ಭಾರತ ತಂಡದಲ್ಲಿ ಸ್ಥಿರ ಸ್ಥಾನದ ಬಯಕೆ

7

ಭಾರತ ತಂಡದಲ್ಲಿ ಸ್ಥಿರ ಸ್ಥಾನದ ಬಯಕೆ

Published:
Updated:
Deccan Herald

* ಬ್ಯಾಸ್ಕೆಟ್‌ಬಾಲ್ ಬಗ್ಗೆ ಆಸಕ್ತಿ ಬೆಳೆಯಲು ಹಿನ್ನೆಲೆ ಏನಾದರೂ ಇದೆಯೇ? ಇದ್ದರೆ ವಿವರಿಸುವಿರಾ...?
ತಂದೆ ಪ್ರಭಾಕರ್‌ ವಿದೇಶದಲ್ಲಿದ್ದಾರೆ. ತಾಯಿ ಗೀತಾಂಜಲಿ ಅಥ್ಲೀಟ್ ಆಗಿದ್ದರು. ಅವರ ನೆರಳಿನಲ್ಲಿ ಬೆಳೆದ ನನಗೆ ಕ್ರೀಡೆಯಲ್ಲಿ ಸಣ್ಣಂದಿನಿಂದಲೇ ಆಸಕ್ತಿ ಬೆಳೆದಿತ್ತು. ಹೈ ಜಂಪ್‌ನಲ್ಲಿ ಭಾಗವಹಿಸುತ್ತಿದ್ದೆ. ಮೈಸೂರಿನಲ್ಲಿ ನನ್ನನ್ನು ಗುರುತಿಸಿದ ಸತ್ಯನಾರಾಯಣ ಅವರು ನನ್ನ ಎತ್ತರ ಕಂಡು ಬ್ಯಾಸ್ಕೆಟ್‌ಬಾಲ್‌ಗೆ ಸೇರುವಂತೆ ಸೂಚಿಸಿದರು.‌

* ಬೆಂಗಳೂರಿಗೆ ಬಂದ ಬಗೆ ಹೇಗೆ?
ಸತ್ಯನಾರಾಯಣ ಅವರ ಸಲಹೆ ಮೇರೆಗೆ ಬೆಂಗಳೂರಿನ ವಿದ್ಯಾನಗರ ಕ್ರೀಡಾಶಾಲೆಯಲ್ಲಿ ಆಯ್ಕೆ ಶಿಬಿರಕ್ಕೆ ಹಾಜರಾದೆ. ಸುಲಭವಾಗಿ ಆಯ್ಕೆಯಾದೆ. ನಂತರ ಇಲ್ಲೇ ನೆಲೆ ಕಂಡುಕೊಂಡೆ.

* ಚೆನ್ನೈನಲ್ಲಿ ಜನವರಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಅನುಭವದ ಬಗ್ಗೆ ಹೇಳುವಿರಾ...?
ಅದು ನಾನು ಕಂಡಂತೆ ರಾಜ್ಯ ತಂಡ ಆಡಿದ ಮಹತ್ವದ ಟೂರ್ನಿಯಾಗಿತ್ತು. ಬಲಿಷ್ಠ ಛತ್ತೀಸ್‌ಗಡದಂಥ ತಂಡವನ್ನು ಭಾರಿ ಅಂತರದಿಂದ ಸೋಲಿಸಲು ನಮಗೆ ಸಾಧ್ಯವಾಯಿತು. ಕೇರಳ ತಂಡವನ್ನು ಕೂಡ ಮಣಿಸಲು ಸಾಧ್ಯವಾಗಿತ್ತು. ಸೆಮಿಫೈನಲ್‌ನಲ್ಲಿ ಕೇವಲ ಒಂದು ಪಾಯಿಂಟ್ ಅಂತರದಿಂದ ಸೋತಿದ್ದೆವು.

* ರಾಜ್ಯದಲ್ಲಿ ಇತ್ತೀಚೆಗೆ ಬ್ಯಾಸ್ಕೆಟ್‌ಬಾಲ್ ಕ್ರೀಡೆ ಉತ್ತಮ ಬೆಳವಣಿಗೆ ಕಾಣುತ್ತಿದೆ. ಇಂಥ ರಾಜ್ಯದ ತಂಡದಲ್ಲಿ ಆಡುವಾಗ ಏನನಿಸುತ್ತದೆ?
ಇಲ್ಲಿ ಆಡಲು ಅವಕಾಶ ಸಿಗುತ್ತಿರುವುದು ನನ್ನ ಪುಣ್ಯ. ಬಾಂಧವ್ಯ, ಸಂಜನಾ ಮುಂತಾದ ಅನುಭವಿ ಆಟಗಾರ್ತಿಯರು ಉತ್ತಮ ಸಲಹೆ ನೀಡುತ್ತಿದ್ದಾರೆ. ಕೋಚ್‌ ಸತ್ಯನಾರಾಯಣ ಅವರಂತೂ ಕ್ರೀಡೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ರಾಜ್ಯ ಸಂಸ್ಥೆಯಿಂದ ನಿರೀಕ್ಷೆಗೂ ಮೀರಿದ ಸಹಕಾರ ಸಿಗುತ್ತಿದೆ.

* ಜೂನಿಯರ್ ಹಂತದಲ್ಲಿದ್ದಾಗಲೇ ಸೀನಿಯರ್ ವಿಭಾಗದಲ್ಲಿ ಆಡುತ್ತಿದ್ದಿರಿ. ಆಗ ಲಭಿಸಿದ ಅನುಭವ ಹೇಗಿತ್ತು?
ಆ ಸಂದರ್ಭದಲ್ಲಿ ಹೊಸ ವಿಷಯಗಳನ್ನು ಸಾಕಷ್ಟು ಕಲಿತಿದ್ದೇನೆ. ಅನುಭವಿ ಆಟಗಾರ್ತಿಯರ ಮಾರ್ಗದರ್ಶನ ಲಭಿಸಿದ್ದರಿಂದ ಇಷ್ಟರ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಸಣ್ಣ ವಯಸ್ಸಿನಲ್ಲೇ ವಿದೇಶದ ಪ್ರಬಲ ತಂಡಗಳ ಆಟಗಾರ್ತಿಯರ ಕೌಶಲಗಳನ್ನು ಕಂಡು ಬೆಳೆಯಲು ಸಾಧ್ಯವಾಗಿದೆ.

* ಏಷ್ಯನ್ ಕ್ರೀಡಾಕೂಟದ ಬ್ಯಾಸ್ಕೆಟ್‌ಬಾಲ್‌ ತಂಡಕ್ಕೆ ಆಯ್ಕೆಯಾದಾಗ ಹೇಗನಿಸಿತು?
ಇಂಥ ಪ್ರಮುಖ ಟೂರ್ನಿಯಲ್ಲಿ ಆಡುವ ತಂಡದಲ್ಲಿ ಸ್ಥಾನ ಗಳಿಸಬಹುದು ಎಂದು ಕನಸಿನಲ್ಲೂ ನೆನೆದಿರಲಿಲ್ಲ. ತುಂಬ ಖುಷಿಯಾಯಿತು. ಆಗ ನನಗಾದ ಭಾವನೆಯನ್ನು ಮಾತಿನಲ್ಲಿ ಬಣ್ಣಿಸಲಾರೆ.

* ಏಷ್ಯನ್ ಕ್ರೀಡಾಕೂಟಕ್ಕೆ ತಯಾರಿ ಹೇಗೆ ನಡೆದಿದೆ?
ಜೂನ್‌ನಿಂದ ಅಭ್ಯಾಸ ಶಿಬಿರ ನಡೆಯುತ್ತಿದೆ. ಎಲ್ಲರೂ ಚೆನ್ನಾಗಿ ಪಳಗಿದ್ದಾರೆ. ಬಲಿಷ್ಠ ತಂಡಗಳನ್ನು ಕೂಡ ಮಣಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಹೀಗಾಗಿ ಫೈನಲ್‌ ಪ್ರವೇಶಿಸುವ ಭರವಸೆ ಇದೆ.

* ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯಲ್ಲಿ ಮುಂದಿನ ಗುರಿ ಏನು?
ಅಂತರರಾಷ್ಟ್ರೀಯ ಮಟ್ಟದ ಮಹತ್ವದ ಟೂರ್ನಿಗಳಲ್ಲಿ ಆಡುತ್ತಲೇ ಇರಬೇಕು, ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕು.

***

ಪ್ರಿಯಾಂಕ ವೈಯಕ್ತಿಕ ಬದುಕು

ಎತ್ತರ ಮತ್ತು ಚುರುಕುತನವೇ ವರವಾಗಿರುವ ಪ್ರಿಯಾಂಕ ಜನಿಸಿದ್ದು ಮತ್ತು ಬೆಳೆದದ್ದು ಮೈಸೂರಿನ ಗೋಕುಲದಲ್ಲಿ. ಚಿನ್ಮಯ ವಿದ್ಯಾಲಯದಲ್ಲಿ ಓದಿದ ಅವರು ಎಂಟನೇ ತರಗತಿಯಿಂದ ಬೆಂಗಳೂರಿನಲ್ಲಿದ್ದಾರೆ. ವಿದ್ಯಾನಗರದಲ್ಲಿರುವ ಡಿವೈಇಎಸ್‌ನಲ್ಲಿ ಸತ್ಯನಾರಾಯಣ ಅವರ ಬಳಿ ತರಬೇತಿ ಪಡೆಯುತ್ತಿರುವ ಅವರು ಜೂನಿಯರ್ ವಿಭಾಗದಲ್ಲಿ ಮಾಡಿರುವ ಸಾಧನೆ ಅಪಾರ. ಪ್ರತಿಷ್ಠಿತ ಎಂ.ಬಿ.ಎ ಆಲ್‌ ಸ್ಟಾರ್ ಶಿಬಿರಕ್ಕೆ ಕಳೆದ ವರ್ಷ ಆಯ್ಕೆಯಾದ ಏಕೈಕ ಕನ್ನಡತಿಯಾಗಿದ್ದರು ಅವರು. ಆರು ವರ್ಷಗಳಿಂದ ಡಿವೈಇಎಸ್ ತಂಡದ ನಾಯಕಿಯಾಗಿರುವ ಪ್ರಿಯಾಂಕ ಸಂಸ್ಥೆಗೆ ಮತ್ತು ರಾಜ್ಯಕ್ಕೆ ಹತ್ತಾರು ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಸೀನಿಯರ್ ವಿಭಾಗಕ್ಕೆ ‘ಬಡ್ತಿ’ ಪಡೆದ ನಂತರ ವಿಲಿಯಮ್ಸನ್ ಕಪ್‌ ಟೂರ್ನಿಯಲ್ಲಿ ಆಡಿದ ಅವರಿಗೆ ಏಷ್ಯನ್‌ ಕ್ರೀಡಾಕೂಟದ ಬಗ್ಗೆ ನೂರಾರು ಕನಸುಗಳಿವೆ.

ಅತ್ಯುತ್ತಮ ಶೂಟರ್ ಆಗಿರುವ ಪ್ರಿಯಾಂಕ ಡ್ರೈವ್ ಆ್ಯಂಡ್‌ ಶೂಟ್‌ನಲ್ಲೂ ಪಳಗಿದ್ದಾರೆ. ಅವರು ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ಗೆ ದೊಡ್ಡ ಆಸ್ತಿಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ ಎನ್ನುತ್ತಾರೆ ಸತ್ಯನಾರಾಯಣ.


ಏಷ್ಯನ್‌ ಗೇಮ್ಸ್‌ ಬ್ಯಾಸ್ಕೆಟ್‌ ಬಾಲ್‌ ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಪ್ರಿಯಾಂಕ -ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !