ಕ್ರೀಡೆಯ ಗಮ್ಮತ್ತು; ಏಷ್ಯಾದ ತಾಕತ್ತು

7
ಭಾರತದ ಯುವ, ಅನುಭವಿ ಕ್ರೀಡಾಪಟುಗಳಿಗೆ ಅಗ್ನಿಪರೀಕ್ಷೆಯ ಕ್ರೀಡಾಕೂಟ

ಕ್ರೀಡೆಯ ಗಮ್ಮತ್ತು; ಏಷ್ಯಾದ ತಾಕತ್ತು

Published:
Updated:
Deccan Herald

ಜಕಾರ್ತ: ಏಷ್ಯಾದ ತಾಕತ್ತು ಎಂಬ ಘೋಷಣೆಯೊಂದಿಗೆ ನಡೆಯಲಿರುವ ಏಷ್ಯನ್ ಕ್ರೀಡಾಕೂಟ ಶನಿವಾರ ಇಲ್ಲಿ ಆರಂಭವಾಗಲಿದೆ. ಮೊದಲ ದಿನ ಉದ್ಘಾಟನಾ ಸಮಾರಂಭಕ್ಕೆ ಮಾತ್ರ ಸೀಮಿತಗೊಂಡಿದ್ದು ಭಾನುವಾರ ಬೆಳಿಗ್ಗೆ ಸ್ಪರ್ಧೆಗಳು ಆರಂಭವಾಗಲಿವೆ.

ಏಷ್ಯಾದ ಕ್ರೀಡಾಶಕ್ತಿಯಾದ ಭಾರತದ ಯುವ ಮತ್ತು ಅನುಭವಿ ಅಥ್ಲೀಟ್‌ಗಳಿಗೆ ಈ ಕೂಟ ಅಗ್ನಿಪರೀಕ್ಷೆ ಆಗಲಿದೆ. ಕಾಮನ್‌ವೆಲ್ತ್ ಕೂಟದಲ್ಲಿ ಉತ್ತಮ ಸಾಧನೆ ಮಾಡಿರುವುದರಿಂದ ಇಲ್ಲೂ ಆ ಲಯವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಭಾರತ ಇದೆ. ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನ, ಅಥ್ಲೀಟ್‌ಗಳು ಮತ್ತು ಅಧಿಕಾರಿಗಳ ಸಂಖ್ಯೆಯ ಬಗ್ಗೆ ಉಂಟಾದ ವಿವಾದ, ಕೋಚ್‌ಗಳನ್ನು ನೇಮಕ ಮಾಡದೇ ಇರುವುದರ ಕುರಿತ ಬೇಸರ ಇತ್ಯಾದಿಗಳು ಭಾರತ ತಂಡದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಆದರೂ ಅಥ್ಲೀಟ್‌ಗಳ ಮೇಲೆ ಭರವಸೆ ಇರಿಸಲಾಗಿದೆ. ಈ ಹಿಂದೆಯೂ ಸವಾಲುಗಳನ್ನು ಮೆಟ್ಟಿ ನಿಂತು ಭಾರತದ ಕ್ರೀಡಾಪಟುಗಳು ಏಷ್ಯನ್ ಕ್ರೀಡಾಕೂಟದಲ್ಲಿ ಸಾಧನೆ ಮೆರೆದಿದ್ದಾರೆ. ಈ ಬಾರಿಯೂ ಕೂಟ ಆರಂಭಗೊಂಡ ನಂತರ ಎಲ್ಲವನ್ನೂ ಮರೆತು ಪದಕಗಳನ್ನು ಗೆಲ್ಲುವತ್ತ ಚಿತ್ತ ನೆಡಲಿದ್ದಾರೆ ಎಂಬ ವಿಶ್ವಾಸವಿದೆ. ಚೀನಾ, ಜಪಾನ್ ಮತ್ತು ಕೊರಿಯಾದಿಂದ ಭಾರತ ಪ್ರಬಲ ಪೈಪೋಟಿ ಎದುರಿಸಲಿದ್ದು ಅದರಲ್ಲಿ ಯಶಸ್ಸು ಗಳಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಕ್ರೀಡಾಪಟುಗಳು ಮತ್ತು ಕೋಚ್‌ಗಳು.

ಕಳೆದ ಬಾರಿ ಭಾರತ 11 ಚಿನ್ನದೊಂದಿಗೆ ಒಟ್ಟು 57 ಪದಕಗಳನ್ನು ಗೆದ್ದಿತ್ತು. ಈ ಬಾರಿ ಸಾಧನೆಯನ್ನು ಇನ್ನಷ್ಟು ಹೆಚ್ಚಸಲು ಶ್ರಮಿಸಲಿದೆ. ಹರಿಯಾಣದ ಶೂಟರ್‌, 16 ವರ್ಷ ವಯಸ್ಸಿನ ಮನು ಭಾಕರ್‌ ಒಳಗೊಂಡಂತೆ ಹೆಸರಾಂತ ಕ್ರೀಡಾಪಟುಗಳು ಕೂಟದಲ್ಲಿ ಸಾಮರ್ಥ್ಯ ಪಣಕ್ಕಿಡಲಿದ್ದಾರೆ.

ನೀರಜ್‌, ಹಿಮಾ ಮೇಲೆ ಭರವಸೆ
ಜಾವೆಲಿನ್ ಥ್ರೋದಲ್ಲಿ ನೀರಜ್ ಕುಮಾರ್‌ ಅವರು ಸಾಧನೆಯ ಶಿಖರವೇರುವ ವಿಶ್ವಾಸ ಇದೆ. ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಕ್ರೀಡಾಪಟು ಎಂಬ ಖ್ಯಾತಿ ಗಳಿಸಿದ ಹಿಮಾ ದಾಸ್ ಕೂಡ ಭರವಸೆ ಮೂಡಿಸಿದ್ದಾರೆ. ಆದರೆ ಕುಸ್ತಿಪಟು ಸುಶೀಲ್ ಕುಮಾರ್‌ ಇತ್ತೀಚೆಗೆ ಕಳಪೆ ಸಾಮರ್ಥ್ಯ ತೋರುತ್ತಿರುವುದರಿಂದ ಆತಂಕದಲ್ಲಿದ್ದಾರೆ. ಏಷ್ಯನ್ ಕ್ರೀಡಾಕೂಟದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತ ಈ ವರೆಗೂ ಪಾರಮ್ಯ ಮೆರೆದಿದೆ. 74 ಚಿನ್ನದ ಪದಕಗಳು ಸೇರಿದಂತೆ 282 ಪದಕಗಳು ಭಾರತದ ಮಡಿಲು ಸೇರಿವೆ.

ಬ್ಯಾಡ್ಮಿಂಟನ್‌ ಅಂಗಣದಲ್ಲಿ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಅವರನ್ನು ಒಳಗೊಂಡ ಭಾರತದ ಆಟಗಾರರು ಚೀನಾ, ಥಾಯ್ಲೆಂಡ್ ಮತ್ತು ಜಪಾನ್‌ ಆಟಗಾರರಿಂದ ಭಾರಿ ಪೈಪೋಟಿ ಎದುರಿಸಲಿದ್ದಾರೆ.

ಕುಸ್ತಿಯಲ್ಲೂ ಬಜರಂಗ್ ಪೂನಿಯಾ ಮತ್ತು ವಿನೇಶ ಪೋಗಟ್‌ ಅವರು ಪಕದಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಸುಶೀಲ್ ಕುಮಾರ್‌ ಮತ್ತು ಸಾಕ್ಷಿ ಮಲಿಕ್‌ ಇತ್ತೀಚೆಗೆ ಕಳಪೆ ಸಾಮರ್ಥ್ಯ ತೋರುತ್ತಿರುವುದರಿಂದ ಆತಂಕದಲ್ಲಿದ್ದಾರೆ.

ಬಾಕ್ಸಿಂಗ್‌ನಲ್ಲಿ ವಿಕಾಸ್ ಕೃಷ್ಣ, ಶಿವ ಥಾಪ, ಗೌರವ್‌ ಸೋಲಂಕಿ, ಸರ್ಜುಬಾಲ ದೇವಿ ಮುಂತಾದವರು ಪದಕದ ಭರವಸೆ ಮೂಡಿಸಿದ್ದು ಟೇಬಲ್‌ ಟೆನಿಸ್‌ನಲ್ಲಿ ಮಣಿಕಾ ಭಾತ್ರಾ, ಅಚಂತ ಶರತ್ ಕಮಲ್‌ ಅವರು ವಿಶ್ವಾಸದಲ್ಲಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ದೀಪಾ ಕರ್ಮಾಕರ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ನಿರಾಸೆ ಮೂಡಿಸಿದ ಪೇಸ್‌
ಸಮರ್ಪಕ ಜೋಡಿ ಸಿಗಲಿಲ್ಲ ಎಂದು ಬೇಸರಗೊಂಡು ಲಿಯಾಂಡರ್ ಪೇಸ್‌ ಹಿಂದೆ ಸರಿದ ಕಾರಣ ಟೆನಿಸ್‌ನಲ್ಲಿ ಭಾರತ ಕಣಕ್ಕೆ ಇಳಿಯುವ ಮೊದಲೇ ನಿರಾಸೆಗೆ ಒಳಗಾಗಿದೆ.

ಒಲಿಂಪಿಕ್ಸ್‌ಗೆ ನೇರ ಪ್ರವೇಶದ ಕನಸು
ಭಾರತದ ಪುರುಷರ ಹಾಕಿ ತಂಡದವರು ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಗಿಟ್ಟಿಸುವ ಕನಸಿನೊಂದಿಗೆ ಕಣಕ್ಕೆ ಇಳಿಯಲಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಭಾರತಕ್ಕೆ ಏಷ್ಯನ್ ಕೂಟದಲ್ಲಿ ಕಠಿಣ ಸವಾಲು ಒಡ್ಡುವ ತಂಡಗಳು ಇಲ್ಲ. ಹೀಗಾಗಿ ಪಿ.ಜೆ.ಶ್ರೀಜೇಶ್‌ ಬಳಗ ಚಿನ್ನ ಗೆದ್ದುಕೊಂಡೇ ಬರುವ ಭರವಸೆಯಲ್ಲಿದೆ.

ಮಹಿಳೆಯರ ತಂಡ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ನಲ್ಲಿ ಎಡವಿತ್ತು. ಆದರೆ ಏಷ್ಯನ್‌ ಕೂಟದಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆಯಲ್ಲಿದೆ. ಕಳೆದ ಬಾರಿ ಭಾರತ ಕಂಚು ಗೆದ್ದಿತ್ತು.

ಬ್ಯಾಡ್ಮಿಂಟನ್‌: ಭಾರತಕ್ಕೆ ಕಠಿಣ ಸವಾಲು
ಜಕಾರ್ತ:
ಭಾರತದ ಮಹಿಳಾ ಬ್ಯಾಡ್ಮಿಂಟನ್ ತಂಡ ಏಷ್ಯನ್‌ ಕ್ರೀಡಾಕೂಟದಲ್ಲಿ ಕಠಿಣ ಸವಾಲು ಎದುರಿಸಬೇಕಾಗಿದೆ. ಕಳೆದ ಬಾರಿ ಕಂಚಿನ ಪದಕ ಗೆದ್ದಿರುವ ಭಾರತ ತಂಡ ಈ ಬಾರಿ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಜಪಾನ್ ಎದುರು ಸೆಣಸಲಿದೆ. ಹಾಂಕಾಂಗ್‌ ಮತ್ತು ಕೊರಿಯಾ ಗುಂಪಿನಲ್ಲಿರುವ ಇತರ ತಂಡಗಳು. ಚೀನಾ, ಥಾಯ್ಲೆಂಡ್‌ ಮತ್ತು ಚೀನಾ ತೈಪೆ ಮತ್ತೊಂದು ಗುಂಪಿನಲ್ಲಿ ಸ್ಥಾನ ಗಳಿಸಿವೆ.

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !