ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹ ಹೊರಹೊಮ್ಮಿಸುವ ‘ಬಬ್ಬಲ್ಸ್’

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಬಿದರಹಳ್ಳಿ ಹೋಬಳಿಯ ಶನೇಶ್ವರ ದೇವಸ್ಥಾನದ ಹಿಂಬದಿಯಲ್ಲಿ ಪ್ಲಾಟ್‌ ನಂ. 102 ಈ ವಿಳಾಸದಲ್ಲಿರುವ ‘ಬಬ್ಬಲ್ಸ್’ ವಿಶೇಷ ಮಕ್ಕಳ ಶಾಲೆ ಆಟಿಸಂನಿಂದ ಬಳಲುವ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ 30, ಮಾರ್ಚ್ 2009ರಂದು ಸ್ಥಾಪನೆಗೊಂಡಿದೆ.

ವಿಶ್ವಗೌರಿ ಚಾರಿಟಬಲ್ ಟ್ರಸ್ಟ್ ಆಡಳಿತಕ್ಕೆ ಒಳಪಟ್ಟಿರುವ ಈ ಸಂಸ್ಥೆಯನ್ನು ಸರ್ಬಾನಿ ಮಲ್ಲಿಕ್ ಅವರು ಸ್ಥಾಪಿಸಿದ್ದಾರೆ. ಆಟಿಸಂನಿಂದ ಬಳಲುವ ಮಕ್ಕಳಿಗೆ ಸಮರ್ಪಕ ಶಿಕ್ಷಣ, ತರಬೇತಿ, ಚಿಕಿತ್ಸೆ ನೀಡುವ ಮೂಲಕ ಅವರನ್ನು ಸ್ವಾವಲಂಬಿಯಾಗಿಸಿ, ಸಮಾಜದ ಮುಖ್ಯ ವಾಹಿನಿಗೆ ಕರೆ ತರುವ ಧ್ಯೇಯವನ್ನು ಈ ಸಂಸ್ಥೆ ಹೊಂದಿದೆ.

4 ವರ್ಷ ಮೇಲ್ಪಟ್ಟ ಮಕ್ಕಳಿಗೆ ಈ ಶಾಲೆಯಲ್ಲಿ ಪ್ರವೇಶ ನೀಡಲಾಗುತ್ತದೆ. ಅದೇ ರೀತಿ 16 ವರ್ಷ ಮೇಲ್ಪಟ್ಟವರಿಗೆ ವೃತ್ತಿ ತರಬೇತಿ ವಿಭಾಗಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಆರಂಭದಲ್ಲಿ ಶಾಲೆ 5 ವಿದ್ಯಾರ್ಥಿಗಳು ಹಾಗೂ ಮೂವರು ಬೋಧಕರನ್ನು ಒಳಗೊಂಡಿತ್ತು.

ಪ್ರಸ್ತುತ ಇಲ್ಲಿ 40 ವಿದ್ಯಾರ್ಥಿಗಳಿದ್ದು, 27 ಬೋಧಕರು, 10 ಚಿಕಿತ್ಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆಟಿಸಂಗೆ ಆದ್ಯತೆ ನೀಡಿದ್ದರೂ ಡೌನ್ ಸಿಂಡ್ರೋಂ, ಬುದ್ಧಿಮಾಂದ್ಯತೆ, ಕಲಿಕಾ ನ್ಯೂನತೆ ಇರುವ ಮಕ್ಕಳಿಗೂ ಇಲ್ಲಿ ಪ್ರವೇಶಾವಕಾಶವಿದೆ.

ಶಾಲೆಯಲ್ಲಿ ಎನ್.ಐ.ಎಂ.ಎಚ್ (NIMH: National Institute of Mental Health) ನಿಯಮಾವಳಿಗೆ ಅನುಗುಣವಾಗಿ ಡೀಮ್ಡ್ ಪಠ್ಯಕ್ರಮವನ್ನು ಸಿದ್ಧಪಡಿಸಿದ್ದು, ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಮಾಧ್ಯಮಿಕ, ವೃತ್ತಿಪೂರ್ವ, ವೃತ್ತಿ ತರಬೇತಿ ಎಂಬ ಐದು ಹಂತದಲ್ಲಿ ಶಿಕ್ಷಣ ಒದಗಿಸಲಾಗುತ್ತದೆ. ಪ್ರವೇಶಾತಿ ಹಂತದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಬುದ್ಧಿಮಟ್ಟ ಪರೀಕ್ಷೆ ನಡೆಸಿ, ಆಯಾ ಮಕ್ಕಳ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ, ತರಬೇತಿ ಒದಗಿಸಲಾಗುತ್ತದೆ.

ಶಾಲೆಯಲ್ಲಿ ಸುಸಜ್ಜಿತವಾದ ತರಗತಿಗಳು, ಆಪ್ತ ಸಮಾಲೋಚನಾ ಕೊಠಡಿ, ಕಚೇರಿ, ಸಿಬ್ಬಂದಿ ಕೊಠಡಿ, ಗ್ರಂಥಾಲಯ, ಕಂಪ್ಯೂಟರ್ ತರಬೇತಿ ಕೇಂದ್ರ, ಸಭಾಗೃಹ, ಆಟದ ಮೈದಾನ, ಶುದ್ಧ ಕುಡಿಯುವ ನೀರು, ಚಿಕಿತ್ಸಾ ಕೊಠಡಿ, ಶೌಚಾಲಯ ಸೌಕರ್ಯಗಳನ್ನು ಒದಗಿಸಲಾಗಿದೆ.

ಕಲಿಕೆಯಲ್ಲಿ ವಿಶೇಷ ಬೋಧನೋಪಕರಣ, ವಿಶೇಷ ಶಿಕ್ಷಣ ಕಿಟ್‌, ಮಿಂಚುಪಟ್ಟಿ, ಚಟುವಟಿಕಾ ಪಟ್ಟಿಗಳನ್ನು ಬಳಸಲಾಗುತ್ತದೆ. ಕಲಿಕೆಯಲ್ಲಿ ಸ್ಪರ್ಶಾನುಭವ, ಪ್ರತ್ಯಕ್ಷಾನುಭವಕ್ಕೆ ಆದ್ಯತೆ ನೀಡಲಾಗುತ್ತದೆ. ವೃತ್ತಿ ಶಿಕ್ಷಣದ ಭಾಗವಾಗಿ ಚಾಕ್‌ಪೀಸ್, ಕಾಗದದ ಲಕೋಟೆ, ರಾಖಿ, ಮಣ್ಣಿನ ದೀಪ, ಕಸಬರಿಗೆ, ಕರಕುಶಲ ವಸ್ತುಗಳ ತಯಾರಿಕೆ, ಪ್ರಿಂಟಿಂಗ್, ಡಿಜಿಟಲ್ ಪ್ರಿಂಟಿಂಗ್, ಹೊಲಿಗೆ, ಎಂಬ್ರಾಯಿಡರಿ, ಆಹಾರ ತಯಾರಿಕೆ, ಆತಿಥ್ಯ ವಹಿಸುವಿಕೆ... ಇತ್ಯಾದಿ ತರಬೇತಿ ನೀಡಲಾಗುತ್ತದೆ.

ನಿಯಮಿತ ಪಠ್ಯಕ್ರಮದನ್ವಯ ಔಪಚಾರಿಕ ಶಿಕ್ಷಣ ನೀಡುವುದರೊಂದಿಗೆ ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ನಿರ್ವಹಣೆ, ಶೌಚಕ್ರಿಯೆ, ಹಲ್ಲುಜ್ಜುವುದು, ಊಟ ಮಾಡುವುದು, ಬಟ್ಟೆ ಧರಿಸುವುದು, ಶೂ ಧರಿಸುವುದು... ಇತ್ಯಾದಿ ಜೀವನ ಕೌಶಲಗಳ ತರಬೇತಿಯನ್ನೂ ಇಲ್ಲಿ ನೀಡಲಾಗುತ್ತದೆ. ಪೋಷಕರ ಜತೆ ನಿಯಮಿತವಾಗಿ ಸಮಾಲೋಚನೆ ನಡೆಸಿ ಮಕ್ಕಳ ಕಲಿಕೆ, ವಿಕಾಸ, ಸಮಸ್ಯೆ, ನ್ಯೂನತೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಶಾಲಾ ಚಟುವಟಿಕೆಗಳಲ್ಲಿ ಪೋಷಕರನ್ನೂ ತೊಡಗಿಸಿಕೊಂಡು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಾಗುತ್ತದೆ.

ಆಯಾ ಮಕ್ಕಳ ಅಗತ್ಯಕ್ಕೆ ತಕ್ಕಂತೆ ಸ್ಪೀಚ್ ಥೆರಪಿ, ಫಿಜಿಯೊ ಥೆರಪಿ, ಆರ್ಟ್ ಬೇಸ್ಡ್ ಥೆರಪಿ, ಯೋಗ ಥೆರಪಿ, ಮ್ಯೂಸಿಕ್ ಥೆರಪಿ, ಥೀಯೇಟರ್ ಥೆರಪಿ, ಇಂಟೆಲೆಕ್ಚುಅಲ್ ಥೆರಪಿ, ಆಕ್ಯುಪಂಕ್ಚರ್‌ ಥೆರಪಿ, ವೈದ್ಯಕೀಯ ಚಿಕಿತ್ಸಾ ಸೌಲಭ್ಯ, ಆಪ್ತ ಸಮಾಲೋಚನೆ... ಇತ್ಯಾದಿ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ.

ಶಾಲೆಯ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಕೆನೆಡಿಯನ್ ಇಂಟರ್‌ ನ್ಯಾಶನಲ್ ಸ್ಕೂಲ್ ಸಹಯೋಗದಲ್ಲಿ ಪ್ರತಿ ವರ್ಷ ಶಾಲೆಯ ಮಕ್ಕಳಿಗೆ ರಂಗ ತರಬೇತಿ ನೀಡಲಾಗುತ್ತದೆ. ಇದರ ಭಾಗವಾಗಿ ‘ದ ಲಯನ್ ಕಿಂಗ್’ ಎಂಬ ಕಿರು ನಾಟಕವನ್ನು ಶಾಲೆಯ ಮಕ್ಕಳು ಹಲವು ವೇದಿಕೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ.

ಶಾಲೆಯ ವಿದ್ಯಾರ್ಥಿ ಅದ್ವೈತ್ ರೋಲರ್ ಸ್ಕೇಟಿಂಗ್‌ನ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 2 ಚಿನ್ನ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ರಶೆಲ್ ಜೋನಾನ್ ರಾಷ್ಟ್ರಮಟ್ಟದ ವಿಶೇಷ ಮ್ಕಕಳ ಕ್ರೀಡಾಕೂಟದ ಸ್ಕೇಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಾಲೆ 2017ರಲ್ಲಿ ‘ಬೆಂಗಳೂರು ಎನ್‌ಜಿಒ ಲೀಡರ್‌ಶಿಪ್’ ಪ್ರಶಸ್ತಿಗೆ ಪಾತ್ರವಾಗಿದೆ.

ಶಾಲೆಯಲ್ಲಿ ಪ್ರವೇಶ, ನೆರವು, ಮತ್ತಿತರ ಮಾಹಿತಿಗೆ ದೂ: 080–28465336, ಮೊ: 88618 71241 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT