ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸತತ ಪ್ರಯತ್ನಶೀಲರಿಗೆ ಭಗೀರಥರೇ ಗುರು’

ಜಿಲ್ಲಾ ವ್ಯಾಪ್ತಿಯಲ್ಲಿ ಮಹರ್ಷಿ ಭಗೀರಥ ಜಯಂತಿ ಆಚರಣೆ; ಹಲವೆಡೆ ಉಪನ್ಯಾಸ ಕಾರ್ಯಕ್ರಮ
Last Updated 23 ಏಪ್ರಿಲ್ 2018, 6:00 IST
ಅಕ್ಷರ ಗಾತ್ರ

ಬೆಳಗಾವಿ: ‘ಸತತ ಪ್ರಯತ್ನಶೀಲರಿಗೆ ಮಹರ್ಷಿ ಭಗೀರಥರೇ ಗುರುಗಳು. ಅವರ ತತ್ವ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳ ಆಶ್ರಯದಲ್ಲಿ ಭಾನುವಾರ ನಡೆದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಪೌರಾಣಿಕ, ಐತಿಹಾಸಿಕ ಸನ್ನಿವೇಶಗಳಲ್ಲಿ ರಾಜರ ಅತ್ಯಂತ ನಂಬಿಗಸ್ಥರಾಗಿ ಗುರುತಿಸಿಕೊಂಡು ಜನ ಸಾಮಾನ್ಯರೊಂದಿಗೆ ಬದುಕುವ ಮೂಲಕ ಸಮಾಜದ ಕಣ್ಣಾಗಿದ್ದವರೇ ಉಪ್ಪಾರ ಸಮಾಜದವರು. ಊರು, ಮನೆ, ಕೆರೆ, ಕಟ್ಟೆಗಳ ನಿರ್ಮಾಣದಲ್ಲಿ ನೇರವಾಗಿ ಪರಿಚಯವಾಗುವ ಈ ಸಮಾಜ ಇತರ ಉದ್ಯೋಗಗಳ ಮೂಲಕವೂ ಹೆಸರಾಗಿದ್ದಾರೆ. ಆದರೆ ಅವರ ಬಗ್ಗೆ ನಿರ್ಧಿಷ್ಟ ಅಧ್ಯಯನ, ಸಂಶೋಧನೆಗಳ ಕೊರತೆಯಿಂದ ಭಗೀರಥ ಸಮಾಜದ ಹಿನ್ನೆಲೆ ಗೌಣವಾಗಿದೆ’ ಎಂದರು.

‘ಸದಾ ಶ್ರಮಿಕರಾದ ಈ ಸಮಾಜವು ಶಿವನ ಭಕ್ತರು. ಇವರು ರಾಜಪ್ರಭುತ್ವದಲ್ಲಿ ರಾಜರ ಅತ್ಯಂತ ನಿಷ್ಠಾವಂತರಾಗಿ, ಕೆಲಸದಲ್ಲಿ ಶ್ರಮಿಕರಾಗಿ ಗುರುತಿಸಿಕೊಂಡವರು. ಇಂಥ ಕಾರಣದಿಂದಲೇ ಈ ಸಮಾಜವನ್ನು ಕೆಟಗರಿ 1 ರಲ್ಲಿ ಪರಿಗಣಿಸಲಾಗಿದೆ. 0ಆದರೆ ಇಂಥ ಸೌಲಭ್ಯಗಳನ್ನು ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಮಾಜದವರು ಪ್ರಯತ್ನಿಸಬೇಕು’ ಎಂದು ಹೇಳಿದರು.

ಸ್ವಾತಂತ್ರ ಹೋರಾಟ ಸಂದರ್ಭದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ (ದಂಡಿ ಸತ್ಯಾಗ್ರಹ) ದಲ್ಲಿ ಉಪ್ಪಾರ ಸಮಾಜದವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಅವರು ಹೇಳಿದರು.

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಉಪಾಧ್ಯಕ್ಷ ಸುರೇಶ ಲಾತೂರ ಮಾತನಾಡಿ, ‘ಉಪ್ಪಾರ ಸಮಾಜವು ಅತ್ಯಂತ ಹಿಂದುಳಿದಿದ್ದು ಸಮಾಜದ ಜನರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕರಾಗಿ ಸಬಲರಾಗಬೇಕಿದೆ’ ಎಂದು ಸಲಹೆ ನೀಡಿದರು.

ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಜಿ.ಎಸ್. ಉಪ್ಪಾರ, ಸಮಾಜದ ಉಪಾಧ್ಯಕ್ಷೆ ತೇಜಸ್ವಿನಿ ನಾಯಕವಾಡಿ, ವೈ.ಎಸ್. ಟಕೇವಾರಿ ಇತರ ಮುಖಂಡರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ್ ಕರಿಶಂಕರಿ ಸ್ವಾಗತಿಸಿದರು. ನೆಹರು ಯುವ ಕೇಂದ್ರದ ನಿವೃತ್ತ ಅಧಿಕಾರಿ ಎಸ್. ಯು. ಜಮಾದಾರ ಅವರು ನಿರೂಪಿಸಿ, ವಂದಿಸಿದರು.

ರಾಯಬಾಗ ಮಾಯಾ ಸಂಗೀತ ನೃತ್ಯ ಅಕಾಡೆಮಿಯ ರಸೂಲ್‌ ಮೋಮಿನ್‌ ಮತ್ತು ಸಂಗಡಿಗರು ಮಹರ್ಷಿ ಭಗೀರಥ ನೃತ್ಯ ರೂಪಕ ಪ್ರದರ್ಶಿಸಿದರು.

17 ಕೋಟಿ ಜನಸಂಖ್ಯೆ‌...

‘ಇತ್ತೀಚಿನ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 45 ಲಕ್ಷ ಹಾಗೂ ದೇಶದಲ್ಲಿ 17 ಕೋಟಿ ಉಪ್ಪಾರರ ಜನಸಂಖ್ಯೆ ಇದೆ. ಗಾರೆ, ಉಪವೀರರು, ಉಪ್ಪುವೀರರು, ಕಲ್ಲುಒಡಕರು, ಸಾಗರ, ಲವಣಿಗರು ಎಂಬ ಅನೇಕ ಹೆಸರುಗಳಿಂದ ಕರೆದುಕೊಳ್ಳುವ ಈ ಸಮಾಜ ಭಗೀರಥರನ್ನೇ ಗುರುವಾಗಿ ಪರಿಗಣಿಸಿದೆ. ಆದರೆ ಸಾಹಿತ್ಯ, ರಾಜಕಾರಣ ಮುಂತಾದ ಸಮಾಜದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿಲ್ಲ’ ಎಂದು ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT