ಏಷ್ಯನ್‌ ಕ್ರೀಡಾಕೂಟಕ್ಕೆ ರಾಜು

7
36 ವರ್ಷಗಳ ಬಳಿಕ ರಾಜ್ಯದ ಸೈಕ್ಲಿಸ್ಟ್‌ಗೆ ಸ್ಥಾನ; ಬಡತನದಲ್ಲಿ ಅರಳಿದ ಪ್ರತಿಭೆ

ಏಷ್ಯನ್‌ ಕ್ರೀಡಾಕೂಟಕ್ಕೆ ರಾಜು

Published:
Updated:
Deccan Herald

ಹುಬ್ಬಳ್ಳಿ: ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪದಕಗಳನ್ನು ಗೆದ್ದಿರುವ ಕರ್ನಾಟಕದ ಸೈಕ್ಲಿಸ್ಟ್‌ ರಾಜು ಭಾಟಿ ಮೊದಲ ಬಾರಿಗೆ ಏಷ್ಯನ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಆ.18ರಿಂದ ಸೆ.2ರ ವರೆಗೆ ಇಂಡೊನೇಷ್ಯಾದ ಜಕಾರ್ತದಲ್ಲಿ ಏಷ್ಯನ್‌ ಕ್ರೀಡಾಕೂಟ ನಡೆಯಲಿದೆ. ಸೈಕ್ಲಿಂಗ್‌ ಸ್ಪರ್ಧೆಗಳು ಆ.27ರಂದು ಆರಂಭವಾಗಲಿವೆ.

ಪ್ರತಿಷ್ಠಿತ ಈ ಕೂಟಕ್ಕೆ ರಾಜ್ಯದ ಸೈಕ್ಲಿಸ್ಟ್‌ವೊಬ್ಬರು ಆಯ್ಕೆಯಾಗಿದ್ದು 36 ವರ್ಷಗಳ ಬಳಿಕ ಇದೇ ಮೊದಲು. 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಂದ್ರಪ್ಪ ಮಲ್ಲಪ್ಪ ಕುರಣಿ ಅರ್ಹತೆ ಪಡೆದು
ಕೊಂಡಿದ್ದರು.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಟಕ್ಕಳಕಿ ಗ್ರಾಮದ ರಾಜು ಭಾಟಿ ಸೀನಿಯರ್‌ ವಿಭಾಗದ ಟೀಮ್‌ ಪರ್ಸ್ಯೂಟ್‌ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷ ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು.

ದೆಹಲಿಯಲ್ಲಿ 2017ರಲ್ಲಿ ನಡೆದ ಏಷ್ಯಾ ಕಪ್‌ ಟೂರ್ನಿಯ ವೈಯಕ್ತಿಕ ಪರ್ಸ್ಯೂಟ್‌ ವಿಭಾಗದಲ್ಲಿ ಚಿನ್ನ, ತಂಡ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಜೂನಿಯರ್‌ ವಿಭಾಗದ ವೈಯಕ್ತಿಕ ಪರ್ಸ್ಯೂಟ್‌ ಸ್ಪರ್ಧೆಯ ಮೂರು ಕಿ.ಮೀ. ದೂರದ ಗುರಿಯನ್ನು ಮೂರು ನಿಮಿಷ 43 ಸೆಕೆಂಡುಗಳಲ್ಲಿ ತಲುಪಿ ರಾಷ್ಟ್ರೀಯ ದಾಖಲೆಯನ್ನೂ ಅವರು ನಿರ್ಮಿಸಿದ್ದಾರೆ.

ಬೀಳಗಿ ಬಳಿಯ ಸರ್‌. ಎಂ. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ರಾಜು ಬಡತನದಲ್ಲಿ ಅರಳಿದ ಪ್ರತಿಭೆ.

ಬಾಲ್ಯದಲ್ಲಿ ತಂದೆಯನ್ನು ಕಳೆದು ಕೊಂಡ ಅವರಿಗೆ ತಾಯಿ ಸರೋಜಾ ಭಾಟಿ, ಅಜ್ಜ ಕಲ್ಲಪ್ಪ ಭಾಟಿ, ಸಂಬಂಧಿ ಬಸವರಾಜ ಭಾಟಿ ಮತ್ತು ರೈಲ್ವೆ ಕೋಚ್‌ ವಿಜಯಸಿಂಗ್‌ ರಜಪೂತ್‌ ನೆರವಾದರು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ನಾಲ್ಕು ಚಿನ್ನ, ಎರಡು ಬೆಳ್ಳಿ ಹಾಗೂ ಮೂರು ಕಂಚು ಜಯಿಸಿದ್ದಾರೆ. ಸೀನಿಯರ್‌ ವಿಭಾಗದಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

‘ಕುಟುಂಬದವರು ಮತ್ತು ಶ್ರೀಶೈಲ ಕುರಣಿ ಸರ್‌ ನೆರವು ಇಲ್ಲದಿದ್ದರೆ ಹುಟ್ಟಿದ ಊರು ಬಿಟ್ಟು ಬರಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಎಲ್ಲರ ನೆರವಿನಿಂದ ಏಷ್ಯನ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಲು ಸಾಧ್ಯವಾಯಿತು. ಮೊದಲ ಬಾರಿಗೆ ಸಿಕ್ಕ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇನೆ’ ಎಂದು ರಾಜು ಹೇಳಿದರು. ನಿತ್ಯ ಒಂಬತ್ತು ಗಂಟೆ ಅಭ್ಯಾಸ: ಏಷ್ಯನ್‌ ಕ್ರೀಡಾಕೂಟಕ್ಕೆ ಭಾರತ ಸೈಕ್ಲಿಂಗ್‌ ತಂಡದ ಆಯ್ಕೆಗೆ ಪಟಿಯಾಲದಲ್ಲಿ ಟ್ರಯಲ್ಸ್‌ ನಡೆದಿತ್ತು. ನಾಲ್ಕು ಕಿ.ಮೀ. ಸೈಕಲ್‌ ಓಡಿಸುವ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದರಿಂದ ರಾಜುಗೆ ಈಗ ದೇಶ ಪ್ರತಿನಿಧಿಸುವ ಅವಕಾಶ ಲಭಿಸಿದೆ. ಭಾರತ ತಂಡದವರು ಈಗ ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಿತ್ಯ ಒಂಬತ್ತು ತಾಸು ಅಭ್ಯಾಸ ನಡೆಸುತ್ತಿದ್ದಾರೆ.

‘ಬೆಳಿಗ್ಗೆ ಐದು ಗಂಟೆ ಮತ್ತು ಸಂಜೆ ನಾಲ್ಕು ತಾಸು ಅಭ್ಯಾಸ ಮಾಡುತ್ತೇನೆ. ಉಳಿದ ಸಮಯದಲ್ಲಿ ಫಿಟ್‌ನೆಸ್‌ಗೆ ಒತ್ತು ಕೊಡುತ್ತೇವೆ. ಜಕಾರ್ತದ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಸ್ಪರ್ಧೆ ಆರಂಭದ ಏಳು ದಿನಗಳ ಮೊದಲೇ ಅಲ್ಲಿಗೆ ತೆರಳುತ್ತಿದ್ದೇವೆ’ ಎಂದು ರಾಜು ತಿಳಿಸಿದರು.

 *
36 ವರ್ಷಗಳ ಬಳಿಕ ರಾಜ್ಯದ ಸೈಕ್ಲಿಸ್ಟ್‌ ಏಷ್ಯನ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಮುಂದಿನ ಕೂಟದ ವೇಳೆಗೆ ರಾಜ್ಯದ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗಲಿ.
-ಶ್ರೀಶೈಲ ಎಂ. ಕುರಣಿ, ಗೌರವ ಕಾರ್ಯದರ್ಶಿ, ರಾಜ್ಯ ಸೈಕ್ಲಿಂಗ್‌ ಸಂಸ್ಥೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !