಾರ

7
ಬ್ಯಾಡ್ಮಿಂಟನ್‌: ಇಂದಿನಿಂದ ತಂಡ ವಿಭಾಗದ ಸ್ಪರ್ಧೆಗಳು

ಸಿಂಧು, ಸೈನಾ ಮೇಲೆ ನಿರೀಕ್ಷೆಯ ಭಾರ

Published:
Updated:

ಜಕಾರ್ತ: ಒಲಿಂಪಿಕ್ಸ್‌, ಆಲ್‌ ಇಂಗ್ಲೆಂಡ್‌ ಓಪನ್‌, ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟ ಗಳಲ್ಲಿ ಪದಕಗಳನ್ನು ಗೆದ್ದು ಹೆಜ್ಜೆ ಗುರುತು ಮೂಡಿಸಿರುವ  ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಈಗ ಏಷ್ಯನ್‌ ಕೂಟದಲ್ಲಿ ಪದಕ ಬೇಟೆಯಾಡುವತ್ತ ಚಿತ್ತ ನೆಟ್ಟಿದ್ದಾರೆ.

ಭಾನುವಾರದಿಂದ ತಂಡ ವಿಭಾಗದ ಸ್ಪರ್ಧೆಗಳು ಆರಂಭವಾಗಲಿವೆ. ಭಾರತದ ಪುರುಷರ ತಂಡ, ಮಾಲ್ಡೀವ್ಸ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ, ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಡಲಿದ್ದು, ಸೋಮವಾರ ಇಂಡೊನೇಷ್ಯಾದ ಸವಾಲು ಎದುರಿಸಬೇಕಾಗುತ್ತದೆ.

ಕಿದಂಬಿ ಶ್ರೀಕಾಂತ್, ಎಚ್‌.ಎಸ್‌.ಪ್ರಣವ್‌, ಬಿ. ಸಾಯಿ ಪ್ರಣೀತ್‌, ಸೌರಭ್‌ ವರ್ಮಾ, ಪ್ರಣವ್‌ ಜೆರ‍್ರಿ ಚೋಪ್ರಾ ಮತ್ತು ಸಾತ್ವಿಕ್ ಸಾಯಿರಾಜ್‌ ರಣಕಿರೆಡ್ಡಿ ಅವರಂತಹ ಪ್ರತಿಭಾಶಾಲಿಗಳನ್ನು ಹೊಂದಿರುವ ತಂಡಕ್ಕೆ ಮಾಲ್ಡೀವ್ಸ್‌ ಸುಲಭ ತುತ್ತಾಗುವ ಸಂಭವ ಇದೆ. ಆದರೆ ಆತಿಥೇಯ ಇಂಡೊನೇಷ್ಯಾ ಎದುರು ಗೆಲುವು ಪಡೆಯುವುದು  ಸುಲಭವಲ್ಲ.

ಸೋಮವಾರ ನಿಗದಿಯಾಗಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಮಹಿಳಾ ತಂಡ ಬಲಿಷ್ಠ ಜಪಾನ್‌ ಎದುರು ಪೈಪೋಟಿ ನಡೆಸಲಿದೆ. ಈ ಪಂದ್ಯದಲ್ಲಿ ಸಿಂಧು ಮತ್ತು ಸೈನಾ  ಜಪಾನ್‌ ತಂಡದ ಅಕಾನೆ ಯಮಗುಚಿ ಮತ್ತು ನೊಜೊಮಿ ಒಕುಹರಾ ಅವರ ವಿರುದ್ಧ ಹೇಗೆ ಆಡಲಿದ್ದಾರೆ ಎಂಬ ಕುತೂಹಲ ಈಗ ಗರಿಗೆದರಿದೆ.

ಡಬಲ್ಸ್‌ನಲ್ಲೂ ಜಪಾನ್‌ ತಂಡ ಬಲಿಷ್ಠವಾಗಿದೆ. ಮಿಸಾಕಿ ಮತ್ಸುತೊಮೊ ಮತ್ತು ಅಯಾಕ ತಕಹಶಿ, ಯೂಕಿ ಫುಕುಶಿಮಾ ಮತ್ತು ಸಯಾಕ ಹಿರೋಟಾ ಅವರನ್ನು ಭಾರತದ ಡಬಲ್ಸ್‌ ವಿಭಾಗದ ಆಟಗಾರ್ತಿಯರು ಮಣಿಸಿದರೆ ಸೆಮಿಫೈನಲ್‌ ಹಾದಿ ಸುಗಮವಾಗಲಿದೆ.

ವೈಯಕ್ತಿಕ ವಿಭಾಗದಲ್ಲಿ (ಸಿಂಗಲ್ಸ್‌) ಅಂಗಳಕ್ಕಿಳಿಯುವ ಸೈನಾ, ಸಿಂಧು, ಶ್ರೀಕಾಂತ್‌ ಅವರ ಮೇಲೂ ಅಪಾರ ನಿರೀಕ್ಷೆ ಇಡಲಾಗಿದೆ.

ಸೈನಾ ಈ ಬಾರಿಯ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಇತ್ತೀಚಿಗೆ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸಿಂಧು, ಬೆಳ್ಳಿಯ ಪದಕ ಗೆದ್ದಿದ್ದರು.

ಶ್ರೀಕಾಂತ್‌ ಅವರು ಮಹತ್ವದ ಕೂಟಗಳಲ್ಲಿ ಒಮ್ಮೆಯೂ ಫೈನಲ್‌ ಪ್ರವೇಶಿಸಿಲ್ಲ. ಈ ಬಾರಿಯ ಕಾಮನ್‌ವೆಲ್ತ್‌ನಲ್ಲಿ ಅವರು ಲೀ ಚೊಂಗ್‌ ವೀ ಎದುರು ಸೋತಿದ್ದರು. ಹೀಗಾಗಿ ಜಕಾರ್ತದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರುವುದು ಅಗತ್ಯವಾಗಿದೆ.

ಕರ್ನಾಟಕದ ಅಶ್ವಿನಿ ಪೊನ್ನಪ್ಪ ಕೂಡಾ ಕಣದಲ್ಲಿದ್ದು ಅವರು ಮಹಿಳೆಯರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಪದಕ ಜಯಿಸುವ ಚಿತ್ತ ಹರಿಸಿದ್ದಾರೆ.

*
ಜಪಾನ್‌ ತಂಡ ಬಲಿಷ್ಠವಾಗಿದೆ. ಹೀಗಾಗಿ ಕ್ವಾರ್ಟರ್‌ ಫೈನಲ್‌ನಲ್ಲಿ ಮಹಿಳಾ ತಂಡಕ್ಕೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ.
-ಪುಲ್ಲೇಲಾ ಗೋಪಿಚಂದ್‌, ಭಾರತ ತಂಡದ ಮುಖ್ಯ ಕೋಚ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !